ಸಿಎಂ ಜೊತೆಗೆ ಶಿವಮೊಗ್ಗ ಡಿಸಿ ವಿಡಿಯೋ ಕಾನ್ಫರೆನ್ಸ್‌, ಬಳಿಕ ದಿಢೀರ್‌ ಮೀಟಿಂಗ್‌, ಏನಂದ್ರು ಜಿಲ್ಲಾಧಿಕಾರಿ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ, ಬರ ಪರಿಸ್ಥಿತಿ ನಿರ್ವಹಣೆ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಅವರ ಜೊತೆಗೆ ಸಿಎಂ ಡಿ.ಕೆ.ಶಿವಕಮಾರ್‌ ಅವರು ವಿಡಿಯೋ ಕಾನ್ಫರೆನ್ಸ್‌ ನಡೆಸಿದರು. ಶಿವಮೊಗ್ಗದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ತುರ್ತು ಸಭೆ ನಡೆಸಿದರು.

➤ ಸುದ್ದಿಯ ಮುಂದಿನ 13 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಉದ್ಭವಿಸಿರುವ ಬರ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚಿಸಿದರು.

Shimoga-DC-Video-Conference-with-Chief-Minister

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರ ಜೊತೆಗೆ ವಿಡಿಯೋ ಸಂವಾದದ ಬಳಿಕ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿ, ಸರ್ಕಾರದ ನಿರ್ದೇಶನಗಳನ್ನು ಜಾರಿಗೊಳಿಸಲು ಅವರು ಆದೇಶಿಸಿದರು.

ಡಿಸಿ ಆದೇಶಗಳೇನು? ಇಲ್ಲಿವೆ ಪಾಯಿಂಟ್ಸ್‌

1

ಶೇ.44 ಮಳೆ ಕೊರತೆ

ಜಿಲ್ಲೆಯಲ್ಲಿ ಜೂನ್ 1 ರಿಂದ ಜುಲೈ 17 ರವರೆಗಿನ ಅವಧಿಯಲ್ಲಿ ವಾಡಿಕೆ ಮಳೆ 894.7 ಮಿ.ಮೀ ಆಗಬೇಕಿತ್ತು. ಆದರೆ ಕೇವಲ 501.5 ಮಿ.ಮೀ ನಷ್ಟು ಮಳೆಯಾಗಿದ್ದು, ಒಟ್ಟಾರೆ ಶೇ. 44 ರಷ್ಟು ಭೀಕರ ಮಳೆ ಕೊರತೆ ದಾಖಲಾಗಿದೆ.

2

ತಾಲೂಕುವಾರು ಮಳೆ ಅಭಾವ

ತಾಲ್ಲೂಕುವಾರು ಮಳೆ ಕೊರತೆ ವಿವರ: ಭದ್ರಾವತಿ ಶೇ. 54, ಸೊರಬ ಶೇ. 47, ಹೊಸನಗರ ಶೇ. 45, ಶಿಕಾರಿಪುರ ಶೇ. 38, ತೀರ್ಥಹಳ್ಳಿ ಶೇ. 36, ಶಿವಮೊಗ್ಗ ಶೇ. 26 ಹಾಗೂ ಸಾಗರ ತಾಲ್ಲೂಕಿನಲ್ಲಿ ಶೇ. 18 ರಷ್ಟು ಮಳೆಯ ಅಭಾವ ಉಂಟಾಗಿದೆ.

3

ಕುಡಿಯಲು ಮಾತ್ರ ನೀರು

ಭದ್ರಾ ಜಲಾಶಯ ಇನ್ನು ಭರ್ತಿಯಾಗದ ಕಾರಣ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದ್ದು, ಗುರಿಯ ಕೇವಲ ಶೇ. 28.09 ರಷ್ಟು ಮಾತ್ರ ಬಿತ್ತನೆಯಾಗಿದೆ. ಜಲಾಶಯದ ನೀರನ್ನು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಸಬೇಕು ಹಾಗೂ ರೈತರಿಗೆ ಪರ್ಯಾಯ ಬೆಳೆ ಬೆಳೆಯಲು ಕೃಷಿ ಇಲಾಖೆ ತಿಳಿಸಬೇಕು.

4

ಪ್ರತಿದಿನ ವರದಿ ಕಡ್ಡಾಯ

ಕೃಷಿ, ತೋಟಗಾರಿಕೆ, ಪಶುಪಾಲನೆ ಹಾಗೂ ಕಂದಾಯ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪ್ರತಿದಿನದ ಬರ ಪರಿಸ್ಥಿತಿ ಮತ್ತು ಕೈಗೊಂಡ ಕ್ರಮಗಳ ವರದಿಯನ್ನು ಕಡ್ಡಾಯವಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಪ್ರತಿ ವಾರ ತಾಲ್ಲೂಕುಗಳಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸುವುದು ಕಡ್ಡಾಯ.

5

ಹಣದ ಕೊರತೆಯಿಲ್ಲ

ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಾರದು. ವಾರಕ್ಕೊಮ್ಮೆ ಜಲಾಶಯಗಳ ನೀರಿನ ಮಟ್ಟದ ವರದಿಯನ್ನು ಸಲ್ಲಿಸಬೇಕು. ಸಮಸ್ಯೆ ಬಗೆಹರಿಸಲು ಹಣದ ಕೊರತೆಯಿಲ್ಲ. ಡಿಸಿ ಮತ್ತು ತಹಶೀಲ್ದಾರರ ಪಿ.ಡಿ ಖಾತೆಯಲ್ಲಿ ಸಾಕಷ್ಟು ಹಣ ಲಭ್ಯವಿದೆ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಪಶುಪಾಲನಾ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಸದ್ಯ ಒಂದು ವರ್ಷಕ್ಕಾಗುವಷ್ಟು ಮೇವು ಲಭ್ಯವಿದೆ.

6

ವಿಬಿ-ಜಿ ರಾಮ್‌ ಜಿ ಯೋಜನೆ

ಬರಗಾಲದ ಹಿನ್ನೆಲೆ ಜನರು ಉದ್ಯೋಗ ಹುಡುಕಿಕೊಂಡು ಬೇರೆಡೆಗೆ ಗುಳೆ ಹೋಗುವುದನ್ನು ತಡೆಗಟ್ಟಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ತಕ್ಷಣವೇ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳನ್ನು ಆರಂಭಿಸಿ ಉದ್ಯೋಗ ನೀಡಬೇಕು. ಅಂತರ್ಜಲ ವೃದ್ಧಿಗೆ ಇಂಗು ಗುಂಡಿ ಹಾಗೂ ಕೃಷಿ ಹೊಂಡಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕು.

7

ಕೇಂದ್ರ ತಂಡ ಆಗಮಿಸಲಿದೆ

ಶೀಘ್ರದಲ್ಲೇ ಬರ ಪರಿಸ್ಥಿತಿ ಅವಲೋಕನಕ್ಕಾಗಿ ಕೇಂದ್ರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡಲಿದ್ದು, ಅಧಿಕಾರಿಗಳು ಬೆಳೆ ಹಾನಿ ಹಾಗೂ ಬರದ ತೀವ್ರತೆಯ ನಿಖರವಾದ ಅಂಕಿ-ಅಂಶಗಳ ಮಾಹಿತಿಯೊಂದಿಗೆ ಸನ್ನದ್ಧರಾಗಿರಬೇಕು.

8

ಸರಿಯಾಗಿ ಪಾಠ ಬೋಧಿಸಬೇಕು

ಜಿಲ್ಲೆಯ ಯಾವುದೇ ಶಾಲೆಯಲ್ಲಿ ಶಿಕ್ಷಕರ ಕೊರತೆಯಾಗದಂತೆ ಡಿಡಿಪಿಐ ಅವರು ಕ್ರಮ ವಹಿಸಬೇಕು. ಶಿಕ್ಷಕರು ಸರಿಯಾಗಿ ಪಾಠ ಬೋಧನೆ ಮಾಡುತ್ತಿರುವ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಕರ್ತವ್ಯ ನಿರ್ಲಕ್ಷ್ಯದ ದೂರುಗಳು ಬಂದರೆ ಕಠಿಣ ಶಿಸ್ತುಕ್ರಮ ಜರುಗಿಸಲಾಗುವುದು.

“ಬರ ಪರಿಸ್ಥಿತಿಯ ನಿರ್ವಹಣೆಯಲ್ಲಿ ಜಿಲ್ಲಾಡಳಿತವು ಸಂಪೂರ್ಣ ಸನ್ನದ್ಧವಾಗಿದೆ. ಅಧಿಕಾರಿಗಳು ಸಾರ್ವಜನಿಕರ ಬಳಿಗೆ ಖುದ್ದಾಗಿ ತೆರಳಿ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಕರ್ತವ್ಯ ಲೋಪವನ್ನು ಸಹಿಸುವುದಿಲ್ಲ.” 

ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ

“ತಾಲ್ಲೂಕು ಟಾಸ್ಕ್ ಫೋರ್ಸ್ ಸಭೆಗಳಲ್ಲಿ ಗ್ರಾಮಗಳಲ್ಲಿನ ಕೆರೆಗಳು, ವಿಪತ್ತು ನಿರ್ವಹಣೆ, ಬೋರ್ ವೆಲ್ ಕೊರೆಸುವುದು, ಕುಡಿಯುವ ನೀರು ಸೇರಿದಂತೆ ಸಮಗ್ರ ವಿಷಯಗಳನ್ನು ಸುದೀರ್ಘ ಚರ್ಚೆ ನಡೆಸಿ ಕ್ರಮ ಕೈಗೊಳ್ಳಬೇಕು. ಸಭೆಯಬ್ನು ಪರಿಣಾಮಕಾರಿಯಾಗಿ ನಡೆಸಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಂಡವಾಗಿ‌ ಪಂಚಾಯ್ತಿಗಳಿಗೆ ಭೇಟಿ ನೀಡಬೇಕು. ಕ್ಷೇತ್ರ ಭೇಟಿ ಮಾಡಿ ಕ್ರಮ ವಹಿಸಬೇಕು.”

ಎನ್‌.ಹೇಮಂತ್‌, ಜಿಲ್ಲಾ ಪಂಚಾಯಿತಿ ಸಿಇಒ

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಉಪ ವಿಭಾಗಾಧಿಕಾರಿ ಸತ್ಯನಾರಾಯಣ್, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಜಿ.ಪಂ ಉಪ ಕಾರ್ಯದರ್ಶಿಗಳು, ಯೋಜನಾ ನಿರ್ದೇಶಕರು, ತಹಶಿಲ್ದಾರರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.