ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 JANUARY 2024
SHIMOGA : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭ ನಡೆಸಲಾಯಿತು. ಹಲವು ಪ್ರಮುಖ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಏನೇನೆಲ್ಲ ಚರ್ಚೆ ನಡೆಸಲಾಯಿತು?
ಕುಡಿಯುವ ನೀರು : ಮಲೆನಾಡು ಪ್ರದೇಶ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಕುಸಿತಗೊಂಡಿದೆ. ಪ್ರಸಕ್ತ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಬಹುದಾದ ಸಂಭಾವ್ಯ ಕುಡಿಯುವ ನೀರಿನ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಅಲ್ಲದೇ ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದರು.
ಮಧ್ಯಂತರ ಪರಿಹಾರ : ಜಿಲ್ಲೆಯಲ್ಲಿ 77 ಸಾವಿರ ಹೆಕ್ಟೇರ್ ಭತ್ತದ ಬೆಳೆ ಪ್ರದೇಶದಲ್ಲಿ ಶೇ.50ರಷ್ಟು ಬೆಳೆ ಹಾನಿಗೊಳಗಾಗಿದೆ. 48 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬೆಳೆ ಪ್ರದೇಶದಲ್ಲಿ ಶೇ.80ರಷ್ಟು ಬೆಳೆ ಹಾನಿಗೊಳಗಾಗಿದೆ. ಬೆಳೆ ಹಾನಿಗೊಳಗಾದ 6.86 ಲಕ್ಷ ರೈತರಿಗೆ 2 ಸಾವಿರ ರೂ. ನಂತೆ ಒಟ್ಟು 14 ಕೋಟಿ ರೂ. ಮಧ್ಯಂತರ ಪರಿಹಾರ ನೀಡಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ ತಿಳಿಸಿದರು.
ಎಲೆಚುಕ್ಕೆ ರೋಗ : ಅಡಿಕೆಗೆ ಬರದಿಂದ ಗಂಭೀರ ಪರಿಣಾಮ ಉಂಟಾಗಿಲ್ಲ. ಅದರೆ ಎಲೆಚುಕ್ಕೆ ರೋಗದಿಂದ ಬೆಳೆಗಾರರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಕರೂರು, ಬಾರಂಗಿ ಹೋಬಳಿಯಲ್ಲಿ ಈ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಉಚಿತವಾಗಿ ಔಷಧ ವಿತರಿಸಲಾಗುತ್ತಿದೆ. ಈ ಸೌಲಭ್ಯಕ್ಕಾಗಿ ದೊಡ್ಡ ಸಂಖ್ಯೆಯ ಬೆಳೆಗಾರರು ಹೆಸರು ನೋಂದಾಯಿಸಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಕಾಶ್ ತಿಳಿಸಿದರು.
ಕೋವಿಡ್, ಕೆಎಫ್‌ಡಿ : ಜಿಲ್ಲೆಯಲ್ಲಿ ಪ್ರಸ್ತುತ 9 ಕೋವಿಡ್ ಸಕ್ರಿಯ ಪ್ರಕರಣಗಳಿವೆ. 11 ಮಂದಿಯಲ್ಲಿ ಕೆಎಫ್‌ಡಿ ಪತ್ತೆಯಾಗಿದೆ. ಒಬ್ಬರು ಕೆಎಫ್‌ಡಿಗೆ ಮೃತಪಟ್ಟಿದ್ದಾರೆ. 445 ಡೆಂಘೆ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಐದು ಪ್ರಾಥಮಿಕ ಆರೋಗ್ಯ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೊರಬದಲ್ಲಿ ತಜ್ಞ ವೈದ್ಯರ ಕೊರತೆ ಇದ್ದು ಭರ್ತಿ ಮಾಡಬೇಕಿದೆ. ಜಿಲ್ಲಾ ಅಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಸ್ವಲ್ಪ ಸಮಸ್ಯೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ : ಜಿಲ್ಲೆಯಲ್ಲಿ 4.23 ಲಕ್ಷ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 3.77 ಲಕ್ಷ ಮಹಿಳೆಯರಿಗೆ ಯೋಜನೆ ತಲುಪಿದೆ. ಅರ್ಜಿ ಸಲ್ಲಿಸಿರುವ ಬಹುತೇಕರ ಬಳಿ ಬಿಪಿಎಲ್ ಕಾರ್ಡ್‌ಗಳಿವೆ. ಆದರೆ ಅವರೆಲ್ಲರು ಜಿಎಸ್‌ಟಿ ಪಾವತಿ ಮಾಡುವವರು ಎಂದು ಸಾಫ್ಟ್‌ವೇರ್‌ನಲ್ಲಿ ತೋರಿಸುತ್ತಿದೆ. ಹೀಗಾಗಿ ಅಂತಹವರು ಯೋಜನೆಯ ಪ್ರಯೋಜನದಿಂದ ವಂಚಿತವಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆ ಉಪ ನಿರ್ದೇಶಕ ಬಿ.ಹೆಚ್.ಕೃಷ್ಣಪ್ಪ ತಿಳಿಸಿದರು.
ಗ್ಯಾರಂಟಿ ಯೋಜನೆಗಳು : ಜಿಲ್ಲೆಯಲ್ಲಿ ಗೃಹ ಜ್ಯೋತಿಗೆ 4,58,868 ಫಲಾನುಭವಿಗಳು, ಗೃಹ ಲಕ್ಷ್ಮಿ ಯೋಜನೆ ಅಡಿ 3,63,806 ಮಹಿಳೆಯಗೆ ತಲಾ 2 ಸಾವಿರ ರೂ . ತಲುಪುತ್ತಿದೆ. ಶಕ್ತಿ ಯೋಜನೆಯಡಿ ಸುಮಾರು 1,63,12,000 ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಯುವನಿಧಿ ಯೋಜನೆಯಡಿ 3,745 ವಿದ್ಯಾವಂತ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿ 3,51,783 ಮಂದಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಗುಣಮಟ್ಟದ ಕಾಮಗಾರಿ : ಯೋಜನೆಗಳ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕ್ರಮ ಕೈಗೊಳ್ಳಬೇಕು. ವಿವಿಧ ಇಲಾಖೆಗಳ ಮೂಲಕ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು. ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ತಿಳಿಸಿದರು.
ಇದನ್ನೂ ಓದಿ – SHIMOGA NEWS – ಜಿಲ್ಲೆಯ ಟಾಪ್ 15 ಸುದ್ದಿಗಳು, ಎಲ್ಲೆಲ್ಲಿ? ಏನೇನಾಯ್ತು? 2 ನಿಮಿಷದಲ್ಲಿ ಕಂಪ್ಲೀಟ್ ನ್ಯೂಸ್
ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422