ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಶಿಕಾರಿಪುರ, ಸೊರಬ, ಸಾಗರದ ಕೆರೆಗಳ ಮೀನು ಕೃಷಿಗೆ (fishing tenders) ಕರೆದಿರುವ ಟೆಂಡರ್ ಅವೈಜ್ಞಾನಿಕವಾಗಿದೆ. ಸಣ್ಣ ನೀರಾವರಿ ಇಲಾಖೆ ಕೂಡಲೆ ಹೊಸದಾಗಿ ಇಲ್ಲವೆ ಮರು ಟೆಂಡರ್ ಕರೆಯಬೇಕು ಎಂದು ಮೀನು ಕೃಷಿಕ ಎಂ.ಸಿ.ಮಲ್ಲೇಶಪ್ಪ ಆಗ್ರಹಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕೆರೆ ಗುತ್ತಿಗೆದಾರರಲ್ಲ, ಮೀನು ಕೃಷಿಕರು. ಮೀನು ಹಿಡಿದು ಮಾರಾಟ ಮಾಡಿ, ಜೀವನ ನಡೆಸುತ್ತಿದ್ದೇವೆ. ಪ್ರತಿ ವರ್ಷ ಮೇ ಅಥವಾ ಜೂನ್ ವೇಳೆ ಟೆಂಡರ್ ಕರೆಯಲಾಗುತ್ತಿತ್ತು. ಇದೇ ಮೊದಲ ಬಾರಿ ಟೆಂಡರ್ ಕರೆಯುವ ಅಧಿಕಾರವನ್ನು ಸಣ್ಣ ನೀರಾವರಿ ಇಲಾಖೆಗೆ ನೀಡಲಾಗಿದೆ. ಆದರೆ ಇಲಾಖೆ ಮಾರ್ಚ್ 7ರಿಂದ ಏಪ್ರಿಲ್ 7ರ ವರೆಗೆ ಟೆಂಡರ್ ಭರ್ತಿ ಮಾಡಲು ಅರ್ಜಿ ಕರೆದಿದೆ. ಪೋರ್ಟಲ್‌ನಲ್ಲಿ ಲಾಕ್ ಆಗಿರುವುದರಿಂದ ಟೆಂಡರ್ ಅರ್ಜಿ ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ಮಳೆಗಾಲದಲ್ಲಿ ಮಾಡಬೇಕಾದ ಕೆರೆಗಳ ಹರಾಜನ್ನು ಮಾರ್ಚ್ ತಿಂಗಳಿನಲ್ಲೆ ಮಾಡಿದೆ. ಟೆಂಡರ್ ಕರೆದಿರುವ ಬಗ್ಗೆ ಯಾವುದೆ ಮಾಹಿತಿ ನೀಡಿಲ್ಲ. ದಿನಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿಲ್ಲ. ಸಂತೆ ನಡೆಯುವ ಸ್ಥಳಗಳಲ್ಲಿ ಪ್ರಚಾರ ಮಾಡಿಲ್ಲ. ಕೆಲವರಿಗೆ ಮಾತ್ರ ಟೆಂಡರ್ ಬಗ್ಗೆ ತಿಳಿಸಿ, ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ ಎಂಬ ಉತ್ತರ ನೀಡುತ್ತಿದ್ದಾರೆ. ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಮೀನು ಕೃಷಿಕರಿಗೆ ಸೂಕ್ತ ಮಾಹಿತಿ ನೀಡದೆ ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿದರು.
ಇದನ್ನೂ ಓದಿ – ಶಿವಮೊಗ್ಗದ ಬೈಪಾಸ್ ರಸ್ತೆಯ ಸೇತುವೆ ಬಳಿ ತುಂಗಾ ಹೊಳೆಗೆ ಹಾರಲು ಯತ್ನಿಸಿದ ಬಾಲಕ
ಈಗ ಕರೆದಿರುವ ಟೆಂಡರ್ ಪ್ರಕ್ರಿಯೆಯ ದಿನಾಂಕವನ್ನು ಜೂನ್‌ವರೆಗೆ ಮುಂದುವರಿಸಬೇಕು. ಇಲ್ಲವೆ ಟೆಂಡರ್ ಪ್ರಕ್ರಿಯೆ ನಿಲ್ಲಿಸಿ ಹೊಸ ಟೆಂಡರ್ ಕರೆಯಬೇಕು. ಇಲ್ಲದಿದ್ದರೆ ಮೀನುಗಾರಿಕೆ ಮತ್ತು ನೀರಾವರಿ ಇಲಾಖೆಗಳ ಎದುರು ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಾಬು ನಾಯ್ಕ, ಮಹಮದ್ ಪರ್ವೀಜ್, ಶಂಕ್ರಾನಾಯ್ಕ, ಸಮೀವುಲ್ಲಾ ಶಿವ್ಯಾನಾಯ್ಕ, ಕಬೂತರ, ಶಮೀವುಲ್ಲಾ ಖಾನ್, ಸಿಗತ್, ಅಫಲ್ ಮತ್ತಿತರರಿದ್ದರು.

About The Editor
ನಿತಿನ್ ಆರ್.ಕೈದೊಟ್ಲು














