ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 13 ಮಾರ್ಚ್ 2022
ದಶಕದಿಂದ ಮಲೆನಾಡಿಗೊಂದು ಎಫ್.ಎಂ. ರೇಡಿಯೋ ಬೇಕು ಎಂಬ ಬೇಡಿಕೆ ಇತ್ತು. ಜನರ ಬೇಡಿಕೆ ತಣಿಸುವ ಸಲುವಾಗಿ ಶಿವಮೊಗ್ಗ ರೇಡಿಯೋ ಎಫ್.ಎಂ. 90.8 ಕೊಡುಗೆಯಾಗಿ ಸಿಕ್ಕಿದೆ. ಸದ್ಯ ಎಫ್.ಎಂ.ರೇಡಿಯೋ ಟೆಸ್ಟಿಂಗ್ ಹಂತದಲ್ಲಿದೆ. ಇನ್ನೊಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡುವ ಸಾದ್ಯತೆ ಇದೆ.
ಕೊಡಚಾದ್ರಿ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ ಎಂಬ ಸರ್ಕಾರೇತರ ಸಂಸ್ಥೆ ಶಿವಮೊಗ್ಗ ರೇಡಿಯೋ ಎಫ್.ಎಂ. 90.8 ಆರಂಭಿಸಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಈ ರೇಡಿಯೋಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿವಿಧ ಕಾರ್ಯಕ್ರಮಗಳನ್ನು ಪ್ರಾಯೋಗಿಕವಾಗಿ ಪ್ರಸಾರ ಮಾಡಲಾಗುತ್ತಿದೆ.
ಎರಡು ಹೈಟೆಕ್ ಸ್ಟೂಡಿಯೋ
ನವುಲೆ ಕೃಷಿ ವಿಶ್ವವಿದ್ಯಾಲಯದ ಮುಂಭಾಗ ಇರುವ ರತ್ನಾಕರ ನಗರದಲ್ಲಿ ರೇಡಿಯೋ ಶಿವಮೊಗ್ಗವನ್ನು ಸ್ಥಾಪಿಸಲಾಗಿದೆ. ಎರಡು ಹೈಟೆಕ್ ಸ್ಟೂಡಿಯೋ, ಒಂದು ಕಂಟ್ರೋಲ್ ರೂಂ, ಡೆಸ್ಕ್ ಸ್ಥಾಪಿಸಲಾಗಿದೆ. ಹೊರಾಂಗಣದಲ್ಲಿ ಕಾರ್ಯಕ್ರಮ ರೆಕಾರ್ಡ್ ಮಾಡಲು ಹೈಟೆಕ್ ರೆಕಾರ್ಡಿಂಗ್ ಮೈಕ್’ಗಳನ್ನು ಕೂಡ ವ್ಯವಸ್ಥೆ ಮಾಡಲಾಗಿದೆ.
ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ?
ಕೆಲವು ಅನುಭವಿ ಮತ್ತು ಹಿರಿಯರು ರೇಡಿಯೋ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 13 ಮಂದಿಗೆ ತರಬೇತಿ ನೀಡಲಾಗುತ್ತಿದೆ. ಅವರಿಗೆ ಕಾರ್ಯಕ್ರಮ ನಿರೂಪಣೆ, ಸ್ಕ್ರಿಪ್ಟ್, ತಾಂತ್ರಿಕ ಕೌಶಲ್ಯ ಎಲ್ಲವನ್ನೂ ಕಲಿಸಲಾಗುತ್ತಿದೆ. ವಿಶೇಷ ಭತ್ಯೆ ಜೊತೆಗೆ ಕೆಲಸ ಕಲಿಸಿಕೊಡಲಾಗಿದ್ದು, ಉತ್ತಮ ಅಭ್ಯರ್ಥಿಗಳಿಗೆ ಉದ್ಯೋಗ ಕೊಡುವ ಭರವಸೆ ನೀಡಲಾಗಿದೆ.
ಏನೆಲ್ಲ ಕಾರ್ಯಕ್ರಮಗಳು ಪ್ರಸಾರವಾಗುತ್ತೆ?
ರೆಡಿಯೋ ಶಿವಮೊಗ್ಗ ಉಳಿದ ಎಫ್.ಎಂ.ಗಳ ಹಾಗಲ್ಲ. ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ, ಪರಿಸರ, ಕಲೆ, ಸಂಸ್ಕೃತಿ, ಸಾಹಿತ್ಯ, ಸರಕಾರಿ ಯೋಜನೆಗಳು, ರೈತರು, ಕಾರ್ಮಿಕರು, ಆಹಾರ, ಸಾವಯವ ಕೃಷಿ ಸೇರಿದಂತೆ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
ಇದು ಸಮುದಾಯ ರೇಡಿಯೋ
ರೇಡಿಯೋ ಶಿವಮೊಗ್ಗ, ಸರ್ಕಾರದ ರೇಡಿಯೋ, ಖಾಸಗಿ ಎಫ್.ಎಂ. ರೆಡಿಯೋಗಿಂತಲೂ ಭಿನ್ನ. ಇದು ಸಮುದಾಯ ರೇಡಿಯೋ. ಸೀಮಿತ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತದೆ. ಸ್ಥಳೀಯರನ್ನೆ ಬಳಸಿಕೊಂಡು ಕಾರ್ಯಕ್ರಮ ರೂಪಿಸುವುದು ಇದರ ವಿಶೇಷ. 30 ರಿಂದ 40 ಕಿ.ಮೀ ವ್ಯಾಪ್ತಿಯಲ್ಲಿ ಇದರ ಕಾರ್ಯಾಚರಣೆ ಇರುತ್ತದೆ. ಗುಡ್ಡಗಾಡುಗಳಲ್ಲಿ ಸಿಗ್ನಲ್ ವ್ಯಾಪ್ತಿ ಕಡಿಮೆ ಇರುತ್ತದೆ. ಪ್ರಸ್ತುತ 50 ಗಿಗಾ ಹರ್ಟ್ಸ್ ಸಾಮರ್ಥ್ಯದಲ್ಲಿ ಕೆಲಸ ಆರಂಭಿಸಿದೆ.
ಜಗತ್ತಿನಾದ್ಯಂತ ತಲುಪಲು ಯತ್ನ
ರೇಡಿಯೋ ಶಿವಮೊಗ್ಗ ಎಫ್.ಎಂನ ಕೇಳುಗರ ಸಂಖ್ಯೆ ಹೆಚ್ಚಿಸಲು, ಜಗತ್ತಿನಾದ್ಯಂತ ಎಫ್.ಎಂ ತಲುಪಲು ಸ್ವಂತ APP ಸಿದ್ಧಪಡಿಸಲಾಗಿದೆ. ರೇಡಿಯೋ ಸಿಗ್ನಲ್ ತಲುಪದ ಕಡೆ APP ಡೌನ್ ಲೋಡ್ ಮಾಡಿಕೊಂಡು ಕಾರ್ಯಕ್ರಮ ಕೇಳಬಹುದು. ಈಗಾಗಲೆ ಸಾವಿರಾರು ಮಂದಿ APP ಮೂಲಕ ರೇಡಿಯೋ ಶಿವಮೊಗ್ಗದ ಕಾರ್ಯಕ್ರಮಗಳನ್ನು ಕೇಳುತ್ತಿದ್ದರೆ.
ಆರಂಭದಲ್ಲೇ 32 ಸಾವಿರ ಕೇಳುಗರು
ಪ್ರಯೋಗಿಕ ಹಂತದಲ್ಲೇ ರೇಡಿಯೋ ಶಿವಮೊಗ್ಗ 32 ಸಾವಿರ ಕೇಳುಗರನ್ನು ತಲುಪಿದೆ. ಶಿಕ್ಷಣ, ಪರೀಕ್ಷೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಶಾಲೆಯ ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿ 32 ಸಾವಿರ ಕೇಳುಗರನ್ನು ತಲುಪಿದೆ. ಉತ್ತಮ ಪ್ರತಿಕ್ರಿಯೆ ಲಭಿಸಿದೆ.
240 ಸಮುದಾಯ ರೇಡಿಯೋ
ಏಳೆಂಟು ವರ್ಷದ ಪ್ರಯತ್ನದ ಬಳಿಕ ನಮ್ಮ ಎನ್‌ಜಿಒಗೆ ರೇಡಿಯೋ ಆರಂಭಿಸಲು ಅನುಮತಿ ಸಿಕ್ಕಿದೆ. ಉತ್ತಮ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಸಹಕಾರಿ ಆಗುವ ಯೋಜನೆ ರೂಪಿಸಲಾಗಿದೆ. ದೇಶದಲ್ಲಿ 240 ಸಮುದಾಯ ರೇಡಿಯೋಗಳಿವೆ. ರಾಜ್ಯದಲ್ಲಿ 8-10 ಸಮುದಾಯ ರೇಡಿಯೋಗಳು ಸಕ್ರಿಯವಾಗಿವೆ. ಆರಂಭದಲ್ಲಿ 40 ಲಕ್ಷ ಖರ್ಚಾಗಿದೆ. ನಮ್ಮ ಎನ್‌ಜಿಒ ಕಾರ್ಯ ಮೆಚ್ಚಿಕೊಂಡು ರೇಡಿಯೋ ಆರಂಭಿಸುವ ಅನುಮತಿ ನೀಡಲಾಗಿದೆ ಎಂದು ಸ್ಟೇಷನ್ ಡೈರೆಕ್ಟರ್ ಜನಾರ್ದನ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು.
ಶಿವಮೊಗ್ಗದಲ್ಲಿ ಎಫ್.ಎಂ ರೇಡಿಯೋ ಬಗ್ಗೆ ಬಹಳ ನಿರೀಕ್ಷೆ ಇತ್ತು. ಮೊದಲ ರೇಡಿಯೋಗೆ ಉತ್ತಮ ಸ್ಪಂದನೆ ಸಿಗುತ್ತಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422