ಶಿವಮೊಗ್ಗ: ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಅಂಚೆ ಕಚೇರಿ ಪಕ್ಕದಲ್ಲಿ ಹಾಪ್‌ಕಾಮ್ಸ್ ಕಚೇರಿ ಆವರಣದಲ್ಲಿ ಹಣ್ಣು ಮತ್ತು ಜ್ಯೂಸ್ ಮಾರಾಟ ಮಳಿಗೆ ಶುಕ್ರವಾರ ಆರಂಭವಾಯಿತು. ಶಾಸಕ ಎಸ್.ಎನ್. ಚನ್ನಬಸಪ್ಪ, ಕೆಳದಿ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಗಣ್ಯರು ನೂತನ ಮಳಿಗೆಗೆ ಭೇಟಿ ನೀಡಿ ಶುಭ ಕೋರಿದರು. (ಈ ಸುದ್ದಿಯನ್ನು ಇನ್ನು 60 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಈ ವೇಳೆ ಮಾತನಾಡಿದ ಡಾ. ಎಂ.ವಿ. ಧನಂಜಯ, ಕೃಷಿ ವಿಶ್ವವಿದ್ಯಾಲಯದಲ್ಲಿ ಉತ್ಪಾದನೆಯಾಗುವ ಹಣ್ಣುಗಳನ್ನು ಮುಂದಿನ ದಿನಗಳಲ್ಲಿ ಹಾಪ್‌ಕಾಮ್ಸ್ ಮೂಲಕ ಮಾರಾಟ ಮಾಡಲು ಯೋಜಿಸಲಾಗಿದೆ ಎಂದರು.

ವಿವಿಧ ಬಗೆಯ ದೇಶಿ ಹಾಗೂ ವಿದೇಶಿ ಹಣ್ಣುಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಈ ಮಳಿಗೆ ಸ್ಥಾಪಿಸಲಾಗಿದೆ. ರೈತರಿಂದ ನೇರ ಖರೀದಿ ಮಾಡುವುದರಿಂದ ಗ್ರಾಹಕರಿಗೆ ತಾಜಾ ಹಣ್ಣುಗಳು ಸಿಗಲಿವೆ.
– ಎಸ್.ಎನ್. ಚನ್ನಬಸಪ್ಪ, ಶಾಸಕ
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ತಾಜಾ ಹಣ್ಣುಗಳನ್ನು ತಲುಪಿಸುವ ಇಂತಹ ಪ್ರಯತ್ನಗಳು ಹೆಚ್ಚಾಗಬೇಕು ಎಂದರು.
ಮಳಿಗೆಯಲ್ಲಿ ಲಿಚ್ಚಿ, ರಾಂಬುಟಾನ್, ಡ್ರ್ಯಾಗನ್ ಫ್ರೂಟ್, ಬ್ಲೂಬೆರ್ರಿ, ಸ್ಟ್ರಾಬೆರಿ ಸೇರಿದಂತೆ ವಿವಿಧ ಬಗೆಯ ದೇಶಿ-ವಿದೇಶಿ ಹಣ್ಣುಗಳು ಹಾಗೂ ತಾಜಾ ಹಣ್ಣಿನ ಜ್ಯೂಸ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರಲಿದೆ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯ್‌ಕುಮಾರ್ ಹಾಗೂ ಪ್ರಗತಿಪರ ಕೃಷಿಕ ಕೆ. ನಾಗರಾಜ್ ತಿಳಿಸಿದರು. ಕಾರ್ಯಕ್ರಮದಲ್ಲಿ ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ಅಕ್ಷಯ್, ಕೃಷಿ ವಿವಿ ನಿರ್ದೇಶಕ ಶಶಾಂಕ್, ನಿರ್ದೇಶಕರಾದ ಶರತ್ ಮರಿಯಪ್ಪ, ನಾಗೇಶ್ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.