ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಫೆಬ್ರವರಿ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ, ನಂತರದ ಉದ್ವಿಗ್ನ ಪರಿಸ್ಥಿತಿ ಶಿವಮೊಗ್ಗ ನಗರವನ್ನು ಸ್ಥಬ್ಧಗೊಳಿಸಿದೆ. ಗಾಂಧಿ ಬಜಾರ್ ವರ್ತಕರ ಪಾಲಿಗಂತೂ ಈ ಘಟನೆ ಗಾಯದ ಮೇಲೆ ಬರೆ ಎಳದಿದೆ. ವ್ಯಾಪಾರ, ವ್ಯವಹಾರ ಕುದುರುವ ಹೊತ್ತಿಗೆ ವಾರಗಟ್ಟಲೆ ಅಂಗಡಿ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಮ್ಮ ವಹಿವಾಟು ಪುನಃ ಹಳಿಗೆ ಬರಲು ಇನ್ನು ಒಂದು ವರ್ಷ ಕಾಯಬೇಕಾದ ದುಸ್ಥಿತಿ ವ್ಯಾಪಾರಿಗಳಿಗೆ ಎದುರಾಗಿದೆ. ವಾರಗಟ್ಟಲೆ ಗಾಂಧಿ ಬಜಾರ್ ಬಂದ್ ಆಗುವುದರಿಂದ ಜಿಲ್ಲೆಯ ವ್ಯಾಪಾರ, ವಹಿವಾಟಿನ ಮೇಲೂ ಪರಿಣಾಮ ಭೀರಲಿದೆ.
ಗಾಂಧಿ ಬಜಾರ್ ಬಂದ್ ಆಗುವುದರಿಂದ ಏನೆಲ್ಲ ಪರಿಣಾಮವಾಗಲಿದೆ? ಯಾರೆಲ್ಲರ ಬದುಕಿನ ಮೇಲೆ ಪೆಟ್ಟು ಬೀಳಲಿದೆ. ಇಲ್ಲಿದೆ ಮಾಹಿತಿ.
ಪ್ರಮುಖಾಂಶ 1 – ಗಾಂಧಿ ಬಜಾರ್’ನಲ್ಲಿ ವಿವಿಧ ವ್ಯಾಪಾರ, ವಹಿವಾಟು ನಡೆಸುವ 500ಕ್ಕೂ ಹೆಚ್ಚು ಮಳಿಗೆಗಳಿವೆ. ನಗರದ ಒಟ್ಟು ವಹಿವಾಟಿನ ಶೇ.40ರಷ್ಟು ಭಾಗ ಇಲ್ಲಿಯೇ ನಡೆಯಲಿದೆ. ಲಕ್ಷಾಂತರ ಮಂದಿಗೆ ಗಾಂಧಿ ಬಜಾರ್’ನ ವ್ಯಾಪಾರ, ವಹಿವಾಟಿನ ಮೇಲೆ ಅವಲಂಬಿತವಾಗಿದ್ದಾರೆ.
ಪ್ರಮುಖಾಂಶ 2 – ಎಲ್ಲಾ ಪ್ರಮುಖ ಹೋಲ್ ಸೇಲ್ ವ್ಯಾಪಾರಿಗಳು ಗಾಂಧಿ ಬಜಾರ್’ನಲ್ಲಿದ್ದಾರೆ. ನಗರ ಮತ್ತು ಜಿಲ್ಲೆಯ ವಿವಿಧೆಡೆಯ ರಿಟೇಲ್ ವ್ಯಾಪಾರಿಗಳು ಇಲ್ಲಿ ಬಂದು ವಸ್ತುಗಳನ್ನು ಖರೀದಿಸುತ್ತಾರೆ. ಗಾಂಧಿ ಬಜಾರ್ ಬಂದ್ ಆಗುವುದರಿಂದ ಜಿಲ್ಲೆಯ ವಿವಿಧೆಡೆಯ ರಿಟೇಲ್ ವ್ಯಾಪಾರಿಗಳು, ಗ್ರಾಹಕರಿಗೆ ಸಮಸ್ಯೆ ಉಂಟಾಗಲಿದೆ.
ಪ್ರಮುಖಾಂಶ 3 – ಗಾಂಧಿ ಬಜಾರ್’ನಲ್ಲಿ ನೂರಾರು ಬೀದಿ ವ್ಯಾಪಾರಿಗಳಿದ್ದಾರೆ. ರಸ್ತೆ ಪಕ್ಕದಲ್ಲಿ ಬುಟ್ಟಿ ಇಟ್ಟುಕೊಂಡು ವ್ಯಾಪಾರ ಮಾಡುವವರು, ತಳ್ಳುಗಾಡಿಯಲ್ಲಿ ಹಣ್ಣು, ತರಕಾರಿ ಸೇರಿದಂತೆ ಇತರೆ ವಸ್ತುಗಳ ಮಾರಾಟ ಮಾಡುವವರು ಇದ್ದಾರೆ. ಇವರಿಗೆಲ್ಲ ಆಯಾ ದಿನದ ದುಡಿಮೆಯಲ್ಲೇ ಜೀವನ ನಡೆಯುತ್ತದೆ. ಇನ್ನು, ನೂರಾರು ಕೂಲಿ ಕಾರ್ಮಿಕರು ಕೂಡ ಗಾಂಧಿ ಬಜಾರ್ ಮೇಲೆ ಅವಲಂಬಿತರಾಗಿದ್ದಾರೆ.
ಪ್ರಮುಖಾಂಶ 4- ಉತ್ತರಾಯಣ ಪುಣ್ಯ ಕಾಲದ ಬಳಿಕ ಶುಭ ಕಾರ್ಯಗಳು ಪರ್ವ ಪ್ರಾರಂಭ. ಜಾತ್ರೆಗಳು, ಮದುವೆ, ಗೃಹ ಪ್ರವೇಶಗಳು ಶುರುವಾಗಲಿದೆ. ಈ ಸಂದರ್ಭ ಗಾಂಧಿ ಬಜಾರ್’ನಲ್ಲಿ ವಹಿವಾಟು ಬಿರುಸುಗೊಳ್ಳಲಿದೆ. ಫಬ್ರವರಿಯಿಂದ ಮೇ ತಿಂಗಳ ಕೊನೆಯವರೆಗೆ ವ್ಯಾಪಾರ ಜೋರಿರುತ್ತದೆ. ಕಳೆದ ಎಂಟತ್ತು ದಿನದಿಂದ ಗಾಂಧಿ ಬಜಾರ್’ನಲ್ಲಿ ವ್ಯಾಪಾರ ಬಿರುಸು ಪಡೆದುಕೊಂಡಿತ್ತು.
ಪ್ರಮುಖಾಂಶ 5 – ಪದೇ ಪದೇ ಗಾಂಧಿ ಬಜಾರ್ ಸ್ಥಬ್ಧಗೊಳ್ಳುವುದರಿಂದ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಬೇರೆಡೆಯಿಂದ ವಸ್ತುಗಳನ್ನು ತರಿಸಿಕೊಳ್ಳುವತ್ತ ರಿಟೇಲ್ ವ್ಯಾಪಾರಿಗಳು ಯೋಜಿಸುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿ ಉಂಟಾದರೆ ಗಾಂಧಿ ಬಜಾರ್ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಕರೋನ ಲಾಕ್ ಡೌನ್, ವೀಕೆಂಡ್ ಕರ್ಫ್ಯೂ, ಹಿಜಾಬ್ – ಕೇಸರಿ ಶಾಲು ವಿವಾದದಿಂದ ಗಾಂಧಿ ಬಜಾರ್’ನಲ್ಲಿ ವ್ಯಾಪಾರ, ವಹಿವಾಟು ನಿಂತಿತ್ತು. ಈಗ ಕೋಮು ಗಲಭೆಯಿಂದ ಇಡೀ ವಾರ ಗಾಂಧಿ ಬಜಾರ್ ಸ್ಥಬ್ಧವಾಗಿದೆ. ಇದರ ಪರಿಣಾಮ ಶಿವಮೊಗ್ಗ ನಗರದ ವಿವಿಧೆಡೆಯ ವ್ಯಾಪಾರಿಗಳು ಅನುಭವಿಸುವಂತಾಗಿದೆ.
‘ಕಳೆದ 50 ವರ್ಷದ ಇತಿಹಾಸದಲ್ಲಿ ಗಾಂಧಿ ಬಜಾರ್’ನಲ್ಲಿ ಶೇ.100ರಷ್ಟು ವ್ಯಾಪಾರವಾಗುತ್ತಿತ್ತು. ಎಲ್ಲದಕ್ಕೂ ಜನ ಇಲ್ಲಿಗೆ ಬರುತ್ತಿದ್ದರು. ಈಗ ಶೇ.60ರಷ್ಟು ವ್ಯಾಪಾರ ಹೊರಗೆ ನಡೆಯುತ್ತಿದೆ. ಪದೆ ಪದೆ ಗಲಭೆಗಳು, ಬಂದ್ ಮಾಡುತ್ತಿರುವುದರಿಂದ ಗಾಂಧಿ ಬಜಾರ್ ವರ್ತಕರು ತೀವ್ರ ಸಂಕಷ್ಟಕ್ಕೀಡಾಗಿದ್ದೇವೆ’ ಅನ್ನುತ್ತಾರೆ ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷ ದಿನಕರ್.
ಕರ್ಫ್ಯೂ ಸಡಿಲಗೊಂಡು, ಗಾಂಧಿ ಬಜಾರ್’ನಲ್ಲಿ ವ್ಯಾಪಾರ ವಹಿವಾಟು ಯಾವಾಗ ಪುನಾರಂಭವಾಗಲಿದೆ ಎಂದು ಲಕ್ಷಾಂತರ ಜನರು ಕಾಯುತ್ತಿದ್ದಾರೆ. ಸದ್ಯ ಶಿವಮೊಗ್ಗದಲ್ಲಿ ಪರಿಸ್ಥಿತಿ ತಿಳಿಗೊಳ್ಳುತ್ತಿದೆ. ಗಾಂಧಿ ಬಜಾರ್ ವರ್ತಕರು ಪುನಃ ತಮ್ಮ ವ್ಯವಹಾರ ಸಹಜ ಸ್ಥಿತಿಗೆ ಮರಳುವ ಯೋಚನೆಯಲ್ಲಿದ್ದಾರೆ.
ಇದನ್ನೂ ಓದಿ | ಗಲಭೆಕೋರರ ಮೇಲೆ ಕಣ್ಣಿಡಲು ಶಿವಮೊಗ್ಗಕ್ಕೆ ಬಂತು ಡ್ರೋಣ್, ಹೇಗಿದೆ? ಏನಿದರ ವಿಶೇಷತೆ?