RAINFALL NEWS, 20 OCTOBER 2024 : ಭಾರಿ (Heavy Rain) ಮಳೆಗೆ ಶಿವಮೊಗ್ಗ ನಗರ ತತ್ತರಿಸಿದೆ. ರಾತ್ರಿ ಪೂರ್ತಿ ಅಬ್ಬರಿಸಿದ್ದ ವರುಣ ಬೆಳಗ್ಗೆ 8 ಗಂಟೆ ಹೊತ್ತಿಗೆ ಕೊಂಚ ಬಿಡುವು ನೀಡಿದ್ದ. ಈಗ ಪುನಃ ಮಳೆ ಆರಂಭವಾಗಿದೆ. ಇನ್ನು, ಗುಡುಗು ಜೋರಾಗಿದ್ದು ಇಡೀ ದಿನ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ.
ಇನ್ನು, ಜೋರು ಮಳೆಗೆ ನಗರದ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಅಲ್ಲಲ್ಲಿ ರಾಜಕಾಲುವೆ, ಚರಂಡಿಗಳು ತುಂಬಿ ರಸ್ತೆ, ಮನೆಗಳಿಗೆ ನೀರು ನುಗ್ಗಿದೆ.
![]() |
ಈತನಕ ಎಲ್ಲೆಲ್ಲಿ ಏನಾಗಿದೆ?
ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್‌ನಲ್ಲಿ ರಾಜಾ ಕಾಲುವೆ, ಚರಂಡಿಳು ತುಂಬಿ ನೀರು ಹೊರಗೆ ಹರಿಯುತ್ತಿದೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಮನೆ, ಅಂಗಡಿಗಳಿಗೆ ಚರಂಡಿ ನೀರು ನುಗ್ಗಿದ್ದು ಆಸ್ತಿಪಾಸ್ತಿ ಹಾನಿಯಾಗಿದೆ.
ಪ್ರತಿ ಬಾರಿಯಂತೆ ಟ್ಯಾಂಕ್ ಮೊಹಲ್ಲಾ, ಅಂಗಳಯ್ಯನಕೆರೆ ಕೂಡ ಜಲಾವೃತವಾಗಿವೆ. ರಸ್ತೆ ಮೇಲೆ ನೀರು ಹರಿಯುತ್ತಿದೆ. ಬೈಕು, ಕಾರುಗಳು ನೀರಿನಲ್ಲಿ ಮುಳುಗಿವೆ. ಮನೆಗಳು, ಮಳಿಗೆಗಳಿಗು ನೀರು ನುಗ್ಗಿದೆ. ದಿನ ಬಳಕೆ ವಸ್ತುಗಳು, ಪೀಠೋಪಕರಣಗಳು ಹಾನಿಯಾಗಿವೆ. ಇಲ್ಲಿನ ಮಾರಿಕಾಂಬ ದೇವಸ್ಥಾನದಲ್ಲಿ ಅಂಗಳದಲ್ಲಿ ನೀರು ನಿಂತಿದೆ. ಚರಂಡಿ ನೀರು ಮನೆಗಳಿಗೆ ನುಗ್ಗಿರುವುದರಿಂದ ದುರ್ವಾಸನೆ ಬೀರುತ್ತಿದೆ.
ಅಣ್ಣಾನಗರ ಬಡಾವಣೆಯಲ್ಲೂ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮುಖ್ಯ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇಲ್ಲಿಯು ಮನೆಗಳಿಗೆ ನೀರು ನುಗ್ಗಿದೆ.
ಅಶ್ವಥ ನಗರ, ಎಲ್‌ಬಿಎಸ್ ಬಡಾವಣೆಯಲ್ಲಿ ಹಾದು ಹೋಗಿರುವ ರಾಜಾಕಾಲುವೆ ಭರ್ತಿಯಾಗಿದೆ. ಇದರಿಂದ ಮೋರಿ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಗೆ ನುಗ್ಗಿದೆ. ಇಲ್ಲಿಯು ಮನೆಗಳಿಗೆ ನೀರು ನುಗ್ಗಿದೆ. ಕೆಲವು ಕಟ್ಟಡಗಳು ಅಕ್ಷರಶಃ ದ್ವೀಪದಂತಾಗಿವೆ. ಬೆಳಗ್ಗೆದ್ದು ಜನರು ಮನೆಗಳಿಂದ ಹೊರ ಬರಲು ಪರದಾಡಿದರು.
ಸೋಮಿನಕೊಪ್ಪ ಸಮೀಪದ ಕನಕ ನಗರ ಬಡವಾವಣೆ, ಆಲ್ಕೊಳ ಬಡಾವಣೆಗಳು ಮಳೆಗೆ ತತ್ತರಿಸಿವೆ. ಎಲ್ಲೆಡೆ ನೀರು ನಿಂತಿದ್ದು ಮನೆಯಿಂದ ಹೊರ ಬರಲಾಗದೆ ಜನರು ಪರದಾಡುತ್ತಿದ್ದಾರೆ.
ಶಿವಮೊಗ್ಗ ನಗರದ ಹಲವು ಬಡಾವಣೆಗಳಿಗೆ ನೀರು ನುಗ್ಗಿರುವ ವರದಿಯಾಗಿದೆ. ಕೆಲವು ಬಡಾವಣೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಇನ್ನು, ಯುಜಿಡಿ ಭರ್ತಿಯಾಗಿ ಕೆಲವು ಕಡೆ ನೀರು ಹೊರಗೆ ಬಂದಿದೆ. ಇವತ್ತು ಇಡೀ ದಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ » CCTVಯಲ್ಲಿ ಮುಖ ಕಾಣದಂತೆ ಛತ್ರಿ ಅಡ್ಡಿ ಹಿಡಿದು ಬಂದು ಕಾರು ಕಳ್ಳತನ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200