ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 16 ಫೆಬ್ರವರಿ 2022
ಶಿವಮೊಗ್ಗ ಜಿಲ್ಲೆಯಾದ್ಯಂತ ಕಾಲೇಜು ತರಗತಿಗಳು ಪುನಾರಂಭವಾಗಿವೆ. ಸಣ್ಣಪುಟ್ಟ ಗೊಂದಲ ಹೊರತು ಜಿಲ್ಲೆಯಲ್ಲಿ ತರಗತಿಗಳು ಸುಗಮವಾಗಿ ನಡೆದವು. ಕೆಲವು ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ, ತರಗತಿ ಪ್ರವೇಶಿಸದೆ ಹೊರ ನಡೆದಿದ್ದಾರೆ.
ನಗರದ ಎರಡು ಖಾಸಗಿ ಕಾಲೇಜಿನಲ್ಲಿ ಹಿಜಾಬ್ ವಿಚಾರವಾಗಿ ಗೊಂದಲ ಸೃಷ್ಟಿಯಾಗಿತ್ತು. ಬುರ್ಖಾ ಮತ್ತು ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ಕಾಲೇಜು ಆವರಣದಿಂದ ಹಿಂತಿರುಗಿದರು.
ಡಿವಿಎಸ್ ಕಾಲೇಜಿನಲ್ಲಿ ಗೊಂದಲ
ಶಿವಮೊಗ್ಗದ ಡಿವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಇವತ್ತು ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬಂದಿದ್ದರು. ಆದರೆ ಆಡಳಿತ ಮಂಡಳಿಯವರು ತರಗತಿಯಲ್ಲಿ ಬುರ್ಖಾ, ಹಿಜಾಬ್’ಗೆ ಅವಕಾಶವಿಲ್ಲ ಎಂದು ತಿಳಿಸಿದರು. ಇದನ್ನು ಒಪ್ಪದ ವಿದ್ಯಾರ್ಥಿನಿಯರು, ಆಡಳಿತ ಮಂಡಳಿ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಪೋಷಕರು ಕೂಡ ವಿದ್ಯಾರ್ಥಿನಿಯರ ಜೊತೆಯಾದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು, ‘ವಿಷ ಕುಡಿಯುತ್ತೇವೆ. ಆದರೆ ಹಿಜಾಬ್ ಬಿಡುವುದಿಲ್ಲ. ಹಿಜಾಬ್, ಬುರ್ಖಾ ಧರಿಸಿದರೆ ಯಾರಿಗೂ ತೊಂದರೆ ಆಗುವುದಿಲ್ಲ’ ಎಂದರು.
‘ಹರಿದು ಹೋದ ಬಟ್ಟೆ ಧರಿಸಿ ಬಂದರೂ ತರಗತಿಗೆ ಬಾ ಓದು ಎಂದು ಕರೆಯಬೇಕು. ನಮ್ಮ ಪರೀಕ್ಷೆಗಳು ಹತ್ತಿರ ಬಂದಿವೆ. ಆದರೆ ತರಗತಿ ಒಳಗೆ ನಮ್ಮನ್ನು ಬಿಡುತ್ತಿಲ್ಲ. ನಾವೇನಾದರೂ ಕೊಲೆ ಮಾಡಲು ಬಂದಿದ್ದೇವಾ? ಹಿಜಾಬ್ ಅನ್ನುವುದು ನಮ್ಮ ಹೆಮ್ಮೆ. ಅದನ್ನು ತೆಗೆಯಬೇಕು ಎಂದು ಹೇಳುವುದು ತಪ್ಪು’ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದರು.
ಎನ್ಇಎಸ್ ಕ್ಯಾಂಪಸ್ಸಿನಲ್ಲೂ ಆಕ್ರೋಶ
ಇತ್ತ ಎನ್ಇಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿನ ಕಾಲೇಜುಗಳಿಗೂ ಬುರ್ಖಾ, ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಆಗಮಿಸಿದ್ದರು. ಆಡಳಿತ ಮಂಡಳಿ ಅವಕಾಶ ನೀಡದ ಹಿನ್ನೆಲೆ ವಿದ್ಯಾರ್ಥಿನಿಯರು, ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಕಾಲೇಜಿಗೆ ಭೇಟಿ ನೀಡಿ, ಮನವರಿಕೆ ಮಾಡಲು ಯತ್ನಿಸಿದರು. ಆದರೆ ಅವರ ಪ್ರಯತ್ನ ವಿಫಲವಾಯಿತು.
ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯ ಶಾಲೆ, ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ, ಮೂರು ಕಾಲೇಜಿಗೆ ಇವತ್ತೂ ರಜೆ
ಇದನ್ನೂ ಓದಿ | ಶಿವಮೊಗ್ಗ ಸಿಟಿಯಲ್ಲಿ ಮತ್ತೆ ನಿಷೇಧಾಜ್ಞೆ, ಎಷ್ಟು ದಿನ? ಏನೆಲ್ಲ ನಿರ್ಬಂಧವಿದೆ?
ಸಹ್ಯಾದ್ರಿ ಕ್ಯಾಂಪಸ್ ಕೂಲ್ ಕೂಲ್
ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಇವತ್ತು ಶಾಂತಿಯುತವಾಗಿತ್ತು. ವಿದ್ಯಾರ್ಥಿಗಳು ಎಂದಿನಂತೆ ತರಗತಿಗಳಿಗೆ ಬಂದಿದ್ದರು. ಸಹ್ಯಾದ್ರಿ ಕಾಲೇಜು ಪ್ರವೇಶ ದ್ವಾರದ ಮುಂಭಾಗ ಪೊಲೀಸ್ ಬಂದೊಬಸ್ತ್ ನಿಯೋಜನೆ ಮಾಡಲಾಗಿತ್ತು. ಗುರುತು ಚೀಟಿ ಇದ್ದವರಿಗೆ ಮಾತ್ರ ಕಾಲೇಜು ಆವರಣದೊಳಗೆ ಪ್ರವೇಶ ನೀಡಲಾಯಿತು.
ಶಿವಮೊಗ್ಗ ನಗರದ ಉಳಿದ ಕಾಲೇಜುಗಳಲ್ಲಿಯುವ ತರಗತಿಗಳು ಸುಗಮವಾಗಿ ನಡೆದವು. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ನಗರದ ಕಾಲೇಜುಗಳ ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422