ಶಿವಮೊಗ್ಗ: ಮಕ್ಕಳ ಮಾರಾಟ ಹಾಗೂ ಅನಧಿಕೃತವಾಗಿ ಮಗುವನ್ನು ನೀಡುವುದು ದತ್ತು ಪಡೆಯುವುದು ಕಾನೂನು ಬಾಹಿರ ಹಾಗೂ ಗಂಭೀರ ಸ್ವರೂಪದ ಅಪರಾಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಚ್ಚರಿಕೆ ನೀಡಿದೆ. (ಈ ಸುದ್ದಿಯನ್ನು ಇನ್ನು 44 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
“ಪೋಷಕರಾಗಲು ಅಡ್ಡದಾರಿಯಿಲ್ಲ – ಕಾನೂನುಬದ್ಧ ದತ್ತು ಸ್ವೀಕಾರವೊಂದೇ ಸರಿಯಾದ ಮಾರ್ಗ” ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ತಿಳಿಸಿದೆ.

ಜೈಲು ಶಿಕ್ಷೆ, ದಂಡ
ಬಾಲನ್ಯಾಯ ಕಾಯ್ದೆ-2015 ರ ಸೆಕ್ಷನ್ 81 ರ ಅನ್ವಯ ಮಕ್ಕಳನ್ನು ಮಾರಾಟ ಮಾಡುವವರಿಗೆ ಹಾಗೂ ಕೊಳ್ಳುವವರಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಈ ಅಪರಾಧದಲ್ಲಿ ಆಶ್ರಯ ನೀಡಿದವರು ಶಾಮೀಲಾಗಿದ್ದರೆ, ಶಿಕ್ಷೆಯ ಅವಧಿಯು 3 ರಿಂದ 7 ವರ್ಷಗಳವರೆಗೆ ವಿಸ್ತರಣೆಯಾಗಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಅನಾಥ, ಪರಿತ್ಯಕ್ತ ಮಕ್ಕಳ ಮಾಹಿತಿ ಕಂಡುಬಂದಲ್ಲಿ ಅಥವಾ ನಿಯಮಾನುಸಾರ ಮಗುವನ್ನು ದತ್ತು ಪಡೆಯಲು ಅಪೇಕ್ಷಿಸುವ ಪೋಷಕರು ನಗರದ ಅಲ್ಕೋಳದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ದೂರವಾಣಿ: 08182-295709) ಅಥವಾ ಉಚಿತ ಮಕ್ಕಳ ಸಹಾಯವಾಣಿ 1098 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.