ಶಿವಮೊಗ್ಗ: ಸಮಾಜದೊಂದಿಗೆ ಸಂಪರ್ಕ ಸಾಧಿಸುವ ಹಾಗೂ ಸಾರ್ವಜನಿಕರನ್ನು ಸಂಸ್ಥೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಜೆಸಿಐ ಶಿವಮೊಗ್ಗ ಅನಿಕೇತನ ವತಿಯಿಂದ ಸೆ.9 ರಿಂದ 15ರವರೆಗೆ ಜೆಸಿಐ ಸಪ್ತಾಹ ಆಯೋಜಿಸಲಾಗಿದೆ ಎಂದು ಘಟಕದ ಅಧ್ಯಕ್ಷ ಎಂ. ಸಂದೇಶ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಪ್ತಾಹದ ಅಂಗವಾಗಿ ಪ್ರತಿದಿನ ಸಾರ್ವಜನಿಕರಿಗೆ ವಿವಿಧ ವಿಷಯಗಳ ಕುರಿತು ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಯಾವ್ಯಾವ ದಿನ ಏನೇನು ಕಾರ್ಯಕ್ರಮ?
ಸೆ.9ರಂದು ಸಸ್ಟೇನಬಲ್ ಸಿಪ್ಪಿಂಗ್ ಕಾರ್ಯಕ್ರಮದ ಮೂಲಕ ಪ್ಲಾಸ್ಟಿಕ್ ಬಾಟಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಆಟೊ ಚಾಲಕರು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಸ್ಟೀಲ್ ಬಾಟಲ್ ವಿತರಿಸಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತೆ ಮನವಿ ಮಾಡಲಾಗುವುದು.
ಸೆ.10ರಂದು ಯೂತ್ ಲೀಡರ್‌ಶಿಪ್ ಡೇ–ವಾಯ್ಸ್ ಆಫ್ ಯೂತ್ ಅಂಗವಾಗಿ ನಗರದ ವಿವಿಧ ಕಾಲೇಜುಗಳಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಸಹ್ಯಾದ್ರಿ ಕಾಲೇಜಿನ ಪಾಥ್‌ವೇಸ್ ಸಹಯೋಗ ನೀಡಿದ್ದು, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಸುಮಾರು 1,000 ವಿದ್ಯಾರ್ಥಿಗಳನ್ನು ತಲುಪುವ ಗುರಿ ಹೊಂದಿದ್ದು, ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಸಂದೇಶ್ ಅವರು ತಿಳಿಸಿದರು.
ಸೆ.11ರಂದು ಹ್ಯೂಮನ್ ಡ್ಯೂಟೀಸ್ ಆ್ಯಂಡ್ ಡಿಜಿಟಲ್ ಔಟ್‌ರೀಚ್ ಡೇ ಅಂಗವಾಗಿ ಮಾನವ ಕರ್ತವ್ಯಗಳ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ವಿಶೇಷ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ.
ಸೆ.12ರಂದು ಬಿಸಿನೆಸ್ ಆ್ಯಂಡ್ ನೆಟ್‌ವರ್ಕ್ ಗ್ರೋತ್ ಡೇ ಆಚರಿಸಲಾಗುವುದು. ಆರ್ಥಿಕ ಅರಿವು ಹಾಗೂ ವ್ಯವಹಾರ ಕೌಶಲ ಬೆಳೆಸುವ ಉದ್ದೇಶದಿಂದ ಜೆಸಿಐ ಆರಂಭಿಸಿರುವ ಜೇಸೀಸ್ ಚೇಂಬರ್ ಆಫ್ ಕಾಮರ್ಸ್ (ಜೆಕಾಮ್) ಸಭೆಗಳಲ್ಲಿ ಭಾಗವಹಿಸುವುದು ಹಾಗೂ ಅದರ ಚಟುವಟಿಕೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು.
ಸೆ.13ರಂದು ಮೆಂಬರ್‌ಶಿಪ್ ಎಕ್ಸ್‌ಟೆನ್ಷನ್ ಡೇ ಅಂಗವಾಗಿ ಜೆಸಿಐ ಸೇರಲು ಆಸಕ್ತಿ ಹೊಂದಿರುವವರನ್ನು ಗುರುತಿಸಿ, ಸಂಸ್ಥೆಗೆ ಆಹ್ವಾನಿಸಲಾಗುವುದು. ಸೆ.14ರಂದು ಫ್ಯಾಮಿಲಿ ಬಾಂಡಿಂಗ್ ಡೇ ಅಂಗವಾಗಿ ಸಂಸ್ಥೆಯ ಸದಸ್ಯರು ಕುಟುಂಬ ಸಮೇತರಾಗಿ ಒಂದೆಡೆ ಸೇರಿ ಗಣೇಶೋತ್ಸವ ಆಚರಿಸಲಿದ್ದಾರೆ. ಸಪ್ತಾಹದ ಕೊನೆಯ ದಿನವಾದ ಸೆ.15ರಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ವಲಯ ಉಪಾಧ್ಯಕ್ಷ ಗಣೇಶ್ ಪೈ, ವಲಯ ನಿರ್ದೇಶಕ ಪ್ರಮೋದ್ ಶಾಸ್ತ್ರಿ, ಖಜಾಂಚಿ ನಿಧಿ, ಸದಸ್ಯರಾದ ಹೊನ್ನಾಳಿ ಚಂದ್ರಶೇಖರ್, ಪ್ರದೀಪ್ ಇದ್ದರು.