ಶಿವಮೊಗ್ಗ ಡಿಸಿ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಮಹತ್ವದ ಮೀಟಿಂಗ್‌, ಏನೆಲ್ಲ ಚರ್ಚೆಯಾಯ್ತು? ಇಲ್ಲಿದೆ ಪಾಯಿಂಟ್ಸ್‌

ಶಿವಮೊಗ್ಗ: ಬರಗಾಲದ ಹಿನ್ನೆಲೆ ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಯೋಜನೆ ಕುರಿತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಬೇಕು ಎಂದು ಸಚಿವ ಎಸ್. ಮಧು ಬಂಗಾರಪ್ಪ ಅವರು ಜಿಲ್ಲಾ ಪಂಚಾಯತಿ ಸಿಇಒಗೆ ಸೂಚನೆ ನೀಡಿದ್ದಾರೆ.➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಜಿಲ್ಲಾಡಳಿತ ಕಚೇರಿಯಲ್ಲಿ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ತಾಲೂಕು ವ್ಯಾಪ್ತಿಯ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Minister Madhu Bangarappa holds meeting at DC office in Shivamogga

ಸಭೆಯಲ್ಲಿ ಏನೆಲ್ಲ ಚರ್ಚೆಯಾಯ್ತು? ಇಲ್ಲಿದೆ ಪಾಯಿಂಟ್ಸ್‌

Point-1

ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ 1ರಿಂದಲೇ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಯಲ್ಲಿದೆ. ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಠ 1 ಪ್ರಮುಖ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆಯು ರಾಜ್ಯದಲ್ಲಿ ಟಾಪ್ 5ನೇ ಸ್ಥಾನದಲ್ಲಿದೆ ಎಂದು ಜಿ.ಪಂ. ಸಿಇಒ ಹೇಮಂತ್ ಎನ್. ಸಭೆಗೆ ತಿಳಿಸಿದರು. ಮಳೆಗಾಲದಲ್ಲಿ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ತಡೆಗಾಗಿ ಕೈಗೊಂಡಿರುವ 82 ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

Point-2

ತುಂಗಾ ಜಲಾಶಯ ಶೇ.100 ಹಾಗೂ ಭದ್ರಾ ಜಲಾಶಯ ಶೇ.50ರಷ್ಟು ಭರ್ತಿಯಾಗಿವೆ. ಭದ್ರಾ ನೀರು 170 ಅಡಿಗೆ ತಲುಪಿದರೆ ಮಾತ್ರ ಒಂದು ಬೆಳೆಗೆ ನೀರು ನೀಡಲು ಸಾಧ್ಯವಿರುವುದರಿಂದ, ಈ ಬಾರಿ ಬೆಳೆಗೆ ನೀರು ಸಿಗುವುದಿಲ್ಲ ಎಂಬ ಮಾಹಿತಿಯನ್ನು ಈಗಾಗಲೇ ರೈತರಿಗೆ ನೀಡಲಾಗಿದೆ. ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ನೀರು ಎತ್ತುವ ಪ್ರಸ್ತಾವನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ, ಕೆರೆಗಳಿಂದ ಅನಧಿಕೃತವಾಗಿ ನೀರು ಎತ್ತುವ ಪಂಪ್‌ಸೆಟ್‌ಗಳನ್ನು ಪೊಲೀಸ್ ರಕ್ಷಣೆಯೊಂದಿಗೆ ತಕ್ಷಣ ತೆರವುಗೊಳಿಸಲು ಸಚಿವರು ಆದೇಶಿಸಿದರು.

Point-3

ಜೂನ್‌ನಿಂದ ಇಲ್ಲಿವರೆಗೆ ವಾಡಿಕೆಗಿಂತ ಶೇ. 32ರಷ್ಟು ಮಳೆ ಕೊರತೆ ಇದೆ. ಒಟ್ಟು ಶೇ. 69ರಷ್ಟು ಬಿತ್ತನೆಯಾಗಿದ್ದು, ಆಗಸ್ಟ್ ಅಂತ್ಯದವರೆಗೆ ನಾಟಿ ಮಾಡಲು ಅವಕಾಶವಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಾಕಷ್ಟು ದಾಸ್ತಾನು ಲಭ್ಯವಿದ್ದು, ಬಗರ್ ಹುಕುಂ ಜಮೀನುಗಳಿಗೂ ರಸಗೊಬ್ಬರ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು. ರೈತರು ಬೆಳೆ ವಿಮೆ ಕಂತು ಕಟ್ಟಲು ಆಗಸ್ಟ್ 14ರವರೆಗೆ ಅವಕಾಶವಿದ್ದು, ಬ್ಯಾಂಕುಗಳು ಹಾಗೂ ಸಹಕಾರ ಸಂಘಗಳು ಕಂತು ಕಟ್ಟಿಸಿಕೊಳ್ಳಲು ನಿರಾಕರಿಸುವಂತಿಲ್ಲ ಎಂದು ಸಚಿವರು ಎಚ್ಚರಿಸಿದರು.

Point-4

ತೀರ್ಥಹಳ್ಳಿ ಭೂಕುಸಿತ ಹಾಗೂ ಹೊಸನಗರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರದ ಚೆಕ್ ವಿತರಿಸಲಾಗಿದೆ. ಅಡಿಕೆ ಬೆಳೆ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲೆಯ 25 ಗ್ರಾ.ಪಂ. ವ್ಯಾಪ್ತಿಯ 31 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಖಾಸಗಿ ಬೋರ್‌ವೆಲ್ ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಶಿಥಿಲಗೊಂಡ ಅಂಗನವಾಡಿ ಕಟ್ಟಡಗಳಿಗೆ ಮಕ್ಕಳನ್ನು ಕಳುಹಿಸಬಾರದು ಹಾಗೂ ಕೂಡಲೇ ರಿಪೇರಿ ಅಥವಾ ಮರುನಿರ್ಮಾಣ ಕಾರ್ಯ ಕೈಗೊಳ್ಳಲು ಸೂಚಿಸಲಾಯಿತು.

ಸಭೆಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಸೇರಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.