SHIVAMOGGA LIVE NEWS | 11 MARCH 2024
SHIMOGA : ನಗರ ದೇವತೆ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆಗೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಮಾ.12ರಿಂದ ಜಾತ್ರೆ ಆರಂಭವಾಗಲಿದೆ. ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು, ದೇವಿಯನ್ನು ಪೂಜಿಸಿ ಪುನೀತರಾಗುತ್ತಾರೆ. ಈ ಬಾರಿ ಜಾತ್ರೆಯಲ್ಲಿ ಯಾವ್ಯಾವ ದಿನ ಏನೇನು ಕಾರ್ಯಕ್ರಮ ನಡೆಯಲಿದೆ ಅನ್ನುವುದ ವಿವರ ಇಲ್ಲಿದೆ.
ಮಾರ್ಚ್ 12ರಂದು ಏನೇನು ನಡೆಯಲಿದೆ?
ಬೆಳಗಿನ ಜಾವ 5 ಗಂಟೆಗೆ ಬಿ.ಬಿ.ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ. ಆ ಕುಟುಂಬದ ಮುತ್ತೈದೆಯರು ಮಂಗಳ ವಾದ್ಯಗಳೊಂದಿಗೆ ದೇವಿಯ ತವರು ಮನೆ ಗಾಂಧಿ ಬಜಾರ್ವರೆಗೆ ಮೆರವಣಿಗೆಯಲ್ಲಿ ಆಗಮಿಸುತ್ತಾರೆ. ದೇವಿಗೆ ಬಾಸಿಂಗ ಅರ್ಪಿಸಿ, ಉಡಿ ತುಂಬಿ, ಪೂಜೆ ಸಲ್ಲಿಸುತ್ತಾರೆ. ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸುತ್ತಾರೆ. ಅಂದು ರಾತ್ರಿ 10 ಗಂಟೆಯವರೆಗೂ ಲಕ್ಷಾಂತರ ಮುತ್ತೈದೆಯರು ಶ್ರೀ ಮಾರಿಕಾಂಬೆಗೆ ಮಡಲಕ್ಕಿ ನೀಡಿ, ಉಡಿ ತುಂಬಿ ತಮ್ಮ ಪೂಜೆ ಸಲ್ಲಿಸುತ್ತಾರೆ.
ಬೆಳಿಗ್ಗೆ 5 ಗಂಟೆಯಿಂದ ಎಡೆ ಪೂಜೆ ನಡೆಸಲಾಗುತ್ತದೆ. ರಾತ್ರಿ 9 ಗಂಟೆ ನಂತರ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ, ಮೆರವಣಿಗೆ ನಡೆಸಲಾಗುತ್ತದೆ. ಉಪ್ಪಾರ ಸಮಾಜದವರು ಗದ್ದುಗೆಗೆ ತಂದು ಪ್ರತಿಷ್ಠಾಪಿಸುತ್ತಾರೆ. ಈ ಮಧ್ಯೆ ಗಂಗಾಪರಮೇಶ್ವರಿ ದೇವಸ್ಥಾನದ ಬಳಿ ಗಂಗಾ ಮತಸ್ಥರು ಗಂಗೆ ಪೂಜೆ ನೆರವೇರಿಸುತ್ತಾರೆ.
ಮಾರ್ಚ್ 14ರಿಂದ ಗದ್ದುಗೆಯಲ್ಲಿ ಪೂಜೆ
ಅಂದು ಬೆಳಗಿನ ಜಾವ 4 ಗಂಟೆಗೆ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಸಮಾಜದವರು ಬೇವಿನ ಉಡುಗೆಯೊಂದಿಗೆ ಬಂದು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಆ ನಂತರ ದೇವಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ಕುರುಬ ಜನಾಂಗದ ಗುತ್ಯಮ್ಮ ದೇವಾಲಯದ ಅರ್ಚಕರಾದ ಚೌಡಿಕೆ ಕುಟುಂಬದವರು ನೈವೇದ್ಯ ಮಾಡಿ ಪೂಜೆ ಸಲ್ಲಿಸುತ್ತಾರೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವಾಲ್ಮೀಕಿ ಸಮಾಜ, ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಪ್ಪಾರ ಸಮಾಜ, ಮದ್ಯಾಹ್ನ 2 ರಿಂದ ರಾತ್ರಿ 11 ಗಂಟೆ ವರೆಗೆ ಮಡಿವಾಳ ಸಮಾಜದವರು ಸರದಿಯಂತೆ 4 ದಿನಗಳ ಕಾಲ ಗದ್ದುಗೆಯಲ್ಲಿ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಾರೆ.
ಮಾರ್ಚ್ 16ರಂದು ಮಹಾ ಮಂಗಳಾರತಿ
ಶನಿವಾರ ರಾತ್ರಿ 7 ಗಂಟೆಗೆ ಸಮಿತಿ ವತಿಯಿಂದ ದೇವಿಗೆ ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಆ ನಂತರ ಶ್ರೀ ಮಾರಿಕಾಂಬೆಯ ದೊಡ್ಡ ಸಂಖ್ಯೆಯ ಭಕ್ತರೊಂದಿಗೆ ತಾಯಿಯ ವನ ಪ್ರವೇಶಕ್ಕೆ ಮೆರವಣಿಗೆ ನಡೆಸಲಾಗುತ್ತದೆ. ಮಡಿವಾಳ ಸಮಾಜದವರು ತಾಯಿಯನ್ನು ವನಕ್ಕೆ ಕರೆದೊಯ್ದು ಶಾಸ್ತ್ರ, ಪೂಜೆ ಸಲ್ಲಿಸಿ ವನದಿಂದ ಹಿಂತಿರುಗುತ್ತಾರೆ.
ಇದನ್ನೂ ಓದಿ – ಕೋಟೆ ಮಾರಿಕಾಂಬ ಜಾತ್ರೆ, ‘ಸಾರು ಹಾಕುವ ಪದ್ಧತಿ’ಗೆ ಚಾಲನೆ, ವಿದೇಶಿಗರನ್ನು ಸೆಳೆದ ಆಚರಣೆ
ನೆಹರೂ ಕ್ರೀಡಾಂಗಣದಲ್ಲಿ ಕುಸ್ತಿ
ಮಾರ್ಚ್ 15 ರಿಂದ 17 ರ ವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ. ರಾಜ್ಯ ಮತ್ತು ಅಂತರರಾಜ್ಯದ ಹೆಸರಾಂತ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200