ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಮಧ್ಯ ಕರ್ನಾಟಕದಲ್ಲೇ ಮೊದಲ ಬಾರಿಗೆ ತಂತಿರಹಿತ (ಲೀಡ್ಲೆಸ್) ಪೇಸ್ಮೇಕರ್ ಅಳವಡಿಕೆ ಯಶಸ್ವಿಯಾಗಿ ನಡೆಸಲಾಗಿದೆ. ಹೃದಯದ ಬಡಿತದಲ್ಲಿ ತೀವ್ರ ಏರುಪೇರು ಉಂಟಾಗಿದ್ದ 75 ವರ್ಷದ ಮಹಿಳೆಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ ಎಂದು ಹಿರಿಯ ಹೃದ್ರೋಗ ತಜ್ಞ ಡಾ. ಶ್ರೀವತ್ಸ ನಾಡಿಗ್ ತಿಳಿಸಿದರು. (ಈ ಸುದ್ದಿಯನ್ನು ಇನ್ನು 75 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಮೂಲದ ಮಹಿಳೆ ತೀವ್ರ ಹೊಟ್ಟೆನೋವು ಹಾಗೂ ರಕ್ತದೊತ್ತಡ ಕುಸಿತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಯಲ್ಲಿ ಕರುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡು ಬಹುಭಾಗ ಹಾನಿಗೊಳಗಾಗಿರುವುದು ಪತ್ತೆಯಾಗಿತ್ತು. ಡಾ. ಸತೀಶ್ ಕುಮಾರ್ ಅವರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಹಾನಿಗೊಂಡ ಭಾಗವನ್ನು ತೆಗೆದುಹಾಕಿದರು ಎಂದರು.

ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಯ ಹೃದಯದ ಬಡಿತದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಸುಮಾರು ಐದು ಸೆಕೆಂಡುಗಳ ಕಾಲ ಬಡಿತ ನಿಲ್ಲುವ ಅಪಾಯಕಾರಿ ಸ್ಥಿತಿಯೂ ಎದುರಾಗಿತ್ತು. ಸೋಂಕು ಮತ್ತು ಗುಣವಾಗದ ಗಾಯದ ಕಾರಣ ಸಾಮಾನ್ಯ ಪೇಸ್ಮೇಕರ್ ಅಳವಡಿಸುವುದು ಅಪಾಯಕಾರಿಯಾಗಿದ್ದರಿಂದ ಲೀಡ್ಲೆಸ್ ಪೇಸ್ಮೇಕರ್ ಅಳವಡಿಸಲಾಯಿತು ಎಂದು ವಿವರಿಸಿದರು.
ಸಾಮಾನ್ಯ ಪೇಸ್ಮೇಕರ್ನಲ್ಲಿ ಎದೆಯ ಚರ್ಮದಡಿ ಸಾಧನ ಅಳವಡಿಸಿ ತಂತಿಗಳ ಮೂಲಕ ಹೃದಯಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಆದರೆ ಲೀಡ್ಲೆಸ್ ಪೇಸ್ಮೇಕರ್ ಅನ್ನು ತೊಡೆಸಂದಿಯ ರಕ್ತನಾಳದ ಮೂಲಕ ಹೃದಯದೊಳಗೆ ನೇರವಾಗಿ ಅಳವಡಿಸಲಾಗುತ್ತದೆ. ಇದರಿಂದ ತಂತಿಗಳಿಗೆ ಸಂಬಂಧಿಸಿದ ತೊಂದರೆಗಳು ಮತ್ತು ಕೆಲವು ಸೋಂಕಿನ ಅಪಾಯಗಳನ್ನು ಕಡಿಮೆ ಮಾಡಬಹುದು ಎಂದರು.
ಈ ಚಿಕಿತ್ಸೆಗೆ ಸುಮಾರು ₹8ರಿಂದ ₹10 ಲಕ್ಷ ವೆಚ್ಚವಾಗಬಹುದು. ಸಾಧನದ ಮಾದರಿಗೆ ಅನುಗುಣವಾಗಿ ಬ್ಯಾಟರಿಯ ಆಯುಷ್ಯ ಬದಲಾಗುತ್ತದೆ. ವೈದ್ಯರ ಸಲಹೆಯಂತೆ ನಿಯಮಿತ ತಪಾಸಣೆ ಅಗತ್ಯ ಎಂದು ತಿಳಿಸಿದರು. ಪೇಸ್ಮೇಕರ್ ಹೃದಯದ ಬಡಿತವನ್ನು ನಿಯಂತ್ರಿಸಲು ಬಳಸುವ ಸಾಧನ. ಹೃದಯದ ರಕ್ತನಾಳಗಳಲ್ಲಿನ ಅಡಚಣೆ ನಿವಾರಿಸಲು ಸ್ಟಂಟ್ ಅಳವಡಿಸಲಾಗುತ್ತದೆ. ಇವೆರಡೂ ವಿಭಿನ್ನ ಚಿಕಿತ್ಸಾ ವಿಧಾನಗಳಾಗಿವೆ ಎಂದು ಡಾ. ಶ್ರೀವತ್ಸ ನಾಡಿಗ್ ತಿಳಿಸಿದರು.
ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಡಾ. ಉತ್ತಮ್ ಶರ್ಮಾ ಹಾಗೂ ಮಾರ್ಕೆಟಿಂಗ್ ಮುಖ್ಯಸ್ಥ ಶೈಲೇಶ್ ಎಸ್.ಎನ್. ಉಪಸ್ಥಿತರಿದ್ದರು.