ಶಿವಮೊಗ್ಗ: ಸಂವಿಧಾನವನ್ನೇ 108 ಬಾರಿ ತಿದ್ದುಪಡಿ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿಯನ್ನು ಅಧ್ಯಕ್ಷ (President) ಮಹೇಶ ಜೋಶಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆನಂದದ ಸಿದ್ಧಾಂತವನ್ನು ಉಪಯೋಗಿಸಿಕೊಂಡು ತಮ್ಮ ಇಚ್ಛೆಯಂತೆ ಬೈಲಾ ತಿದ್ದುಪಡಿ ಮಾಡುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಸದಸ್ಯ, ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಆರೋಪಿಸಿದ್ದಾರೆ.
ಇದನ್ನೂ ಓದಿ » ಕಾಶ್ಮೀರ ದಾಳಿ, ಸಾಂತ್ವನ ಹೇಳಲು ತಿಪಟೂರಿನಿಂದ ಶಿವಮೊಗ್ಗಕ್ಕೆ ಬಂದ 103 ವರ್ಷದ ವೃದ್ಧೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಚಂದ್ರಶೇಖರ್, ಬೈಲಾ ತಿದ್ದುಪಡಿಗೆ ತಮ್ಮ ವಿರೋಧವಿಲ್ಲ. ಆದರೆ ಯಾವ ಕಾರಣಕ್ಕಾಗಿ ತಿದ್ದುಪಡಿ ಮಾಡಲಾಗುತ್ತಿದೆ ಎಂಬುದು ಮುಖ್ಯ. ರಾಷ್ಟ್ರಪತಿ, ರಾಜ್ಯಪಾಲರಿಗೆ ಸೀಮಿತವಾಗಿರುವ ಆನಂದದ ಸಿದ್ಧಾಂತ (ಡಾಕ್ಟರೀನ್ ಆಫ್ ಪ್ಲೆಷರ್) ಬಳಸಿ ಬೈಲಾ ಬದಲಿಸಲು ಹೊರಿಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯ ಪ್ರಮುಖ ಪಾಯಿಂಟ್ಸ್
- ಬಳ್ಳಾರಿಯ ಸಂಡೂರಿನಲ್ಲಿ ಸಭೆ ರದ್ದಾಗಿದ್ದು, ಜೂ.21ರಂದು ಮತ್ತೆ ಸಭೆ ಕರೆಯುವ ಸಾಧ್ಯತೆ ಇದೆ.
- ರಾಜ್ಯಾಧ್ಯಕ್ಷರು ಪ್ರಮುಖ ನಿರ್ಧಾರ ಕೈಗೊಳ್ಳಬಹುದು ಎಂದಿದೆ. ಎಲ್ಲೆಲ್ಲಿ ರಾಜ್ಯಾಧ್ಯಕ್ಷರು ಎಂದು ಬೈಲಾದಲ್ಲಿದೆಯೋ ಅಲ್ಲೆಲ್ಲ ಕಾರ್ಯಕಾರಿ ಸಮಿತಿ ಎಂದು ತಿದ್ದುಪಡಿ ಆಗಬೇಕು.
- ಮೂರು ಸಭೆಗೆ ಗೈರಾದವರನ್ನು ಪರಿಷತ್ತಿನಿಂದ ಕೈ ಬಿಡಲಾಗುತ್ತದೆ ಎಂದು ಇದೆ. ಆದರೆ ರಾಜ್ಯ ಪರಿಷತ್ತಿನ ಅಧ್ಯಕ್ಷರು ಒಂದು ವರ್ಷ ಗೈರಾದರು ಅವರಿಗೆ ನಿಯಮ ಅನ್ವಯ ಆಗುವುದಿಲ್ಲ. ಇದು ಸರಿಯಾದ ಕ್ರಮವಲ್ಲ.
- ರಾಜ್ಯಾಧ್ಯಕ್ಷರು ಹೆಸರಿನ ಮುಂದೆ ನಾಡೋಜ ಪದ ಬಳಕೆ ನಿಲ್ಲಿಸಬೇಕು. ಸಚಿವ ದರ್ಜೆ ಸ್ಥಾನಮಾನ ಬಿಡಬೇಕು. ದಿನ ಭತ್ಯೆ 5 ಸಾವಿರ ರೂ. ಪಡೆಯಬಹುದು ಎಂದು ಮಾಡಲಾಗಿದೆ. ಕಾರ್ಯಕಾರಿ ಸಮಿತಿಯಲ್ಲಿ ಲೆಕ್ಕಪತ್ರ ಮಂಡಿಸಿ ಭತ್ಯೆ ಪಡೆಯಬೇಕು.
- ತತ್ವ ರಸಾಯನ ಎಂಬ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಮಗಳ ರಂಗ ಪ್ರವೇಶ ಮಾಡಿದ್ದಾರೆ. ಪರಿಷತ್ ಹಣ ಖರ್ಚು ಮಾಡಿದ್ದರೆ ಅದನ್ನು ವಾಪಸ್ ನೀಡಬೇಕು.
- ರಾಜ್ಯಾಧ್ಯಕ್ಷರನ್ನು ಬದಲಿಸಿ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂಬ ಹಕ್ಕೊತ್ತಾಯ ಮಂಡಿಸಲು ಮೇ 17ರಂದು ಆಜೀವ ಸದಸ್ಯರು, ಪದಾಧಿಕಾರಿಗಳ ಸಮಾವೇಶ ನಡೆಯಲಿದೆ.

ಸಾಹಿತ್ಯ ಪರಿಷತ್ತಿನ ಇತ್ತೀಚಿನ ಬೆಳವಣಿಗೆ ಅನೇಕ ಗೊಂದಲ ಸೃಷ್ಟಿಯಾಗಿದೆ. ಮಂಡ್ಯ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚದ ಲೆಕ್ಕ ಕೊಟ್ಟಿಲ್ಲ. ಆಗಲೇ ಬಳ್ಳಾರಿ ಸಮ್ಮೇಳನಕ್ಕೆ 40 ಕೋಟಿ ರೂ. ಬೇಡಿಕೆ ಸಲ್ಲಿಸಲಾಗುತ್ತಿದೆ. ಲೆಕ್ಕ ಕೇಳಿದವರ ವಿರುದ್ಧ ಜೀವ ಬೆದರಿಕೆ ದೂರು ನೀಡಿದ್ದಾರೆ.
– ಬಿ.ಚಂದ್ರೇಗೌಡ, ಪತ್ರಕರ್ತ
ಪ್ರಮುಖರಾದ ಕೆ.ಪಿ.ಶ್ರೀಪಾಲ್, ಡಾ. ಶೇಖರ್ ಗೌಳೇರ್, ಸಂಗಮೇಶ್ವರ, ಪ್ರಕಾಶ್, ಕೃಷ್ಣಮೂರ್ತಿ ಸೇರಿ ಹಲವರು ಇದ್ದರು.







