ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಡಿಸೆಂಬರ್ 2021
24 ಗಂಟೆ ನೀರು ಪೂರೈಕೆ ಮಾಡುವ ಮಹತ್ವಾಕಾಂಕ್ಷೆ ಯೋಜನೆಯ ನಲ್ಲಿಗಳ ಕಳ್ಳತನ ಪ್ರಕರಣಗಳು ಹಚ್ಚಾಗಿದೆ. ನೆಹರೂ ರಸ್ತೆಯಲ್ಲಿ ಅಂಗಡಿಗಳ ಮುಂದೆ ಅಳವಡಿಸಿದ್ದ ನಲ್ಲಿಗಳು ನಿತ್ಯ ಕಳವಾಗುತ್ತಿವೆ. ಬಹುತೇಕ ನಲ್ಲಿಗಳು ಕುಡುಕರ ಪಾಲಾಗುತ್ತಿವೆ.
ಶಿವಮೊಗ್ಗದಲ್ಲಿ 24×7 ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಮನೆಗಳು, ಅಂಗಡಿಗಳಿಗೆ ಪ್ರತ್ಯೇಕ ನೀರಿನ ಪೈಪ್, ಮೀಟರ್ ಅಳವಡಿಸಲಾಗುತ್ತಿದೆ. ಶಿವಮೊಗ್ಗದ ನೆಹರೂ ರಸ್ತೆಯಲ್ಲೂ ನೀರಿನ ಪೈಪ್ ಅಳವಡಿಸಲಾಗಿದೆ. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಲ್ಲಿಗಳು ಕಣ್ಮರೆಯಾಗುತ್ತಿವೆ. ಈ ಬಗ್ಗೆ ಅಂಗಡಿ ಮಾಲೀಕರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.
ಕುಡುಕರ ಪಾಲಾಗುತ್ತಿವೆ ನಲ್ಲಿಗಳು
ಒಂದು ತಿಂಗಳಿಂದ ಈಚೆಗೆ ಶಿವಮೊಗ್ಗದ ನೆಹರೂ ರಸ್ತೆಯಲ್ಲಿ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ ನಿತ್ಯ ಒಂದೊಂದು ಅಂಗಡಿ ಮುಂದಿನ ನಲ್ಲಿ ಕಳ್ಳತನವಾಗುತ್ತಿದೆ. ಬಹುತೇಕ ನಲ್ಲಿಗಳನ್ನು ಕುಡುಕರು ಕದಿಯುತ್ತಿದ್ದಾರೆ ಎಂಬ ಅಪಾದನೆ ಇತ್ತು. ಈಗ ವಿಡಿಯೋ ಸಾಕ್ಷಿಯು ಲಭ್ಯವಾಗಿದೆ.
ಅಂಗಡಿ ತೆರೆಯುವ ಮೊದಲೆ ಕಳ್ಳತನ
ಅಂಗಡಿಗಳ ಬಾಗಿಲು ತೆಗೆಯುವ ಮೊದಲೆ ನಲ್ಲಿಗಳ ಕಳ್ಳತನವಾಗುತ್ತಿದೆ. ನಲ್ಲಿ ಕಳ್ಳತನ ಮಾಡುತ್ತಿರುವುದನ್ನು ಸ್ಥಳೀಯರೊಬ್ಬರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಅಂಗಡಿಯೊಂದರ ಮುಂದೆ ಅಳವಡಿಸಿದ್ದ ನಲ್ಲಿಯನ್ನು ವ್ಯಕ್ತಿಯೊಬ್ಬ ಕಳಚಿಕೊಂಡು ಹೋಗುವ ದೃಶ್ಯ ಸೆರೆಯಾಗಿದೆ. ಸ್ವಲ್ಪ ಹೊತ್ತಿನಲ್ಲಿ ಸಂಪೂರ್ಣ ಪಾನಮತ್ತನಾಗಿ ಬರುವ ಆ ವ್ಯಕ್ತಿ, ನೆಹರೂ ರಸ್ತೆಯ ಡಿವೈಡರ್ ಮೇಲೆ ಬಂದು ಮಲಗುವುದು ದೃಶ್ಯದಲ್ಲಿ ಸೆರೆಯಾಗಿದೆ.
ನೆಹರೂ ರಸ್ತೆಯಲ್ಲಿ ನಿತ್ಯ ಇಂತಹ ಪ್ರಕರಣಗಳು ವರದಿಯಾಗುತ್ತಿವೆ ಎಂದು ಇಲ್ಲಿಯ ಅಂಗಡಿ ಮಾಲೀಕರು ಆರೋಪಿಸುತ್ತಾರೆ. ಇದು ಹೀಗೆ ಮುಂದುವರೆದರೆ ನೀರಿನ ಪೈಪ್’ಗಳು ಕೂಡ ಕಳ್ಳತನವಾಗುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕಿದೆ. ನಲ್ಲಿ ಕಳ್ಳತನದ ಬಗ್ಗೆ ಯಾರೊಬ್ಬರೂ ಪೊಲೀಸರಿಗೆ ದೂರು ನೀಡುವುದಿಲ್ಲ. ಇದೆ ಕಾರಣಕ್ಕೆ ನಲ್ಲಿ ಕಳ್ಳತನಕ್ಕೆ ತಡೆಯಿಲ್ಲದಂತೆ ಆಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200