ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 OCTOBER 2023
SHIMOGA : ನೇತ್ರಾವತಿ ಆನೆ ‘ದಿಢೀರ್’ ಮರಿ ಹಾಕಿದ ಬೆನ್ನಿಗೆ ಶಿವಮೊಗ್ಗದಲ್ಲಿ ಜಂಬೂ ಸವಾರಿ ನಡೆಯಲಿದೆಯೆ ಎಂಬ ಅನುಮಾನ ಮೂಡಿದೆ. ಈ ಮಧ್ಯೆ ನೇತ್ರಾವತಿ ಮತ್ತು ಮರಿಯನ್ನು ಸಕ್ರೆಬೈಲಿಗೆ ಕರೆದೊಯ್ಯಲಾಗಿದೆ. ಮತ್ತೊಂದೆಡೆ ಗರ್ಭವತಿಯಾದ (Pregnancy) ಆನೆಯನ್ನು ತಾಲೀಮಿಗೆ ಕರೆತಂದಿದ್ದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಸಕ್ರೆಬೈಲಿಗೆ ಆನೆ, ಮರಿ
ಕಳೆದ ರಾತ್ರಿ ವಾಸವಿ ಶಾಲೆ ಆವರಣದಲ್ಲಿ ಸಕ್ರೆಬೈಲಿನ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ವೈದ್ಯರ ಸೂಚನೆ ಮೇರೆಗೆ ನೇತ್ರಾವತಿ ಮತ್ತು ಹೆಣ್ಣು ಮರಿಯನ್ನು ಲಾರಿ ಮೂಲಕ ಸಕ್ರೆಬೈಲು ಬಿಡಾರಕ್ಕೆ ಕರೆದೊಯ್ಯಲಾಗಿದೆ. ಆನೆ ಮರಿ ಹಾಕಿರುವ ವಿಷಯ ತಿಳಿಯುತ್ತಿದ್ದಂತೆ ನಗರದ ವಿವಿಧೆಡೆ ಜನರು ವಾಸವಿ ಶಾಲೆ ಆವರಣಕ್ಕೆ ಬಂದು ಮರಿಯನ್ನು ಕಣ್ತುಂಬಿಕೊಂಡರು. ತಾಯಿಯ ಮೈ ಸವರಿಕೊಂಡು ಚಿನ್ನಾಟವಾಡುತ್ತ ಓಡಾಡುತ್ತಿದ್ದ ಮರಿಯನ್ನು ನೋಡಿ ಜನ ಖುಷಿಪಟ್ಟರು.
ನಡೆಯುತ್ತಾ ಜಂಬೂ ಸವಾರಿ?
ಅಂಬಾರಿ ಹೊರುವ ಗಂಡಾನೆ ಅಕ್ಕಪಕ್ಕದಲ್ಲಿ ಎರಡು ಹೆಣ್ಣಾನೆ ಇರಬೇಕು. ಸಾಗರ ಆನೆ ಅಂಬಾರಿ ಹೊರಲು ಸಿದ್ಧವಾಗಿದೆ. ಆದರೆ ನೇತ್ರಾವತಿ ಆನೆಯನ್ನು ಸಕ್ರೆಬೈಲು ಬಿಡಾರಕ್ಕೆ ಕಳುಹಿಸಲಾಗಿದೆ. ದಿಢೀರನೆ ಮತ್ತೊಂದು ಆನೆಯನ್ನು ಜಂಬೂ ಸವಾರಿಗೆ ನಿಯೋಜನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಜಂಬೂ ಸವಾರಿ ನಡೆಯಲಿದೆಯ, ಆನೆ ಮೇಲೆ ಅಂಬಾರಿ ಹೊರಿಸಲಾಗುತ್ತದೆಯೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದೆ ವಿಚಾರವಾಗಿ ಮಹಾನಗರ ಪಾಲಿಕೆಯಲ್ಲಿ ಮಹತ್ವದ ಸಭೆ ಕರೆಯಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮರಿ ಹಾಕಿತು ಜಂಬೂ ಸವಾರಿಗೆ ಬಂದಿದ್ದ ಆನೆ..!
ಗರ್ಭವತಿಯಾದರು ತಾಲೀಮು, ಅಸಮಾಧಾನ
ಇತ್ತ ನೇತ್ರಾವತಿ ಆನೆ ಗರ್ಭವತಿಯಾದ ವಿಚಾರ ಅರಣ್ಯ ಇಲಾಖೆಗೆ, ಸಕ್ರೆಬೈಲು ಬಿಡಾರದ ಸಿಬ್ಬಂದಿಗೆ, ವೈದ್ಯರಿಗೆ ಗೊತ್ತಿಲ್ಲದಿರುವುದು ಆಶ್ಚರ್ಯ ಉಂಟು ಮಾಡಿದೆ. ವನ್ಯಜೀವಿ ವಿಭಾಗದ ವೈದ್ಯ ಡಾ. ವಿನಯ್ ಮಾಧ್ಯಮಗಳ ಜೊತೆ ಮಾತನಾಡುವಾಗ, 19ನೇ ತಿಂಗಳಲ್ಲಿನ ನೇತ್ರಾವತಿ ಹೆಣ್ಣಾನೆಗೆ ಜನ್ಮ ನೀಡಿರಬಹುದು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಿದ್ದೂ, ಆನೆ ಗರ್ಭವತಿಯಾಗಿರುವುದು ಯಾರಿಗು ತಿಳಿಯದಿರುವುದು ಆಶ್ಚರ್ಯ ಹುಟ್ಟಿಸಿದೆ. ಗರ್ಭವತಿಯಾದ ಆನೆಯನ್ನು ತಾಲೀಮಿಗೆ ಬಳಸಿದ್ದು ಕೂಡ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಟ್ರಾಫಿಕ್ ರೂಲ್ಸ್ ಪಾಲಿಸಿದ ದಸರಾ ಆನೆಗಳು, ಫೋಟೊ ವೈರಲ್, ಆಗಿದ್ದೇನು?
ಮೈಸೂರು ದಸರಾಗೆ ಹೋಬೇಕಿತ್ತು..!
ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಆನೆಗಳ ತಲಾಷ್ ನಡೆಯುತ್ತಿತ್ತು. ಆಗ ಸಕ್ರೆಬೈಲು ಬಿಡಾರದ ಆನೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದರು. ಈ ಹಿನ್ನೆಲೆ ಬಿಡಾರದ ಆನೆಗಳ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಆಗ ಪ್ರೆಗ್ನೆನ್ಸಿ ಟೆಸ್ಟ್ ಕೂಡ ನಡೆದಿತ್ತು. ಭಾನುಮತಿ ಆನೆ ಗರ್ಭವತಿಯಾಗಿದೆ ಅನ್ನುವುದು ಆ ಟೆಸ್ಟ್ನಿಂದ ತಿಳಿದು ಬಂದಿತ್ತು. ಹಾಗಾಗಿ ಈ ಬಾರಿ ಶಿವಮೊಗ್ಗ ದಸರಾಗೆ ಭಾನುಮತಿಯನ್ನು ಕಳುಹಿಸಲು ನಿರಾಕರಿಸಲಾಗಿತ್ತು. ಆದರೆ ನೇತ್ರಾವತಿ ಆನೆ ಗರ್ಭವತಿಯಲ್ಲ ಎಂದು ರಿಪೋರ್ಟ್ನಲ್ಲಿ ತಿಳಿಸಲಾಗಿತ್ತು. ಹಾಗಾಗಿ ಅದನ್ನು ಮೈಸೂರಿಗೆ ಕಳುಹಿಸುವಂತೆ ಅಧಿಕಾರಿಗಳು ತಿಳಿಸಿದ್ದರು. ಶಿವಮೊಗ್ಗ ದಸರಾ ಹಿನ್ನೆಲೆ ಅದನ್ನು ಇಲ್ಲಿಯೇ ಉಳಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗ ಜಂಬೂ ಸವಾರಿ, ಗಜಪಡೆಗೆ ಕೊನೆ ಹಂತದ ತಾಲೀಮು, ಬನ್ನಿ ಮಂಟಪ ರೆಡಿ, ಹೇಗಿದೆ ವ್ಯವಸ್ಥೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422