ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಯಾವುದೇ ಸಂಸ್ಥೆಗೆ ಹಸ್ತಾಂತರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ವಿಮಾನ ನಿಲ್ದಾಣದ ಸಂಪೂರ್ಣ ಮಾಲೀಕತ್ವ ಮತ್ತು ಆಸ್ತಿ ರಾಜ್ಯ ಸರ್ಕಾರದ ಬಳಿಯೇ ಇರಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಯ್ಯನ ಮಠ್ ತಿಳಿಸಿದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಯಶಸ್ವಿ ಹಾಗೂ ವೃತ್ತಿಪರ ನಿರ್ವಹಣೆಗಾಗಿ ನಿಗಮವು ಆಸಕ್ತಿ ಅಭಿವ್ಯಕ್ತಿ ಆಹ್ವಾನಿಸಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ. ವಿವಿಧ ರೀತಿಯ ಕೆಲಸಗಳ ನಿರ್ವಹಣೆಯನ್ನು ಸುಮಾರು 33 ಏಜೆನ್ಸಿಗಳಿಗೆ ವಹಿಸಲಾಗಿದೆ. ಸ್ಥಳೀಯ ಅಧಿಕಾರಿಗಳ ವರದಿ ಆಧರಿಸಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳನ್ನು ಮಾತ್ರ ಮುಂದುವರಿಸಲಾಗುವುದು. ಲೋಪ ಕಂಡುಬಂದ ಕಂಪನಿಗಳನ್ನು ಕೈಬಿಟ್ಟು ಬೇರೆಯವರಿಗೆ ಜವಾಬ್ದಾರಿ ನೀಡಲಾಗುತ್ತದೆ ಎಂದರು.

ಹೊಸ ವಿಮಾನ ಮಾರ್ಗಗಳ ಪ್ರಸ್ತಾವನೆ
ಮುಂಬಾಯಿ, ಅಹಮದಾಬಾದ್, ಕೊಲ್ಲಾಪುರ, ಪುಣೆ ಮತ್ತು ಮೈಸೂರು ಮಾರ್ಗಗಳಿಗೆ ವಿಮಾನಯಾನ ವಿಸ್ತರಿಸಲು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಕ್ಟೋಬರ್‌ನಿಂದ ಬೆಂಗಳೂರು – ಶಿವಮೊಗ್ಗ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಲು ಸ್ಟಾರ್ ಏರ್‌ಲೈನ್ಸ್ ಆಸಕ್ತಿ ತೋರಿದೆ. ಸ್ಪೈಸ್‌ಜೆಟ್ ಹಾಗೂ ಏರ್‌ಇಂಡಿಯಾ ಸಂಸ್ಥೆಗಳ ಜೊತೆಗೂ ಸಮಾಲೋಚನೆ ನಡೆಸಲಾಗುತ್ತಿದೆ.
ನೈಟ್ ಲ್ಯಾಂಡಿಂಗ್ ಶೀಘ್ರ
ರಾತ್ರಿ ವೇಳೆಯಲ್ಲೂ ವಿಮಾನಗಳ ಸುರಕ್ಷಿತ ಇಳಿಕೆಗೆ ಅಗತ್ಯವಿರುವ ತಾಂತ್ರಿಕ ಕಾಮಗಾರಿ ಶೇ.85 ರಷ್ಟು ಪೂರ್ಣಗೊಂಡಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಈ ಸೌಲಭ್ಯ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಪ್ರಸ್ತುತ ಹೈದರಾಬಾದ್, ತಿರುಪತಿ ಮತ್ತು ಗೋವಾಕ್ಕೆ ಎಂದಿನಂತೆ ವಿಮಾನಗಳ ಹಾರಾಟ ಮುಂದುವರಿದಿದೆ ಎಂದರು. ಈ ಸಂದರ್ಭ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ದೇಶಕ ಶಮಂತ್, ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ವಿದ್ಯಾಧರ ಸಾಲಿಮಠ, ರುದ್ರಪ್ಪ ಸೇರಿ ಹಲವರು ಇದ್ದರು.