ಶಿವಮೊಗ್ಗದ ಲೈವ್.ಕಾಂ | SHIMOGA NEWS | 31 ಡಿಸೆಂಬರ್ 2021
ಶಿವಮೊಗ್ಗ ಜನರಿಗೆ ಸ್ಮಾರ್ಟ್‌ಸಿಟಿ ಯೋಜನೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಕಾಮಗಾರಿ ಪೂರ್ಣಗೊಳಿಸಲು 2023 ಅಂತಿಮ ಗಡುವಾದರೂ 2030 ಆದರೂ ಅದು ಮುಗಿಯುವ ಲಕ್ಷಣಗಳಿಲ್ಲ. ಹೊಂದಾಣಿಕೆ ಕೊರತೆಯಿಂದ ಯೋಜನೆ ಹಳ್ಳ ಹಿಡಿದಿದೆ ಎಂದು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಇದೇ ಸಮಯದಲ್ಲಿ ಪಾಲಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.
![]() |
ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಆರ್.ಸಿ.ನಾಯ್ಕ, ಸ್ಮಾರ್ಟ್‌ಸಿಟಿ ಯೋಜನೆಗೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ಒಂದೆಡೆ ಪಾದಚಾರಿ ಮಾರ್ಗ ಕಾಮಗಾರಿ ನಡೆಯುತ್ತಿದ್ದರೆ ಮತ್ತೊಂದೆಡೆ ತಳ್ಳುವ ಗಾಡಿ ಇಟ್ಟುಕೊಳ್ಳಲು ಅವಕಾಶ ನೀಡಲಾಗುತ್ತಿದೆ. ವಾಹನ ನಿಲುಗಡೆಗೆ ಜಾಗವಿಲ್ಲದೆ ಸವಾರರು ರಸ್ತೆ ಮೇಲೆ ವಾಹನ ನಿಲ್ಲಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕಿಡಿಕಾರಿದರು.
‘ಒಂದೇ ರಸ್ತೆಯನ್ನು ನಾಲ್ಕೈದು ಬಾರಿ ಅಗಿದಿದ್ದಾರೆ’
ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ಆರ್.ಪ್ರಸನ್ನಕುಮಾರ್ ಸೇರಿ ಎಲ್ಲ ಪಕ್ಷದ ಸದಸ್ಯರು, ಪಾಲಿಕೆ ಆಯುಕ್ತ ಹಾಗೂ ಹಾಗೂ ಸ್ಮಾರ್ಟ್ ಸಿಟಿ ಎಂಡಿ ಚಿದಾನಂದ ವಟಾರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದಾಗಿ ಕಳೆದೊಂದು ವರ್ಷದಿಂದ ಒಂದೇ ರಸ್ತೆಯನ್ನು ನಾಲೈದು ಬಾರಿ ಅಗೆದು ಸಂಚಾರ ಅಸ್ತವ್ಯಸ್ತ ಮಾಡಲಾಗಿದೆ. ಇದು ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
‘ನಾವು ಬೈಗುಳ ಕೇಳಬೇಕಾಗಿದೆ’
ಜೆಡಿಎಸ್‌ನ ನಾಗರಾಜ್ ಕಂಕಾರಿ, ಕಾಂಗ್ರೆಸ್‌ನ ಎಚ್.ಸಿ.ಯೋಗೇಶ್, ಬಿ.ಎ.ರಮೇಶ್ ಹೆಗ್ಡೆ ಮಾತನಾಡಿ, ಪಾಲಿಕೆ ಸದಸ್ಯರನ್ನು ಜನರು ಬೈಯ್ಯುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾವು ಬೈಗುಳ ಕೇಳಬೇಕಾಗಿದೆ. ಅಧಿಕಾರಿಗಳು ವರ್ಗಾವಣೆಗೊಂಡರೂ ಸಂಬಳ ಮತ್ತು ಸೌಲಭ್ಯ ಸಿಗುತ್ತವೆ. ಆದರೆ ಅವರು ಮಾಡಿದ ತಪ್ಪಿಗೆ ನಾವು ಮಾತು ಕೇಳಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಚಿದಾನಂದ ವಟಾರೆ, ಸ್ಮಾರ್ಟ್‌ಸಿಟಿ ಕಾಮಗಾರಿ ಪೂರ್ಣಗೊಳ್ಳುವ ಅವಧಿ 2022ರ ಮೇನಿಂದ 2023ರ ಜೂನ್ ವರೆಗೆ ವಿಸ್ತರಿಸಲಾಗಿದೆ. 8 ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಲ್ಲಿ ಒಳಚರಂಡಿ, ಪಾದಚಾರಿ ಮಾರ್ಗ ಸೇರಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ನಾನೂ ಸೇರಿ ಅಧಿಕಾರಿಗಳು ಕಾಲಕಾಲಕ್ಕೆ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಆದರೆ ಕರೋನಾ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ನಿರ್ದಿಷ್ಟ ಸಮಸ್ಯೆಯನ್ನು ಗಮನಕ್ಕೆ ತಂದರೆ ಬಗೆಹರಿಸಲಾಗುವುದು ಎಂದು ಹೇಳಿದರು.
‘ದೋಚುವುದಕ್ಕಾಗಿಯೇ ಯೋಜನೆ ಅನುಷ್ಠಾನ’
ಸ್ಮಾರ್ಟ್‌ಸಿಟಿ ಉತ್ತಮ ಯೋಜನೆಯಾಗಿದ್ದು ಇದರಿಂದ ಮಾದರಿ ನಗರ ನಿರ್ಮಾಣ ಆಗಬೇಕಿತ್ತು. ಶಿವಮೊಗ್ಗಕ್ಕೆ ವರದಾನವಾಗಬೇಕಿತ್ತು. ಆದರೆ ಅಧಿಕಾರಿಗಳಿಂದ ಶಾಪವಾಗಿದೆ. ಇಲ್ಲಿ ಅಧಿಕಾರಿಗಳು ದೋಚುವುದಕ್ಕಾಗಿ ಬಂದಿದ್ದಾರೆ ಅಷ್ಟೆ ಎಂದು ಎಂದು ಎಂಎಲ್‌ಸಿ ಆರ್.ಪ್ರಸನ್ನಕುಮಾರ್ ದೂರಿದರು.
ನಾನು ವಾಸವಿರುವ ವಾರ್ಡ್‌ನಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಬಗ್ಗೆ ನನಗೇ ಮಾಹಿತಿ ನೀಡಿಲ್ಲ. ಕಾಮಗಾರಿಯಿಂದ ತಮಗೆ ಎಷ್ಟು ಪಾಲು ಬರುತ್ತದೆ ಎಂಬುದನ್ನಷ್ಟೇ ಅಧಿಕಾರಿಗಳು ನೋಡುತ್ತಿದ್ದಾರೆ. ಮೇಯರ್‌ಗೂ ಅರ್ಧಂಬರ್ಧ ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ ಎಂದು ಚಿದಾನಂದ ವಟಾರೆ ವಿರುದ್ಧ ಕಿಡಿಕಾರಿದರು.
‘ಇದು ಸರ್ವಾಧಿಕಾರ ಆಗಿದೆ’
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಮನಸ್ಸಿಗೆ ಬಂದಂತೆ ನಡೆಸಲಾಗಿದೆ. ನಿಯಮ ಗಾಳಿಗೆ ತೂರಲಾಗುತ್ತಿದೆ. ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳ ಸಲಹೆ ಪಡೆದು ಅವರನ್ನು ಒಗ್ಗೂಡಿಸಿ ಕೊಳ್ಳಬೇಕಿತ್ತು. ಆದರೆ ಆ ಕೆಲಸ ಇಲ್ಲಿ ಆಗಿಲ್ಲ. ಕೆಲಸಗಳನ್ನು ಆಯಾ ವಾರ್ಡ್‌ಗಳ ಜನಪ್ರತಿನಿಧಿಗಳಿಗೆ ತಿಳಿಸದೆ ನಡೆಸಲಾಗುತ್ತಿದೆ. ಇದು ಸರ್ವಾಧಿಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ದೇಶದ 100 ಪಾಲಿಕೆಗಳಲ್ಲಿ ಶಿವಮೊಗ್ಗಕ್ಕೂ ಸ್ಮಾರ್ಟ್‌ಸಿಟಿ ಭಾಗ್ಯ ಲಭಿಸಿದೆ. ಯೋಜನೆ ಶಾಪವಲ್ಲ, ವರ. ಆದರೆ ಅದನ್ನು ಅನುಷ್ಠಾನಗೊಳಿಸುವ ವಿಧಾನ ಸರಿಯಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆ ಆಗದೇ ನಿಧಾನಗತಿಯಲ್ಲಿ ಕಾಮಗಾರಿ ನಡೆಯುವಂತಾಯಿತು. ಬಿಜೆಪಿ ಬಂದ ಮೇಲೆ ವೇಗ ಪಡೆದುಕೊಂಡಿದೆ ಎಂದರು.
ಕಮಿಷನರ್ ಸ್ಥಳಕ್ಕೆ ಭೇಟಿ ನೀಡಬೇಕು
ಸ್ಮಾರ್ಟ್ ಸಿಟಿ ಎಂಡಿ, ಪಾಲಿಕೆ ಕಮಿಷನರ್ ಚಿದಾನಂದ ವಟಾರೆ ಅವರು ಸ್ಥಳ ಪರಿಶೀಲನೆ ನಡೆಸಿದಿರುವ ಕುರಿತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನಿತ್ಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜನರ ಸಂಕಷ್ಟ ಆಲಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಕಮಿಷನರ್ ಚಿದಾನಂದ ವಟಾರೆ ಒಪ್ಪಿಗೆ ಸೂಚಿಸಿದರು.
ಇದನ್ನೂ ಓದಿ | ಜೈಲ್ ರಸ್ತೆ ಸ್ಮಾರ್ಟ್ ಸಿಟಿ ಕಾಮಗಾರಿ ನಿಧಾನಗತಿ, ರಸ್ತೆಗಿಳಿದು ನಾಗರೀಕರು, ವ್ಯಾಪಾರಿಗಳ ಆಕ್ರೋಶ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200