ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಅಕ್ಟೋಬರ್ 2020
ಕರೋನದಿಂದ ಮೃತಪಟ್ಟ ನೂರಕ್ಕೂ ಹೆಚ್ಚು ಜನರ ದಹನ ಮಾಡಿದ್ದರು. ಕೊನೆಗೆ ಅದೆ ಕಾಯಿಲೆಗೆ ತುತ್ತಾಗಿ ಮೃತಪಟ್ಟರು. ಆದರೆ ಆತನನ್ನು ಕರೋನ ವಾರಿಯರ್ ಎಂದು ಒಪ್ಪುತ್ತಿಲ್ಲ ಸರ್ಕಾರ.
ಇದು ಶಿವಮೊಗ್ಗದ ಪಾಪನಾಯ್ಕ ಅವರ ದುರಂತ ಕಥೆ. ಅನಿಲ ಚಿತಾಗಾರದ ಹೊರಗುತ್ತಿಗೆ ನೌಕರರಾಗಿದ್ದರು ಪಾಪನಾಯ್ಕ. ಸುಮಾರು ಒಂದು ವರ್ಷದಿಂದ ಈ ಕೆಲಸ ಮಾಡುತ್ತಿದ್ದರು. ಇದೆ ಕೆಲಸದಲ್ಲಿದ್ದಾಗ ಕರೋನಾಗೆ ತುತ್ತಾಗಿ ಮೃತರಾದರು.
ಕರೋನ ಡ್ಯೂಟಿ ವೇಳೆ ಸೋಂಕು
ಕರೋನ ಶುರುವಾದಾಗಿನಿಂದ ಪಾಪನಾಯ್ಕ ಅವರದ್ದು ‘ಕರೋನ ಡ್ಯೂಟಿ’ ಎಂದು ಪರಿಗಣಿಸಲಾಯಿತು. ಈ ಮಾರಕ ಕಾಯಿಲೆಗೆ ತುತ್ತಾಗಿ ಯಾರೆ ಮೃತಪಟ್ಟರು ದಹನ ಕಾರ್ಯದ ಜವಾಬ್ದಾರಿ ಪಾಪನಾಯ್ಕ ಅವರ ಹೆಗಲಿಗೆ ಬೀಳುತ್ತಿತ್ತು. ಇತರೆ ಕರೋನ ವಾರಿಯರ್‍ಗಳ ರೀತಿ ಇದು ಕೂಡ ಮಹತ್ವದ ಜವಾಬ್ದಾರಿ. ಹಗಲು, ರಾತ್ರಿ ಎನ್ನದೆ ಡ್ಯೂಟಿ ಮಾಡುವ ಜರೂರು ಇತ್ತು. ಹೀಗೆ ಕೆಲಸ ನಿರ್ವಹಿಸುತ್ತಲೇ ಪಾಪನಾಯ್ಕ ಅವರಿಗೆ ಸೋಂಕು ತಗುಲಿತು.
VIDEO REPORT
ಬಲಿ ಪಡೆದ ಮಹಾಮಾರಿ ಕಾಯಿಲೆ
ಕೆಲ ಸಮಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆದರೆ ಅದ್ಯಾಕೋ ಚಿಕಿತ್ಸೆ ಸರಿ ಕಾಣಗಲಿಲ್ಲ. ಹೋಂ ಕ್ವಾರಂಟೈನ್ ಆದರು. ಆದರೆ ಉಲ್ಬಣಿಸಿದ್ದ ಕಾಯಿಲೆ, ಪಾಪನಾಯ್ಕ ಅವರನ್ನು ಬಲಿ ಪಡೆಯಿತು. ಸೆಪ್ಟೆಂಬರ್ 13ರಂದು ಪಾಪ ನಾಯ್ಕ ಅವರು ಮೃತರಾದರು.
ಕರೋನ ವಾರಿಯರ್ ಅಲ್ಲ
ಕರೋನ ಸೋಂಕಿನಿಂದ ಮೃತರಾದವರನ್ನು ದಹಿಸುತ್ತಿದ್ದರು ಪಾಪನಾಯ್ಕ. ಮಹಾನಗರ ಪಾಲಿಕೆಯಿಂದಲೇ ಈ ಕೆಲಸಕ್ಕೆ ಅವರನ್ನು ನಿಯೋಜಿಸಲಾಗಿತ್ತು. ಆದರೆ ಈಗ ಪಾಪನಾಯ್ಕ ಅವರು ಕರೋನ ವಾರಿಯರ್ ಅಲ್ಲ ಅಂತಾ ಹೇಳಲಾಗುತ್ತಿದೆ. ಇದೆ ಕಾರಣಕ್ಕೆ ಅವರಿಗೆ ಸರ್ಕಾರದ ಪರಿಹಾರವು ಲಭಿಸುತ್ತಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನುವುದೇ ಇದಕ್ಕೆಲ್ಲ ಕಾರಣ. ಖಾಯಂ ನೌಕರರಾಗಿದ್ದರಷ್ಟೇ ಕರೋನ ವಾರಿಯರ್ ಎಂದು ಸರ್ಕಾರ ಪರಿಗಣಿಸುತ್ತದಂತೆ.
ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ ಮಡದಿ
ಪಾಪನಾಯ್ಕ ಶಿವಮೊಗ್ಗ ತಾಲೂಕಿನ ಹೊಸಮನೆ ತಾಂಡದ ವಾಸಿ. ಅಲ್ಲಿಯೇ ಪುಟ್ಟದೊಂದು ಮನೆ. ಜಮೀನು, ತೋಟ ಯಾವುದು ಇಲ್ಲ. ಬರುವ ಸಂಬಳದಲ್ಲಿ ಜೀವನ ನಿರ್ವಹಣೆ ಕಷ್ಟವಿತ್ತು. ಇಬ್ಬರು ಮಕ್ಕಳಿದ್ದರು. ಅದರೆ ವಿಧಿ ಅದೆಷ್ಟು ಕ್ರೂರಿಯಾಗಿತ್ತು ಅಂದರೆ, ಇಬ್ಬರು ಮಕ್ಕಳು ಯಾವುದೋ ಕಾಯಿಲೆಗಳಿಂದ ಮೃತರಾದರು. ಪಾಪನಾಯ್ಕ ಅವರು ಕೊನೆಯುಸಿರೆಳೆಯುವ ಒಂದು ತಿಂಗಳು ಮೊದಲು ಒಂದು ಮಗು ಮೃತಪಟ್ಟಿದೆ. ಈಗ ಪಾಪನಾಯ್ಕ ಅವರೂ ಇಲ್ಲದೆ ಮಡದಿ ಸವಿತಾ ಒಬ್ಬಂಟಿಯಾಗಿದ್ದಾರೆ. ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಸಣ್ಣದೊಂದು ಪರಿಹಾರ, ಕೆಲಸದ ಭರವಸೆ
ಕರೋನ ವಾರಿಯರ್‍ಗಳು ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 30 ಲಕ್ಷ ರೂ. ಪರಿಹಾರ ಲಭಿಸಲಿದೆ. ಅಲ್ಲದೆ ಕರೋನ ವಾರಿಯರ್ ಎಂದು ಗುರುತಿಸಲಾಗುತ್ತದೆ. ಈವರೆಗೆ ಮೃತರಾದ ವೈದ್ಯರು, ಪೊಲೀಸರು, ಇತರೆ ಸಿಬ್ಬಂದಿಗಳಿಗೆ ಸರ್ಕಾರ ಪರಿಹಾರ ನೀಡಿದೆ. ಆದರೆ ಎಲ್ಲರಂತೆ ಕೋವಿಡ್ ಡ್ಯೂಟಿ ಮಾಡಿದ್ದ ಪಾಪನಾಯ್ಕ ಅವರನ್ನು ಹೊರಗುತ್ತಿಗೆ ನೌಕರ ಎಂಬ ಕಾರಣಕ್ಕೆ ಕರೋನ ವಾರಿಯರ್ ಎಂದು ಪರಿಗಣಿಸಿಲ್ಲ. ಹಾಗಾಗಿ ಪರಿಹಾರವು ಇಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ 3 ಲಕ್ಷ ರೂ. ಪರಿಹಾರದ ಭರವಸೆ ನೀಡಲಾಗಿದೆ. ಸವಿತಾ ಅವರಿಗೆ ಒಂದು ಹೊರ ಗುತ್ತಿಗೆ ನೌಕರಿಯ ಭರವಸೆಯನ್ನೂ ನೀಡಲಾಗಿದೆ.
ವಿಶೇಷ ಪ್ರಕರಣ ಎಂದೇಕೆ ಪರಿಗಣಿಸುತ್ತಿಲ್ಲ?
ಪಾಪನಾಯ್ಕ ಅವರು ಕೋವಿಡ್ ಡ್ಯೂಟಿಯಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್ ಸೋಂಕಿನಿಂದ ಮೃತಪಟ್ಟ ನೂರಕ್ಕೂ ಹೆಚ್ಚು ಜನರ ದಹನ ಮಾಡಿದ್ದರು. ಇದಕ್ಕೆಲ್ಲ ಪಾಲಿಕೆ ಬಳಿಯೇ ಆಧಾರವಿದೆ. ಹಾಗಿದ್ದೂ, ವಿಶೇಷ ಪ್ರಕರಣ ಎಂದು ಪರಿಗಣಿಸಿ, ಪಾಪನಾಯ್ಕ ಅವರನ್ನು ಕರೋನ ವಾರಿಯರ್ ಎಂದು ಘೋಷಿಸಿ, ಕುಟುಂಬಕ್ಕೆ ಪರಿಹಾರ ನೀಡಬೇಕಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422