ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ನವೆಂಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸ್ಮಾರ್ಟ್ ಸಿಟಿ ಶಿವಮೊಗ್ಗದಲ್ಲಿ ಗುಂಡಿಗಳಿಗೇನು ಕಡಿಮೆಯಿಲ್ಲ. ಯೋಜನೆ ವ್ಯಾಪ್ತಿಯ ವಾರ್ಡ್’ಗಳಲ್ಲಿ ಎಣಿಸಲಾಗದಷ್ಟು ಗುಂಡಿಗಳಿವೆ. ಕೆಲವು ಕಡೆಯಂತೂ ಗುಂಡಿಗಳ ಮಧ್ಯೆ ರಸ್ತೆ ಇದೆಯೋ, ರಸ್ತೆಯಲ್ಲಿ ಗುಂಡಿಗಳಿವೆಯೋ ಅನ್ನುವುದೆ ಗೊಂದಲ. ಯೋಜನೆ ವ್ಯಾಪ್ತಿಯ ಹೊರಗಿರುವ ವಾರ್ಡುಗಳಲ್ಲೂ ಇದೇ ಪರಿಸ್ಥಿತಿ. ಅದಕ್ಕೆ ಸಾಕ್ಷಿ ತುಂಗಾ ನದಿ ಹೊಸ ಸೇತುವೆ ಮೇಲಿನ ಸ್ಥಿತಿ.
ತುಂಗಾ ನದಿಯ ಹೊಸ ಸೇತುವೆ ಗುಂಡಿಯಮಯವಾಗಿದೆ. ಈ ಸೇತುವೆ ಮೇಲೆ ವಾಹನ ಚಲಾಯಿಸುವವರು ಗುಂಡಿ ತಪ್ಪಿಸಲು ಹೋಗಿ ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳುವ ಆತಂಕವಿದೆ.
ಗಡಿ ಆಂಜನೇಯನಿಗೆ ಕೈ ಮಗಿದೇ ಬರಬೇಕು
ಸೇತುವೆ ಮೇಲೆ ಒಂದಕ್ಕಿಂತಲೂ ಒಂದು ಭಯಾನಕ ಗುಂಡಿಗಳಿವೆ. ದ್ವಿಚಕ್ರ ವಾಹನ ಸವಾರರ ಪಾಲಿಗಂತಲೂ ಕೆಲವು ಗುಂಡಿಗಳು ಯಮಸ್ವರೂಪಿಯಾಗಿವೆ. ‘ಸೇತುವೆ ಮೇಲೆ ಗಾಡಿ ತೆಗೆದುಕೊಂಡು ಹೋಗುವವರನ್ನು ಪಕ್ಕದಲ್ಲಿರುವ ಗಡಿ ಆಂಜನೇಯ ಸ್ವಾಮಿಯೇ ಕಾಪಾಡಬೇಕು. ಗುಂಡಿ ತಪ್ಪಿಸಿಕೊಂಡು ಹೋಗುವುದು ಬಹಳ ಕಷ್ಟಕರವಾಗಿದೆ’ ಅಂತಾರೆ ಗೂಡ್ಸ್ ವಾಹನ ಚಾಲಕ ರಾಜೇಂದ್ರ.
ಅಪಘಾತ ತಪ್ಪಿಸುವುದೇ ಕಷ್ಟ
ಬಸ್ಸು, ಲಾರಿ, ಗೂಡ್ಸ್ ವಾಹನಗಳನ್ನು ಹಳೆ ಸೇತುವೆ ಮೇಲೆ ಬಿಡುವುದಿಲ್ಲ. ಹಾಗಾಗಿ ವಿದ್ಯಾನಗರ ಕಡೆಯಿಂದ ಬರುವ ಭಾರಿ ವಾಹನಗಳು ನೇರವಾಗಿ ಹೊಸ ಸೇತುವೆಗೆ ನುಗ್ಗುತ್ತವೆ. ಇತ್ತ ಬೆಕ್ಕಿನಕಲ್ಮಠ ಕಡೆಯಿಂದ ವಿದ್ಯಾನಗರ ಕಡೆಗೆ ಬರುವ ವಾಹನಗಳು ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಸ್ವಲ್ಪ ಬಲ ಭಾಗಕ್ಕೆ ಬಂದರೂ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆದುಕೊಳ್ಳುತ್ತವೆ.
ಸೇತುವೆ ಮಧ್ಯದಲ್ಲಿ ಯಮನೆ ಕಾದು ಕೂತಿದ್ದಾನೆ
ಸೇತುವೆ ಮಧ್ಯಭಾಗದಲ್ಲಿ ಭಾರಿ ಗಾತ್ರದ ಗುಂಡಿ ಇದೆ. ಬಸ್ಸು, ಲಾರಿ ಹೊರತು ಉಳಿದೆಲ್ಲ ವಾಹನ ಸವಾರರ ಪಾಲಿಗೆ ಈ ಗುಂಡಿ ಸಾಕ್ಷಾತ್ ಯಮನೆ ಬಾಯ್ತೆರೆದು ಕುಳಿತಂತೆ ಗೋಚರಿಸುತ್ತದೆ. ಸೇತುವೆ ಮಧ್ಯದಲ್ಲಿ ರಸ್ತೆ ಚನ್ನಾಗಿದೆ ಎಂದು ವಾಹನದ ವೇಗ ಹೆಚ್ಚಿಸುವ ಹೊತ್ತಿಗೆ ಈ ಗುಂಡಿ ಪ್ರತ್ಯಕ್ಷವಾಗಲಿದೆ. ಇದನ್ನು ತಪ್ಪಿಸಲು ವಾಹನವನ್ನು ಅತ್ತಿತ್ತ ತಿರುಗಿಸಲು ಹೋದರೆ ಅಪಘಾತ ಕಟ್ಟಿಟ್ಟ ಬುತ್ತಿ. ಈಗಾಗಲೇ ಈ ಗುಂಡಿಯ ದಿಸೆಯಿಂದ ಹಲವರು ಗಾಯಗೊಂಡಿದ್ದಾರೆ.
ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ರಸ್ತೆಗಳಲ್ಲಿ ಗುಂಡಿಗಳಾಗಿವೆ. ಆದರೆ ಯೋಜನೆ ವ್ಯಾಪ್ತಿಯ ಹೊರಗಿರುವ ವಾರ್ಡುಗಳು, ಅಲ್ಲಿನ ಮುಖ್ಯ ರಸ್ತೆಗಳಲ್ಲೂ ಇದೇ ಪರಿಸ್ಥಿತಿ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗುಂಡಿಗಳಿಂದ ಜನರ ಜೀವಕ್ಕೆ ಗಂಡಾಂತರ ಎದುರಾಗುವ ಮೊದಲು ಇವುಗಳಿಗೆ ಮುಕ್ತಿ ನೀಡುವತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಚಿಂತಿಸಬೇಕಿದೆ.