SHIMOGA, 6 SEPTEMBER 2024 : ಬ್ರ್ಯಾಂಡ್ ಶಿವಮೊಗ್ಗವನ್ನು (Brand Shivamogga) ಬೆಳೆಸಲು, ಶಾಂತಿ, ಸೌರ್ಹಾದತೆ ಕಾಪಾಡುವಂತೆ ಜಾಗೃತಿ ಮತ್ತು ತಿಳಿವಳಿಕೆ ಮೂಡಿಸಲು ಸೆ.12ರಂದು ಸೌರ್ಹಾದವೇ ಹಬ್ಬ ಜಾಥಾ ಆಯೋಜಿಸಲಾಗಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು ಜಾಥಾ ಮತ್ತು ಕಾರ್ಯಕ್ರಮದ ಉದ್ದೇಶ ಮತ್ತು ಸ್ವರೂಪ ವಿವರಿಸಿದರು.
ಯಾರೆಲ್ಲ ಏನೆಲ್ಲ ಹೇಳಿದರು?
ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಶಿವಮೊಗ್ಗದ ಜನ ಶಾಂತಿ ಪ್ರಿಯರು. ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬಗಳು ಜೊತೆಗೆ ಬರುತ್ತವೆ. ಈ ಮೂಲಕ ಸೌರ್ಹಾತೆ ಸಾರುತ್ತಿವೆ. ನಾವು ಮೂರನೆ ವರ್ಷದ ಶಾಂತಿಯ ನಡಿಗೆ ಮಾಡುತ್ತಿದ್ದೇವೆ. ಎಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೇವೆ. ಸೆ.12ರಂದು ಮಧ್ಯಾಹ್ನ 3 ಗಂಟೆಗೆ ಮೆಗ್ಗಾನ್ ಆಸ್ಪತ್ರೆಯಿಂದ ಹೊರಟು ಸೈನ್ಸ್ ಮೈದಾನ ತಲುಪಲಿದೆ. ಅಲ್ಲಿ ಧರ್ಮಗುರುಗಳು ಸಂದೇಶ ನೀಡಲಿದ್ದಾರೆ. ಯಾವುದೇ ರಾಜಕೀಯ ನಾಯಕರು, ಸಂಘಟಕರು ವೇದಿಕೆ ಹತ್ತುವುದಿಲ್ಲ ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಎಲ್ಲ ಧರ್ಮಗಳು ಶಾಂತಿಯನ್ನು ಸಾರುತ್ತವೆ. ತೀರ ಇತ್ತೀಚಿನವರೆಗೆ ಶಿವಮೊಗ್ಗದಲ್ಲಿ ಶಾಂತಿಯುತ ವಾತಾವರಣ ಇತ್ತು. ಈಚೆಗೆ ಶಾಂತಿ ಕದಡುವ ಪ್ರಯತ್ನವಾಗುತ್ತಿದೆ. ಹಾಗಾಗಿ ಶಾಂತಿಯ ನಡಿಗೆ ಮಾಡುತ್ತಿದ್ದೇವೆ. ಶಿವಮೊಗ್ಗದ ಅಭಿವೃದ್ಧಿ ಬಯಸುವವರು ಹಿಂಸೆ ಇಷ್ಟಪಡುವುದಿಲ್ಲ. ಇಲ್ಲಿನ ವ್ಯಾಪಾರ, ವಹಿವಾಟಿನ ಅನುಕೂಲಕ್ಕೆ, ಬಡವರು ನೋವು ಅನುಭವಿಸದಂತೆ ತಡೆಯಲು ಈ ನಡಿಗೆ ಎಂದರು.
ಕಿರಣ್ ಕುಮಾರ್ ಮಾತನಾಡಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಿದೆ. ರೈಲು, ರಸ್ತೆ ಸಂಪರ್ಕವು ಉತ್ತಮವಾಗಿದೆ. ಇಲ್ಲಿನ ವ್ಯಾಪಾರ, ವಹಿವಾಟು ಅಭಿವೃದ್ಧಿ ಆಗಬೇಕಿದೆ. ಬ್ರ್ಯಾಂಡ್ ಶಿವಮೊಗ್ಗ ಬೆಳೆಯಲು ಹಲವು ಆಯಾಮದಲ್ಲಿ ನಗರ ಬೆಳೆಯಬೇಕು. ಊರು ಶಾಂತವಾಗಿದ್ದರೆ ಸರ್ವ ರೀತಿಯ ಅಭಿವೃದ್ಧಿ ಆಗಲಿದೆ. ಈ ಹಿನ್ನೆಲೆ ಮೂರನೆ ವರ್ಷದ ಶಾಂತಿಯ ನಡಿಗೆ ಮಾಡುತ್ತಿದ್ದೇವೆ. ಶಿವಮೊಗ್ಗದ ಸ್ಪೆಲ್ಲಿಂಗ್‌ನಲ್ಲಿ HIM ಇದೆ. ಹೆಚ್ ಅಂದರೆ ಹಿಂದೂ, ಐ ಅಂದರೆ ಇಸಾಯಿ, ಎಂ ಅಂದರೆ ಮುಸ್ಲಿಂ. ಎಲ್ಲರು ಸೌರ್ಹಾದವಾಗಿ ಬದುಕಬೇಕು, ಬ್ರ್ಯಾಂಡ್ ಶಿವಮೊಗ್ಗದ ಇಮೇಜ್ ಬೆಳವಣಿಗೆಗೆ ಈ ಕಾರ್ಯ. ಅಂದು ಸಿಗ್ನೇಚರ್ ಬೋರ್ಡ್ ಮಾಡಲಿದ್ದೇವೆ. ಅದರಲ್ಲಿ ವ್ಯಾಪಾರ, ವಾಹಿವಾಟು, ಧಾರ್ಮಿಕ ಕ್ಷೇತ್ರದವರು ಸೇರಿ ಎಲ್ಲರು ಸ್ಟಿಕರ್‌ಗಳನ್ನು ಅಂಟಿಸಬಹುದು ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, 60-70ರ ದಶಕದಲ್ಲಿ ಸೌರ್ಹಾದತೆಕ್ಕೆ ಧಕ್ಕೆ ಆದಾಗ ಪತ್ರಕರ್ತರು ಮುಂದೆ ನಿಂತು ಶಾಂತಿ ಮರು ಸ್ಥಾಪಿಸಿದ್ದರು. ಅಹಿತಕರ ಘಟನೆಗಳ ನಡೆದಾಗ ಸೂಕ್ಷ್ಮ ವರದಿಗಾರಕೆ ಮೂಲಕ ಶಾಂತಿ ಸ್ಥಾಪನೆ ಮಾಡಬೇಕು ಎಂದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ಜೀವ, ಆಸ್ತಿ ಹಾನಿ ತಡೆಯುವುದು ಸೌರ್ಹಾದ ಹಬ್ಬದ ಮುಖ್ಯ ಉದ್ದೇಶ. ಶಾಂತಿ ನೆಲಸಬೇಕು. ಸಹಸ್ರಾರು ಸಂಖ್ಯೆಯ ಜನರನ್ನು ಸೇರಿಸಿ ಅರಿವು ಮೂಡಿಸಲಾಗುತ್ತದೆ. ಇದು ಅತ್ಯುತ್ತಮ ಕಾರ್ಯಕ್ರಮ. ಇದರಿಂದ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂದರು.
ಸೈನ್ಸ್ ಮೈದಾನದಲ್ಲಿ ಬಸವಕೇಂದ್ರ, ಬೆಕ್ಕಿನಕಲ್ಮಠ ಮತ್ತು ಜಡೆ ಮಠದ ಸ್ವಾಮೀಜಿಗಳು, ಜಾಮೀಯ ಮಸೀದಿ ಮತ್ತು ಚರ್ಚ್‌ನ ಧರ್ಮಗುರುಗಳು ಶಾಂತಿಯ ಸಂದೇಶ ನೀಡಲಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದ ಅಪಾರ್ಟ್‌ಮೆಂಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200