ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 23 NOVEMBER 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೀಲ್ ಎಡವಟ್ಟಿನಿಂದ, ತೀರ್ಥಹಳ್ಳಿಯ ಮಹಿಳೆಯೊಬ್ಬರನ್ನು ಮಂಗಳೂರು ಏರ್‍ಪೋರ್ಟ್‍ನಲ್ಲಿ ವಿಮಾನ ಹತ್ತದಂತೆ ತಡೆಯಲಾಗಿದೆ. ಸಿಮ್ಸ್ ಸಂಸ್ಥೆ ನೀಡಿದ್ದ ಕರೋನ ವರದಿಯಲ್ಲಿ ಸ್ಪೆಲ್ಲಿಂಗ್ ವ್ಯತ್ಯಾಸದಿಂದ ಗೊಂದಲ ನಿರ್ಮಾಣವಾಗಿತ್ತು.
ಏನಿದು ಘಟನೆ?
ತೀರ್ಥಹಳ್ಳಿಯ 47ನೇ ವರ್ಷದ ಚಾಂದ್ ಬೇಗಂ ಅವರು ದುಬೈಗೆ ತೆರಳಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ದುಬೈನಲ್ಲಿರುವ ಮಗನ ಮನೆಗೆ ತೆರಳಬೇಕಿತ್ತು. ಮಂಗಳೂರಿನಿಂದ ಸ್ಪೈಸ್ ಜೆಟ್ ಸಂಸ್ಥೆಯ ವಿಮಾನದಲ್ಲಿ ಶುಕ್ರವಾರ ರಾತ್ರಿ ದುಬೈಗೆ ಹೊರಡಬೇಕಿತ್ತು. ಆದರೆ ಕರೋನ ರಿಪೋರ್ಟ್‌ನಲ್ಲಿ ಗೊಂದಲವಾಗಿದ್ದರಿಂದ ಚಾಂದ್ ಬೇಗಂ ಅವರನ್ನು ವಿಮಾನ ಹತ್ತಿಸಲು ಸ್ಪೈಸ್ ಜೆಟ್ ನಿರಾಕರಿಸಿತು.
ಗೊಂದಲಕ್ಕೆ ಕಾರಣವೇನು?
ಚಾಂದ್ ಬೇಗಂ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕರೋನ ಪರೀಕ್ಷೆಗೆ ಒಳಗಾಗಿದ್ದರು. ಅವರಿಗೆ ನೆಗೆಟಿವ್ ವರದಿ ಬಂದಿತ್ತು. ವಿಮಾನ ನಿಲ್ದಾಣಕ್ಕೆ ತಲುಪಿದಾಗಲೆ ವರದಿಯಲ್ಲಿ ಗೊಂದಲವಿದೆ ಅನ್ನುವುದು ಚಾಂದ್ ಬೇಗಂ ಕುಟುಂಬಕ್ಕೆ ಗೊತ್ತಾಗಿದ್ದು. ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಲೆಟರ್ ಹೆಡ್‌ನಲ್ಲಿ ಬಳಸಲಾಗಿದ್ದ ಸೀಲ್‌ನಲ್ಲಿ ಸ್ಪೆಲಿಂಗ್ ವ್ಯತ್ಯಾಸವಿತ್ತು. ಸೀಲ್‍ನಲ್ಲಿ SHIVAMOGGA ಬದಲು SHIMOGA ಎಂದು ಬಳಸಲಾಗಿತ್ತು. ಹಾಗಾಗಿ ವರದಿಯ ಅಸಲಿಯತ್ತಿನ ಬಗ್ಗೆ ವಿಮಾನಯಾನ ಸಂಸ್ಥೆ ಶಂಕೆ ವ್ಯಕ್ತಪಡಿಸಿತ್ತು.
ಏರ್‌ಪೋರ್ಟ್‌ನಲ್ಲಿ ಮುಂದೇನಾಯ್ತು?
ವರದಿ ಅಸಲಿ ಎಂದು ಚಾಂದ್ ಬೇಗಂ ಕುಟುಂಬದವರು ತಿಳಿಸಿದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ, ವಿಮಾನ ಸಂಸ್ಥೆಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೂ ವಿಮಾನಯಾನ ಸಂಸ್ಥೆ ಅಧಿಕಾರಿಗಳು ಒಪ್ಪಿಗೆ ಸೂಚಿಸಲಿಲ್ಲ. ಕೊನೆಗೆ ಚಾಂದ್ ಬೇಗಂ ಅವರು ಮಂಗಳೂರಿನಲ್ಲೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾದರು. ವರದಿ ನೆಗೆಟಿವ್ ಬಂದಿದೆ.
24 ಗಂಟೆ ಬಳಿಕ ವಿಮಾನ ಹತ್ತಿದರು
ಸಂಸ್ಥೆಯ ಹೆಸರಿನಲ್ಲಿ ಶಿವಮೊಗ್ಗ ಇದ್ದರೂ ಶಿಮೊಗ್ಗ ಎಂಬ ಸೀಲ್ ಬಳಸಿ, ಸಿಮ್ಸ್ ಎಡವಟ್ಟು ಮಾಡಿದೆ. ಇದರಿಂದಾಗಿ ಮತ್ತೊಮ್ಮೆ ಕರೋನ ತಪಾಸಣೆಗೆ ಒಳಗಾಗಿ 24 ಬಳಿಕ ಚಾಂದ್ ಬೇಗಂ ವಿಮಾನ ಹತ್ತುವಂತಾಯಿತು. ಪ್ರತ್ಯೇಕ ಪ್ರಯಾಣ ದರ ವಿಧಿಸದೆ ಚಾಂದ್ ಬೇಗಂ ಅವರಿಗೆ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಸೀಟ್ ನೀಡಿದೆ.
ವಿಮಾನಯಾನ ಮಾಡುವವರಿಗೆ ಕರೋನ ತಪಾಸಣಾ ವರದಿ ಕಡ್ಡಾಯಗೊಳಿಸಲಾಗಿದೆ. ದುಬೈ ಸೇರಿದಂತೆ ಹಲವು ದೇಶಗಳಲ್ಲಿ ಕರೋನ ತಪಾಸಣಾ ವರದಿಯನ್ನು ಕಟ್ಟುನಿಟ್ಟಾಗಿ ಪರಿಶೀಲಸಲಾಗುತ್ತಿದೆ. ಇದೆ ಕಾರಣಕ್ಕೆ ವಿಮಾನಯಾನ ಸಂಸ್ಥೆಗಳು ಕೂಡ ವರದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿವೆ. ಆದರೆ ಸಿಮ್ಸ್ ಎಡವಟ್ಟಿನಿಂದಾಗಿ ಸಾಮಾನ್ಯರು ಸಂಕಷ್ಟಕ್ಕೀಡಾಗುವಂತೆ ಆಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]