ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 FEBRUARY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಪ್ರಾಣಿ, ಪಕ್ಷಿಗಳನ್ನು ಓಡಿಸುವುದಕ್ಕೂ ಒಂದು ಹುದ್ದೆ ಇದೆ. ಅದಕ್ಕೆ ಸಂಬಳವು ಸಿಗಲಿದೆ. ಸದ್ಯ ಈ ಕೆಲಸ ಖಾಲಿ ಇರುವುದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ. ಪ್ರಾಣಿ, ಪಕ್ಷಿಗಳನ್ನು ಹೆದರಿಸುವ ಮತ್ತು ಪೂರಕ ಸೇವೆಗಳನ್ನು ಒದಗಿಸಲು ಏಜನ್ಸಿಗಳಿಗೆ ಟೆಂಡರ್ ಕರೆಯಲಾಗಿದೆ. ಇದರ ನೋಟಿಫಿಕೇಷನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್‌ಐಐಡಿಸಿ) ಪ್ರಾಣಿ, ಪಕ್ಷಿಗಳನ್ನು ಹೆದರಿಸುವ ಮತ್ತು ಪೂರಕ ಸೇವೆಗಳನ್ನು ಒದಗಿಸುವ ಕೆಲಸಕ್ಕೆ ಏಜೆನ್ಸಿಗಳಿಗೆ ಟೆಂಡರ್ ಆಹ್ವಾನಿಸಿದೆ.
ಪ್ರಾಣಿ, ಪಕ್ಷಿಗಳನ್ನು ಏಕೆ ಬೆದರಿಸಬೇಕು?
ವಿಮಾನದ ಲ್ಯಾಂಡಿಂಗ್ ಮತ್ತು ಟೇಕಾಫ್ ಸಂದರ್ಭ ರನ್ ವೇ ಕ್ಲಿಯರ್ ಇರಬೇಕು. ಇದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಿಯಮ. ಲ್ಯಾಂಡಿಂಗ್ ಮತ್ತು ಟೇಕಾಫ್ ಸಂದರ್ಭ ಪ್ರಾಣಿ, ಪಕ್ಷಿಗಳು ರನ್ ವೇ ಮೇಲೆ ಅಥವಾ ಅದರ ಸಮೀಪ ಕಾಣಿಸಿಕೊಂಡರೆ ಅಪಘಾತ ಸಂಭವಿಸುವ ಸಾದ್ಯತೆ ಇರುತ್ತದೆ. ಹಕ್ಕಿಗಳು ವಿಮಾನಕ್ಕೆ ತಾಗಿ ಅಥವಾ ಇಂಜಿನ್‌ಗೆ ಸಿಲುಕುವ ಸಂಭವ ಇರುತ್ತದೆ. ಇದೆ ಕಾರಣಕ್ಕೆ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರಾಣಿ, ಪಕ್ಷಗಳನ್ನು ಬೆದರಿಸಬೇಕಾಗುತ್ತದೆ.
ಟರ್ಮಿನಲ್ ಕಟ್ಟಡದಲ್ಲಿ ಪಕ್ಷಿಗಳು ಗೂಡು ಕಟ್ಟಿ, ಹಿಕ್ಕೆ ಹಾಕಿದರೆ ನಿಲ್ದಾಣದ ಗೌರವಕ್ಕೆ ಧಕ್ಕೆ ಉಂಟಾಗಲಿದೆ. ಈ ಹಿನ್ನೆಲೆ ಟರ್ಮಿನಲ್‌ನಲ್ಲಿ ಹಕ್ಕಿಗಳು ಗೂಡು ಕಟ್ಟದ ಹಾಗೆ ನಿಯಂತ್ರಿಸುವುದು ಅನಿವಾರ್ಯ. ಇನ್ನು, ವಿಮಾನ ನಿಲ್ದಾಣದಲ್ಲಿ ದುಬಾರಿ ವೆಚ್ಚದ ಯಂತ್ರೋಪಕರಣ ಅಳವಡಿಸಲಾಗಿದೆ. ಪ್ರಾಣಿ, ಪಕ್ಷಿಗಳಿಂದ ಅವುಗಳನ್ನು ರಕ್ಷಿಸಬೇಕಾಗುತ್ತದೆ. ಅದಕ್ಕಾಗಿ ನುರಿತ ಸಿಬ್ಬಂದಿ ಅಗತ್ಯವಿರಲಿದೆ ಎನ್ನುತ್ತಾರೆ ಕೆಎಸ್‌ಐಐಡಿಸಿ ಎಜಿಎಂ ಎಲ್.ಎಲ್.ಹರ್ತಿ.
ಈಗಾಗಲೆ 13 ಸಿಬ್ಬಂದಿ ಇದ್ದಾರೆ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಾಣಿ, ಪಕ್ಷಿಗಳನ್ನು ಬೆದರಿಸಲು ಸದ್ಯ 13 ಸಿಬ್ಬಂದಿ ಇದ್ದಾರೆ. ಆದರೆ ಇವರೆಲ್ಲ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತರಬೇತಿ ಪಡೆದವರು. ಅವರನ್ನು ತಾತ್ಕಾಲಿಕವಾಗಿ ಇಲ್ಲಿ ನೇಮಿಸಲಾಗಿದೆ. ಶಿವಮೊಗ್ಗಕ್ಕೆ ಪೂರ್ಣಾವಧಿ ಸಿಬ್ಬಂದಿ ಅಗತ್ಯವಿರುವ ಹಿನ್ನೆಲೆ ಏಜೆನ್ಸಿಗೆ ಟೆಂಡರ್ ಕರೆಯಲಾಗಿದೆ.
ಪಟಾಕಿ, ಹೈಟೆಕ್ ಗನ್ ಮತ್ತು ತರಬೇತಿ
ಇಲ್ಲಿ ನೇಮಕವಾಗುವ ಸಿಬ್ಬಂದಿಗೆ ಪ್ರಾಣಿ, ಪಕ್ಷಿಗಳನ್ನು ಬೆದರಿಸುವ ತರಬೇತಿ ನೀಡಲಾಗುತ್ತದೆ. ಪಾರಿವಾಳಗಳು, ಇತರೆ ಪಕ್ಷಿಗಳು, ಮಂಗ, ನಾಯಿಗಳು ರನ್ ವೇ ಬಳಿ ಸುಳಿಯದಂತೆ ತಡೆಯುವ ತರಬೇತಿ ನೀಡಲಾಗುತ್ತದೆ. ಈ ಸಿಬ್ಬಂದಿಗೆ ಅತ್ಯಾಧುನಿಕ ಗನ್ ನೀಡಲಾಗುತ್ತದೆ. ಇದರಿಂದ ಬುಲೆಟ್ ಹಾರಿದಂತೆ ಶಬ್ದ ಮಾತ್ರ ಬರಲಿದೆ. ವಿಮಾನ ಲ್ಯಾಂಡಿಂಗ್, ಟೇಕಾಫ್‌ಗೆ ಕೆಲವು ನಿಮಿಷ ಮೊದಲು ಇದನ್ನು ಬಳಸಲಾಗುತ್ತದೆ. ಅಗತ್ಯ ಸಂದರ್ಭ ಪಟಾಕಿಗಳನ್ನು ಕೂಡ ಉಪಯೋಗಿಸಲಾಗುತ್ತದೆ. ಪಕ್ಷಿಗಳು ಟರ್ಮಿನಲ್‌ನಲ್ಲಿ ಗೂಡು ಕಟ್ಟದಂತೆ ನಿಯಂತ್ರಿಸಲಾಗುತ್ತದೆ. ಹೈಟೆಕ್ ಉಪಕರಣಗಳ ರಕ್ಷಣೆಯನ್ನು ಮಾಡಲಾಗುತ್ತದೆ. ಇನ್ನು, ಇಡೀ ಪ್ರಕ್ರಿಯೆಯಲ್ಲಿ ಪ್ರಾಣಿ, ಪಕ್ಷಿಗಳ ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಲಾಗುತ್ತದೆ.
ಈಗಾಗಲೇ ಟೆಂಡರ್ ಕರೆಯಲಾಗಿದ್ದು ಇವತ್ತು ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಏಜೆನ್ಸಿಗಳು ಪ್ರಸ್ತಾವನೆ ಸಲ್ಲಿಸಲು ಫೆ.21ರಂದು ಕೊನೆಯ ದಿನಾಂಕ ನಿಗದಿಗೊಳಿಸಲಾಗಿದೆ. ಆ ಬಳಿಕ ಸಿಬ್ಬಂದಿ ನೇಮಿಸಿಕೊಂಡು, ತರಬೇತಿ ನೀಡಲಾಗುತ್ತದೆ.
ಇದನ್ನೂ ಓದಿ – 15 ದಿನ, 10 ರಾಜ್ಯಗಳು, ಶಿವಮೊಗ್ಗದಿಂದ ಬೈಕ್ ಯಾತ್ರೆ ಶುರು, ಪೊಲೀಸ್ ಸಿಬ್ಬಂದಿಯ ಸಾಹಸ, ಉದ್ದೇಶವೇನು?