ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 22 ಅಕ್ಟೋಬರ್ 2021
ಅವಿಶ್ವಾಸ ಗೊತ್ತುವಳಿಯಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಆನಂದ್’ಗೆ ಸೋಲಾಗಿದೆ. ಎಲ್ಲಾ ನಿರ್ದೇಶಕರು ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದ್ದಾರೆ. ಈ ಮಧ್ಯೆ ಡಿ.ಆನಂದ್ ಅವರು ಅವಿಶ್ವಾಸ ಗೊತ್ತುವಳಿ ಸಭೆಗೆ ಗೈರಾಗಿದ್ದರು.
ಶಿವಮೊಗ್ಗ ಹಾಲು ಒಕ್ಕೂಟದ ಆಡಳಿತ ಸಭಾಂಗಣದಲ್ಲಿ ಅವಿಶ್ವಾಸ ಸಭೆ ನಡೆಯಿತು. 14 ನಿರ್ದೇಶಕರ ಪೈಕಿ 13 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಎಲ್ಲಾ ನಿರ್ದೇಶಕರು ಶಿಮುಲ್ ಅಧ್ಯಕ್ಷ ಡಿ.ಆನಂದ್ ಅವರ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದಾಗಿ ಡಿ.ಆನಂದ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತಾಗಿದೆ. ಈ ಮಧ್ಯೆ ಡಿ.ಆನಂದ್ ಅವರು ಸಭೆಗೆ ಗೈರಾಗಿದ್ದರು.
ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್ ಎಸ್.ಡೋಂಗ್ರೆ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಅವರು ಸಭೆಯಲ್ಲಿದ್ದರು.
ಶಿಮುಲ್’ನಲ್ಲಿ ಮುಂದೇನು?
ಅಧ್ಯಕ್ಷರ ಪದಚ್ಯುತಿಯ ಹಿನ್ನೆಲೆ ಆಡಳಿತಾತ್ಮಕ ದೃಷ್ಟಿಯಿಂದ ಶಿಮುಲ್ ಉಪಾಧ್ಯಕ್ಷರೇ ಅಧ್ಯಕ್ಷರ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಶಿಮುಲ್ ಉಪಾಧ್ಯಕ್ಷ ಹೆಚ್.ಕೆ.ಬಸಪ್ಪ ಅವರು ಪ್ರಭಾರ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ನೂತನ ಅಧ್ಯಕ್ಷರಿಗಾಗಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಸಹಕಾರ ಇಲಾಖೆ ಚುನಾವಣಾ ದಿನಂಕ ಪ್ರಕಟಿಸಲಿದೆ.
ಯಾಕಾಗಿ ಪದಚ್ಯುತಿ ಮಾಡಿದ್ದು?
ಅಧ್ಯಕ್ಷರ ಅವಧಿ ಮುಗಿದ ಹಿನ್ನೆಲೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಸ್ಥಾನ ಬಿಟ್ಟುಕೊಡಲು ಡಿ.ಆನಂದ್ ಅವರು ನಿರಾಕರಿಸಿದ್ದರು. ಹಾಗಾಗಿ 14 ನಿರ್ದೇಶಕರ ಪೈಕಿ 10 ನಿರ್ದೇಶಕರು ಡಿ.ಆನಂದ್ ಅವರ ವಿರುದ್ಧ ಅವಿಶ್ವಾಸ ಮಂಡನೆಗೆ ಸಭೆ ಕರೆಯಬೇಕು ಎಂದು ಜೂನ್ ತಿಂಗಳಲ್ಲಿ ನೊಟೀಸ್ ನೀಡಿದ್ದರು. ಈ ಹಿನ್ನೆಲೆ ಜೂನ್ 15ರಂದು ಸಭೆ ನಿಗದಿಪಡಿಸಲಾಗಿತ್ತು. ಆದರೆ ತಡೆಯಾಜ್ಞೆ ಕೋರಿ ಡಿ.ಆನಂದ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆನಂದ್ ಅವರು ಕೋರ್ಟಿಗೆ ಹೋಗಿದ್ದೇಕೆ?
ಕರೋನ ಸಂದರ್ಭದಲ್ಲಿ ಯಾವುದೆ ಸ್ಥಳೀಯ ಸಂಸ್ಥೆ, ಸಹಕಾರಿ ಸಂಸ್ಥೆಗಳ ಚುನಾವಣೆ ನಡೆಸಬಾರದು ಎಂದು ಸರ್ಕಾರ ಆದೇಶಿಸಿದೆ. ಇಂತಹ ಸಂದರ್ಭ ಅವಿಶ್ವಾಸ ಮಂಡನೆಗೆ ಅವಕಾಶ ನೀಡುವುದು ಸರಿಯಲ್ಲ. ಒಂದು ವೇಳೆ ಅಧ್ಯಕ್ಷರ ಪದಚ್ಯುತಿಯಾದರೆ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಅಧ್ಯಕ್ಷರಿಲ್ಲದೆ ಇದ್ದರೆ ಆಡಳಿತಾತ್ಮಕ ಸಮಸ್ಯೆ ಉಂಟಾಗಲಿದೆ. ಆದ್ದರಿಂದ ಅವಿಶ್ವಾಸ ಮಂಡನೆಗೆ ಅವಕಾಶ ನೀಡಬಾರದು ಎಂದು ಡಿ.ಆನಂದ್ ಅವರು ಕೋರ್ಟ್ ಮೊರೆ ಹೋಗಿದ್ದರು.
ಆನಂದ್ ಅರ್ಜಿ ವಜಾಗೊಂಡಿತ್ತು
ಶಿಮುಲ್ ಅಧ್ಯಕ್ಷ ಡಿ.ಆನಂದ್ ಅವರು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್’ನಲ್ಲಿ ವಜಾಗೊಂಡಿತ್ತು. ಹಾಗಾಗಿ ಹೈಕೋರ್ಟ್’ನ ಮತ್ತೊಂದು ಪೀಠದಲ್ಲಿ ಡಿ.ಆನಂದ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯೂ ವಜಾಗೊಂಡಿದ್ದರಿಂದ ಇವತ್ತು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ನಿಗದಿಯಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422