SHIVAMOGGA LIVE NEWS, 12 DECEMBER 2024
ಶಿವಮೊಗ್ಗ : ನಗರದಲ್ಲಿ ಹೈಪರ್ ಮಾರ್ಕೆಟ್, ಸೂಪರ್ ಮಾರ್ಕೆಟ್‌ಗಳ (Market) ಟ್ರೆಂಡ್ ಬಿರುಸಾಗಿದೆ. ಸಿಟಿಯ ಉದ್ದಗಲಕ್ಕು ಅಲ್ಲಲ್ಲಿ ಹೈಟೆಕ್ ಶಾಪಿಂಗ್ ಸೆಂಟರ್‌ಗಳು ತಲೆ ಎತ್ತಿವೆ. ನಿತ್ಯ ಸಾವಿರಾರು ಮಂದಿ ಸೂಪರ್ ಮಾರ್ಕೆಟ್‌ನಲ್ಲಿ ಖರೀದಿ ಮಾಡುತ್ತಿದ್ದಾರೆ.
ಕಿರಾಣಿ ಅಂಗಡಿಯಿಂದ ಶಿಫ್ಟ್ ಆದ ಗಿರಾಕಿಗಳು
ನಗರದಲ್ಲಿ ಬೀದಿಗೊಂದು ಕಿರಾಣಿ ಅಂಗಡಿ ಇದೆ. ಹಾಗಿದ್ದೂ ಸೂಪರ್ ಮಾರ್ಕೆಟ್‌ಗಳಲ್ಲಿ ಜನಸಂದಣಿ ಜೋರಿರುತ್ತದೆ. ನಿತ್ಯ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಲಕ್ಷಾಂತರ ರೂ. ವಹಿವಾಟು ನಡೆಯುತ್ತದೆ. ಶಿವಮೊಗ್ಗ ನಗರದಲ್ಲಿ ಒಂದು ಕಾಲದ ಕಿರಾಣಿ ಅಂಗಡಿ ಗಿರಾಕಿಗಳು ಈಗ ಸೂಪರ್ ಮಾರ್ಕೆಟ್‌ಗಳ ಕಾಯಂ ಕಸ್ಟಮರ್‌ಗಳಾಗಿದ್ದಾರೆ.
ಶಿವಮೊಗ್ಗದಲ್ಲಿ 15ಕ್ಕೂ ಹೆಚ್ಚು ಸೂಪರ್ ಮಾರ್ಕೆಟ್
ಎಲ್ಲ ಬಗೆಯ ಸೂಪರ್ ಮಾರ್ಕೆಟ್‌ಗಳು (Super Market) ಶಿವಮೊಗ್ಗದಲ್ಲಿ ಒಂದೊಂದು ಬ್ರಾಂಚ್ ಓಪನ್ ಮಾಡಿವೆ. ಮೋರ್, ಬಿಗ್ ಬಜಾರ್, ಸ್ಪಾರ್, ಗೊರೂರು ಮಾರ್ಟ್‌ಗಳು ಇಲ್ಲಿ ವಹಿವಾಟು ನಡೆಸುತ್ತಿವೆ. ಇನ್ನು, ಕೆಲವು ಸ್ಥಳೀಯ ವರ್ತಕರು ಕೂಡ ಹೈಪರ್ ಮಾರ್ಕೆಟ್ ಮಾದರಿಯಲ್ಲೇ ಅಂಗಡಿಗಳನ್ನು ಪರಿವರ್ತಿಸಿದ್ದಾರೆ. ಇವು ಕೂಡ ಗ್ರಾಹಕರನ್ನು ಸೆಳೆಯುತ್ತಿವೆ.
ಹೃದಯ ಭಾಗದಲ್ಲೇ ಹೆಚ್ಚು ಮಾರ್ಟ್‌ಗಳು
ಶಿವಮೊಗ್ಗದ ಹೃದಯ ಭಾಗದಲ್ಲೇ ಹೆಚ್ಚು ಹೈಪರ್ ಮಾರ್ಟ್‌ಗಳಿವೆ. ಈ ಪೈಕಿ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಸ್ಪಾರ್ ಅತ್ಯಂತ ಜನಪ್ರಿಯ. ಇನ್ನು, ಶಿವಮೊಗ್ಗ ನಗರದ ಶಿವಮೂರ್ತಿ ಸರ್ಕಲ್, ವಿನೋಬನಗರ, ಗೋಪಾಲಗೌಡ ಬಡಾವಣೆಯಲ್ಲಿ ಮೋರ್ ಮಳಿಗೆಗಳಿವೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಟ್ಟಡದಲ್ಲಿ ರಿಲಯನ್ಸ್ ಬಿಗ್ ಬಜಾರ್, ವಿದ್ಯಾನಗರದಲ್ಲಿ ಗೊರೂರು ಮಾರ್ಟ್ ಶುರುವಾಗಿದೆ. ಹೀಗೆ ಸುಮಾರು 15ಕ್ಕೂ ಹೆಚ್ಚು ಹೈಪರ್ ಮಾರ್ಟ್‌ಗಳು ವಿವಿಧ ಬಡಾವಣೆಗಳಲ್ಲಿವೆ.
ಸೂಪರ್ ಮಾರ್ಕೆಟ್‌ಗಳಿಗೇಕೆ ಇಷ್ಟು ಬೇಡಿಕೆ?
» ಕಾರಣ 1 : ಗ್ರಾಹಕರಿಗೆ ವಾಹನಗಳ ಪಾರ್ಕಿಂಗ್ ಸೇರಿದಂತೆ ವಿವಿಧ ಸೌಲಭ್ಯ ದೊರೆಯಲಿದೆ. ಒಂದೇ ಸೂರಿನಡಿ ಎಲ್ಲ ವಸ್ತುಗಳು ಸಿಗಲಿವೆ.
» ಕಾರಣ 2 : ಪ್ರತಿ ವಸ್ತುವನ್ನು ಆಯ್ಕೆ ಮಾಡಿ, ಪರಿಶೀಲಿಸಿ ಖರೀದಿಸುವ ಸ್ವಾತಂತ್ರ್ಯ ಇರಲಿದೆ. ಅಕ್ಕಿ, ಬೇಳೆಯ ಜೊತೆಗೆ ಗೃಹಪಯೋಗಿ ವಸ್ತುಗಳೆಲ್ಲವನ್ನು ಗ್ರಾಹಕರೇ ಚೆಕ್ ಮಾಡಿ ಆ ಬಳಿಕ ಖರೀದಿಸಲು ಅವಕಾಶವಿದೆ.
» ಕಾರಣ 3 : ಹಬ್ಬಗಳು, ವಿಶೇಷ ದಿನಗಳಂದು ಸೂಪರ್ ಮಾರ್ಕೆಟ್‌ನವರು ವಿವಿಧ ಆಫರ್‌ಗಳು, ಡಿಸ್ಕೌಂಟ್‌ಗಳನ್ನು ನೀಡುತ್ತಾರೆ. ಇವುಗಳಿಗೆ ವ್ಯಾಪಕ ಪ್ರಚಾರವು ಇರಲಿದೆ. ಇದು ಹೆಚ್ಚು ಗ್ರಾಹಕರನ್ನು ಸೆಳೆಯಲಿದೆ.
» ಕಾರಣ 4 : ಖರೀದಿಯ ಸಂದರ್ಭ ಗಡಿಬಿಡಿ, ಆತುರವಿರುವುದಿಲ್ಲ. ಇಡೀ ಕುಟುಂಬವೆ ಬಂದು ಸಮಾಧಾನದಿಂದ ವಸ್ತುಗಳನ್ನು ಖರೀದಿಸಬಹುದು.
ಸ್ಪಾರ್ ಹೈಪರ್ ಮಾರ್ಕೆಟ್ ಅತ್ಯಂತ ಪ್ರಮುಖ ಜಾಗದಲ್ಲಿದೆ. ಒಂದೇ ಸೂರಿನಲ್ಲಿ ಎಲ್ಲ ಬಗೆಯ ಗೃಹೋಪಯೋಗಿ ವಸ್ತುಗಳು ದೊರೆಯಲಿವೆ. ಜನ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ವಸ್ತುಗಳ ಗುಣಮಟ್ಟವನ್ನು ತಾವೇ ಪರಿಶೀಲಿಸಿ ಆ ಬಳಿಕ ಖರೀದಿಸಲು ಇಲ್ಲಿ ಅವಕಾಶವಿದೆ. ಹಾಗಾಗಿ ಇಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚು.
– ಬಸವರಾಜು, ಸ್ಪಾರ್ ಹೈಪರ್ ಮಾರ್ಕೆಟ್‌ನ ವ್ಯವಸ್ಥಾಪಕ
ಮೊದಲೆಲ್ಲ ಮನೆ ಬಳಿ ಅಂಗಡಿಯಿಂದಲೇ ದಿನಸಿ ಖರೀದಿಸುತ್ತಿದ್ದೆವು. ಈಗ ತಿಂಗಳ ದಿನಸಿಯನ್ನು ಮೋರ್‌ನಲ್ಲಿ ಒಮ್ಮೆಲೆ ಖರೀದಿಸುತ್ತಿದ್ದೇವೆ. ಮನೆಗೆ ಹತ್ತಿರವಿದೆ. ಜೊತೆಗೆ ಆಯ್ಕೆಗಳೂ ಹೆಚ್ಚು. ಕಿರಾಣಿ ಅಂಗಡಿಯಲ್ಲಿ ಸಾಲ ಸೌಲಭ್ಯವಿತ್ತು. ಸೂಪರ್ ಮಾರ್ಕೆಟ್‌ಗಳಲ್ಲಿ ಈ ಸೌಲಭ್ಯವಿಲ್ಲ.
– ಜಯಶ್ರೀ, ಗೃಹಿಣಿ
ಶಿವಮೊಗ್ಗ ಸಿಟಿ ವಿಸ್ತರಣೆ ಮತ್ತು ಜನ ಸಂಖ್ಯೆ ಹೆಚ್ಚಾದಂತೆ ಹೈಪರ್ ಮಾರ್ಕೆಟ್‌ಗಳು, ಮಾರ್ಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ಕೂಡ ಆಫರ್, ಆಯ್ಕೆಗಳು ಸೇರಿದಂತೆ ನಾನಾ ಕಾರಣಕ್ಕೆ ಮಾರ್ಟ್ ಕಲ್ಚರ್‌ನ ಸೆಳೆತಕ್ಕೊಳಗಾಗಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬೆಂಕಿ, ಅಣಕು ಪ್ರದರ್ಶನ, ಹೇಗಿತ್ತು?