SHIVAMOGGA LIVE NEWS | 14 FEBRUARY 2023
SHIMOGA : ಕೆಲವು ದಶಕದ ಹಿಂದೆ ದೇಶದ ಕೈಗಾರಿಕೆ ಭೂಪಟದಲ್ಲಿ (Shimoga Industries) ಶಿವಮೊಗ್ಗ ಜಿಲ್ಲೆಗೆ ಪ್ರಮುಖ ಸ್ಥಾನವಿತ್ತು. ಇಲ್ಲಿ ಉತ್ಪಾದನೆಯಾಗುತ್ತಿದ್ದ ವಸ್ತುಗಳು ಗುಣಮಟ್ಟಕ್ಕೆ ಹೆಸರಾಗಿದ್ದವು. ಈ ಕೈಗಾರಿಕೆಗಳಿಂದಾಗಿ ಶಿವಮೊಗ್ಗ ಆರ್ಥಿಕವಾಗಿಯು ಸಬಲವಾಗಿತ್ತು.
ನಾನಾ ಕಾರಣಕ್ಕೆ ಕೈಗಾರಿಕೆಗಳು ಬಂದ್ (Shimoga Industries) ಆದವು. ಇವುಗಳ ಮೇಲೆ ಅವಲಂಬಿತವಾಗಿದ್ದ ಲಕ್ಷಾಂತರ ಜನರು ಜೀವನಕ್ಕಾಗಿ ಪರ್ಯಾಯ ಉದ್ಯೋಗ ಹುಡುಕುವಂತಾಯಿತು. ಹಲವರು ವಲಸೆ ಹೋದರು. ಈಗ ವಿಐಎಸ್ಎಲ್ ಸಂಪೂರ್ಣ ಬಂದ್ ಆಗುವ ಹಂತಕ್ಕೆ ತಲುಪಿದೆ. ಕಾರ್ಖಾನೆ ಉಳಿವಿಗಾಗಿ ಚಳಿ, ಬಿಸಿಲು ಲೆಕ್ಕಿಸದೆ ಕಾರ್ಮಿಕರು ಹೋರಾಟಕ್ಕೆ ಇಳಿದಿದ್ದಾರೆ.
ಜಿಲ್ಲೆಯಲ್ಲಿ ಈವರೆಗೂ ಬಂದ್ ಆದ ಐದು ಪ್ರಮುಖ ಕಾರ್ಖಾನೆಗಳ ವಿವರ ಇಲ್ಲಿದೆ
ಕೈಗಾರಿಕೆ 1 : ಕೊನೆಯುಸಿರೆಳೆಯುತ್ತಿದೆ ವಿಐಎಸ್ಎಲ್
ಭದ್ರಾವತಿಯಲ್ಲಿರುವ ಪ್ರಮುಖ ಕೈಗಾರಿಕೆ. 1923ರ ಜನವರಿ 18ರಂದು ಮೈಸೂರು ಐರನ್ ವರ್ಕ್ಸ್ ಕಾರ್ಖಾನೆ ಆರಂಭಿಸಲಾಯಿತು. ಸರ್.ಎಂ.ವಿಶ್ವೇಶ್ವರಯ್ಯ ಕನಸಿನ ಕೂಸಿದು. ಇದೆ ಕಾರಣಕ್ಕೆ 1975ರಲ್ಲಿ ಈ ಕಾರ್ಖಾನೆಗೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL) ಎಂದು ಮರು ನಾಮಕರಣ ಮಾಡಲಾಯಿತು. ಕಬ್ಬಿಣ ಮತ್ತು ಉಕ್ಕು, ಸಿಮೆಂಟ್, ಆಕ್ಸಿಜನ್ ಸೇರಿದಂತೆ 28 ವಿವಿಧ ಘಟಕಗಳು ವಿಐಎಸ್ಎಲ್ ಒಳಗಿದ್ದವು. ಅಮೆರಿಕ, ಜರ್ಮನಿ ಸೇರಿದಂತೆ ವಿವಿಧ ದೇಶಗಳ ಹೈಟೆಕ್ ಯಂತ್ರಗಳು ಇಲ್ಲಿದ್ದವು.
ರೈಲ್ವೆ ಯೋಜನೆಗಳು ಸೇರಿದಂತೆ ವಿವಿಧ ದೊಡ್ಡ ಯೋಜನೆಗಳಿಗೆ ಇಲ್ಲಿಂದಲೆ ಕಬ್ಬಿಣ ಪೂರೈಕೆಯಾಗುತ್ತಿತ್ತು. ಜಲಾಶಯಗಳು ಸೇರಿದಂತೆ ವಿವಿಧ ಕಾಮಗಾರಿಗೆ ವಿಐಎಸ್ಎಲ್ ನ ಚಾಮುಂಡೇಶ್ವರಿ ಸಿಮೆಂಟ್ಸ್ ಘಟಕದಿಂದ ಸಿಮೆಂಟ್ ಸಪ್ಲೈ ಮಾಡಲಾಗುತ್ತಿತ್ತು. ಇಡೀ ರಾಜ್ಯಕ್ಕೆ ಆಮ್ಲಜನಕ ಪೂರೈಕೆ ಮಾಡುವಷ್ಟು ಸಾಮರ್ಥ್ಯ ಹೊಂದಿದ್ದ ಆಕ್ಸಿಜನ್ ಪ್ಲಾಂಟ್ ಇಲ್ಲಿತ್ತು. ಇದೇ ಕಾರಣಕ್ಕೆ ಸಾವಿರ ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಪ್ರತಿ ಶಿಫ್ಟ್ ಮುಗಿಯುತ್ತಿದ್ದಂತೆ ಕಾರ್ಖಾನೆಯಿಂದ ಹೊರ ಬರುತ್ತಿದ್ದ ಸೈಕಲ್ ಗಳು, ಕಾರ್ಮಿಕರು ಗೇಟ್ ದಾಟಿ ಮನೆ ತಲುಪುವ ಹೊತ್ತಿಗೆ ವಿಐಎಸ್ಎಸ್ ಮುಂದೆ ಜನ ಜಾತ್ರೆಯೆ ಇರುತ್ತಿತ್ತು. ಭದ್ರಾವತಿ ಪಟ್ಟಣ ನಳನಳಿಸುತ್ತಿತ್ತು. ದೇಶಾದ್ಯಂತ ಹೆಸರಾಗಿದ್ದ ಕಾರ್ಖಾನೆ ಈಗ ಕೊನೆ ಕ್ಷಣಗಳನ್ನು ಎಣಿಸುತ್ತಿದೆ. ಲಕ್ಷಾಂತರ ಜನರ ಬದುಕು ಬದಲಿಸಿದ್ದ ಕಂಪನಿಗೀಗ ಆಸರೆ ಇಲ್ಲವಾಗಿದೆ.
ಕೈಗಾರಿಕೆ 2 : ಮರೆಯಾದ ಮೈಸೂರು ಪೇಪರ್ ಮಿಲ್ಸ್
ಉತ್ಕೃಷ್ಟ ಪೇಪರ್ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿತ್ತು ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ (MPM). ಸರ್. ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಗೆ ಸಾಕ್ಷಿಯಾಗಿತ್ತು ಈ ಕಾರ್ಖಾನೆ. 1936ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಾರ್ಖಾನೆಗೆ ಚಾಲನೆ ನೀಡಿದರು.
ದೇಶಿಯ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಎಂಪಿಎಂ ಪೇಪರ್ ಗೆ ಹೆಚ್ಚು ಬೇಡಿಕೆ ಇತ್ತು. ರಾಷ್ಟ್ರಮಟ್ಟ, ರಾಜ್ಯ ಮತ್ತು ಸ್ಥಳೀಯ ಪತ್ರಿಕೆಗಳು ಎಂಪಿಎಂ ಪೇಪರ್ ಮೇಲೆ ಅವಲಂಬಿತವಾಗಿದ್ದವು. ಮತ್ತೊಂದೆಡೆ ಭದ್ರಾವತಿಯಲ್ಲಿ ಯಥೇಚ್ಚವಾಗಿ ಕಬ್ಬು ಬೆಳೆಯುತ್ತಿದ್ದರು. ಅತಿ ಹೆಚ್ಚು ಆಲೆಮನೆಗಳು ಇದ್ದವು. ಹಾಗಾಗಿ ಎಂಪಿಎಂನಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲಾಯಿತು. ಕಬ್ಬಿನ ರಸ ಹಿಂಡಿ ಸಕ್ಕರೆ ತಯಾರಿಸಲಾಗುತ್ತಿತ್ತು. ಅದರ ತ್ಯಾಜ್ಯದಿಂದ ಪೇಪರ್ ಮತ್ತು ವಿದ್ಯುತ್ ಉತ್ಪಾದಿಸಲಾಗುತ್ತಿತ್ತು.
1977ರಲ್ಲಿ ಎಂಪಿಎಂ ಸರ್ಕಾರದ ಅಧೀನಕ್ಕೆ ಬಂತು. 2004ರಲ್ಲಿ ಇಂಟರ್ ನ್ಯಾಷನಲ್ ಆರ್ಗನೈಸೇಷನ್ ಫಾರ್ ಸ್ಟಾಂಡರ್ಡೈಸೇಷನ್ (ISO) ಸರ್ಟಿಫಿಕೇಟ್ ಪಡೆಯಿತು. ನಾನಾ ಕಾರಣಕ್ಕೆ ಕಾರ್ಖಾನೆ ರೋಗಗ್ರಸ್ಥವಾಯಿತು. 2016ರಲ್ಲಿ ಎಂಪಿಎಂ ಕಾರ್ಖಾನೆ ಸ್ಥಗಿತವಾಯಿತು.
ಕೈಗಾರಿಕೆ 3 : ಶ್ರೀದೇವಿ ಸಕ್ಕರೆ ಕಾರ್ಖಾನೆ
ಶಿವಮೊಗ್ಗದ ಮಲವಗೊಪ್ಪದಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆ ಆರಂಭಿಸಲಾಗಿತ್ತು. ಮೊದಲಿಗೆ ತುಂಗ ಭದ್ರ ಸಕ್ಕರೆ ಕಾರ್ಖಾನೆ ಎಂದು ಇದ್ದದ್ದು ಆಮೇಲೆ ಶ್ರೀದೇವಿ ಸಕ್ಕರೆ ಕಾರ್ಖಾನೆ ಎಂದು ಬದಲಾಯಿತು. ಇಲ್ಲಿಯು ದೊಡ್ಡ ಸಂಖ್ಯೆಯ ಕಾರ್ಮಿಕರು ಇದ್ದರು. ಶಿವಮೊಗ್ಗ ನಗರದ ಆರ್ಥಿಕತೆಗೆ ಈ ಷುಗರ್ ಫ್ಯಾಕ್ಟರಿ ಕೊಡುಗೆ ಅಗಣಿತ. ಆಡಳಿತಾತ್ಮಕ ಕಾರಣಗಳಿಗೆ ಈ ಸಕ್ಕರೆ ಕಾರ್ಖಾನೆ ಮುಚ್ಚಿ ಹೋಯಿತು. ಕಾರ್ಮಿಕರ ಪಾಲಿನ ಪರಿಹಾರದ ಮೊತ್ತ, ಕಾರ್ಖಾನೆಯ ಆಸ್ತಿ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತದೆ.
ಕೈಗಾರಿಕೆ 4 : ಗಂಧದ ಎಣ್ಣೆ ಕಾರ್ಖಾನೆ
ಮಲೆನಾಡಿನಲ್ಲಿ ಶ್ರೀಗಂಧ ಹೆಚ್ಚಾಗಿ ಇತ್ತು. ಹಾಗಾಗಿ 1944ರಲ್ಲಿ ತುಂಗಾ ನದಿ ದಂಡೆಯ ಮೇಲೆ ಶ್ರೀಗಂಧ ಎಣ್ಣೆ ಕಾರ್ಖಾನೆ ಸ್ಥಾಪಿಸಲಾಗಿತ್ತು. ಮೈಸೂರು ಹೊರತು ಶಿವಮೊಗ್ಗದಲ್ಲಿ ಮಾತ್ರವೆ ಈ ಕಾರ್ಖಾನೆ ಆರಂಭಿಸಲಾಗಿತ್ತು. ಉತ್ಕೃಷ್ಟ ಗುಣಮಟ್ಟದ ಗಂಧದ ಎಣ್ಣೆ ಉತ್ಪಾದನೆಯಾಗುತ್ತಿತ್ತು. 80ರ ದಶಕದವರೆಗೆ ಶ್ರೀಗಂಧದ ಎಣ್ಣೆ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು. ಆ ಬಳಿಕ ಕಾರ್ಖಾನೆಯನ್ನು ಬಂದ್ ಮಾಡಲಾಯಿತು. ಶ್ರೀಗಂಧದ ಕೊರತೆಯೆ ಕಾರ್ಖಾನೆ ಬಂದ್ ಗೆ ಕಾರಣ ಎಂದು ವಿವರಣೆ ನೀಡಲಾಯಿತು.
ಕೈಗಾರಿಕೆ 5 : ಮ್ಯಾಚ್ ಫ್ಯಾಕ್ಟರಿ
ಸಹ್ಯಾದ್ರಿ ಕಾಲೇಜು ಮುಂಭಾಗ ದಿ ಮೈಸೂರು ಮ್ಯಾಚ್ ಫ್ಯಾಕ್ಟರಿ ಲಿಮಿಟೆಡ್ ಕಾರ್ಖಾನೆ ಇತ್ತು. 1940ರ ಮೇ 17ರಂದು ಕಾರ್ಖಾನೆ ಸ್ಥಾಪಿಸಲಾಗಿತ್ತು. ಬೆಂಕಿ ಕಡ್ಡಿಗೆ ಮೆದುವಾದ ಮರಗಳು ಬೇಕಿದ್ದವು. ಇಲ್ಲಿ ಅಂತಹ ಮರಗಳು ಹೆಚ್ಚಾಗಿ ಸಿಗುತ್ತಿದ್ದವು. ಇದೆ ಕಾರಣಕ್ಕೆ ದಿ ಮೈಸೂರು ಮ್ಯಾಚ್ ಫ್ಯಾಕ್ಟರಿ ಲಿಮಿಟೆಡ್ ಕಾರ್ಖಾನೆ ಆರಂಭಿಸಲಾಗಿತ್ತು. ಈಗ ಈ ಕಾರ್ಖಾನೆಯು ಬಂದ್ ಆಗಿದೆ.
ಇದನ್ನೂ ಓದಿ – ಹೈಟೆಕ್ ಬೈಕಿನಲ್ಲಿ ದೇಶ ಸಂಚಾರ, ಶಿವಮೊಗ್ಗದಿಂದ ರೈಡ್ ಆರಂಭ, ಅಲ್ಲಲ್ಲಿ ಚಿಟಿಕೆ ಮಣ್ಣು ಸಂಗ್ರಹ, ಹೇಗಿದೆ ಬೈಕ್? ಏನಿದು ರೈಡ್?
ಉತ್ಪಾದನಾ ವಲಯದಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಮುಖ ಸ್ಥಾನವಿತ್ತು. ಇದರಿಂದ ಜಿಲ್ಲೆಯು ಆರ್ಥಿಕವಾಗಿ ಸಬಲವಾಗಿತ್ತು. ದೊಡ್ಡ ಕೈಗಾರಿಕೆಗಳು ಮಾಯವಾಗಿವೆ (Shimoga Industries). ಸಣ್ಣ ಪ್ರಮಾಣದ ಉತ್ಪಾದನೆಗಷ್ಟೆ ಜಿಲ್ಲೆ ಸೀಮಿತವಾಗಿದೆ. ಈಗ ಜಿಲ್ಲೆಗೆ ಅಡಕೆ ಹೊರತು ಬೇರೆ ಪ್ರಮುಖ ಆರ್ಥಿಕ ಬಲವಿಲ್ಲ. ಅಡಕೆ ಬೆಲೆಯಲ್ಲಿ ತುಸು ಏರಿಳಿತವಾದರು ಜಿಲ್ಲೆಯ ಅರ್ಥ ವ್ಯವಸ್ಥೆಯೆ ಅಲುಗಾಡುವಂತಾಗಿದೆ. ಇದೆ ಕಾರಣಕ್ಕೆ ಉತ್ಪಾದನಾ ವಲಯಗಳನ್ನು ಬಂದ್ ಮಾಡದಂತೆ ಕಾರ್ಮಿಕರು, ಕಾರ್ಮಿಕ ಸಂಘಟನಗಳು ಪ್ರಬಲವಾಗಿ ಹೋರಾಟ ನಡೆಸುತ್ತಿವೆ.
ಇದನ್ನೂ ಓದಿ – ಶಿವಮೊಗ್ಗ AIRPORT JOBS ಹೆಸರಲ್ಲಿ ಭದ್ರಾವತಿ ವ್ಯಕ್ತಿಗೆ ವಂಚನೆ, ಯಾವೆಲ್ಲ ಕಾರಣಕ್ಕೆ ಹಣ ಪಡೆದಿದ್ದಾರೆ? ಇಲ್ಲಿದೆ ಡಿಟೇಲ್ಸ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200