ಶಿವಮೊಗ್ಗ: ವಿದ್ಯಾನಗರದಲ್ಲಿ ಹಾದು ಹೋಗಿರುವ ಬಿ.ಹೆಚ್.ರಸ್ತೆ ದಿನೇದಿನೆ ಡೇಂಜರಸ್ ಆಗಿ ರೂಪುಗೊಳ್ಳುತ್ತಿದೆ. ಈ ಡಬಲ್ ರೋಡ್‌ನಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
» ಘಟನೆ 1
ನವೆಂಬರ್ 11: ಬೈಕ್‌ನಲ್ಲಿ ತೆರಳುತ್ತಿದ್ದ ಮಣಿಕಂಠ (22) ಎಂಬುವವರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಣಿಕಂಠ ಸಾವನ್ನಪ್ಪಿದ್ದಾರೆ. ವಿದ್ಯಾನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಎದುರಿಗೆ ಘಟನೆ ಸಂಭವಿಸಿದೆ.
» ಘಟನೆ 2
ಅಕ್ಟೋಬರ್ 9: ಎಸ್‌ಬಿಐ ಬ್ಯಾಂಕ್ ಬಳಿ ರಸ್ತೆ ದಾಟುತ್ತಿದ್ದ ನಾಗರಾಜು (40) ಎಂಬುವವರಿಗೆ ಹೊಳೆ ಬಸ್ ನಿಲ್ದಾಣದ ಕಡೆಯಿಂದ ವೇಗವಾಗಿ ಬಂದ ಕೆಟಿಎಂ ಬೈಕ್ ಡಿಕ್ಕಿ ಹೊಡೆದಿದೆ. ನಾಗರಾಜು ಅವರ ಎಡ ಮೊಣಕಾಲಿನ ಮೂಳೆ ಮುರಿದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
» ಘಟನೆ 3
ಸೆಪ್ಟೆಂಬರ್ 9: ರಾತ್ರಿ 11.40ರ ಹೊತ್ತಿಗೆ ಎಂಆರ್‌ಎಸ್ ಕಡೆಗೆ ತೆರಳುತ್ತಿದ್ದ ಪುನಿತ್ (31) ಅವರ ಬೈಕ್‌ಗೆ ಎದುರಿನಿಂದ ರಾಂಗ್ ಸೈಡ್‌ನಲ್ಲಿ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪುನಿತ್ ಗಾಯಗೊಂಡಿದ್ದು, ಬೈಕ್ ಕೂಡ ಹಾನಿಯಾಗಿತ್ತು.

ಇವು ಕಳೆದ ಮೂರು ತಿಂಗಳಲ್ಲಿ ಸಂಚಾರ ಠಾಣೆಯಲ್ಲಿ ದಾಖಲಾಗಿರುವ ಮೂರು ಪ್ರತ್ಯೇಕ ಪ್ರಕರಣಗಳು. ಎಂಆರ್‌ಎಸ್ ಸರ್ಕಲ್‌ನಿಂದ ತುಂಗಾ ಸೇತುವೆವರೆಗಿನ ಡಬಲ್ ರೋಡ್ ನಿತ್ಯ ಒಂದಿಲ್ಲೊಂದು ಅಪಘಾತಕ್ಕೆ ಸಾಕ್ಷಿಯಾಗುತ್ತಿದೆ. ಅದರಲ್ಲಿ ಬೆರಳೆಣಿಕೆ ಘಟನೆಗಳು ಮಾತ್ರ ಎಫ್‌ಐಆರ್ ಹಂತಕ್ಕೆ ತಲುಪುತ್ತಿವೆ.
ಡಬಲ್ ರೋಡ್‌ನಲ್ಲಿ ಏನೇನೆಲ್ಲ ಸಮಸ್ಯೆ ಇದೆ?
ಹೊಂಡ, ಗುಂಡಿಗಳದ್ದೇ ದರ್ಬಾರು: ಹೇಳುವುದಕ್ಕೆ ಇದು ರಾಷ್ಟ್ರೀಯ ಹೆದ್ದಾರಿ. ಆದರೆ ಇಲ್ಲಿರುವ ಗುಂಡಿಯಲ್ಲಿ ಇಡೀ ಬ್ರಹ್ಮಾಂಡವೆ ಕಾಣುತ್ತದೆ. ಆಳ, ಅಗಲದ ವಿಚಾರಕ್ಕೆ ಬಂದರೆ ಇಲ್ಲಿರುವ ಗುಂಡಿಗಳು ಒಂದಕ್ಕೊಂದು ಸ್ಪರ್ಧೆಗೆ ಬಿದ್ದಂತೆ ಕಾಣುತ್ತದೆ. ಬಹುತೇಕ ಅಪಘಾತಕ್ಕೆ ಮೂಲ ಕಾರಣವೇ ಈ ಗುಂಡಿಗಳು.
ವೇಗಕ್ಕೆ ಬೇಕು ಬ್ರೇಕ್: ರಾಷ್ಟ್ರೀಯ ಹೆದ್ದಾರಿಯಾದರು ಈ ರಸ್ತೆ ಅಲ್ಲಲ್ಲಿ ಕಿರಿದಾಗಿದೆ. ವಿದ್ಯಾನಗರದಲ್ಲಿ ಹೆದ್ದಾರಿಗೆ ಹೊಂದಿಕೊಂಡು ಅಂಗಡಿಗಳು, ಹೊಟೇಲ್‌ಗಳು, ಮನೆಗಳಿವೆ. ಹಾಗಾಗಿ ಜನ ದಟ್ಟಣೆ ಹೆಚ್ಚು. ರಸ್ತೆ ಉದ್ದಕ್ಕು 40 ಕಿ.ಮೀ ವೇಗಮಿತಿ ಎಂಬ ಸೂಚನಾ ಫಲಕಗಳಿವೆ. ಆದರೆ ವಾಹನಗಳು ಇದನ್ನು ಪಾಲಿಸಿದ್ದನ್ನು ಕಂಡವರು ವಿರಳ.

ಅಡ್ಡಾದಿಡ್ಡಿ ಪಾರ್ಕಿಂಗ್: ಕಿರಿದಾದ ರಸ್ತೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್‌ನದ್ದು ಮತ್ತೊಂದು ಸಮಸ್ಯೆ. ಕಾರುಗಳು, ದ್ವಿಚಕ್ರ ವಾಹನಗಳು ರಸ್ತೆಯ ಎರಡು ಬದಿ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ವಾಹನಗಳ ಸರಾಗ ಸಂಚಾರಕ್ಕೆ ಸದಾ ಅಡಚಣೆ ಉಂಟಾಗುತ್ತಿದೆ. ಕೆಲವೊಮ್ಮೆ ಅರ್ಧ ರಸ್ತೆವರೆಗು ವಾಹನಗಳನ್ನು ನಿಲ್ಲಿಸಲಾಗುತ್ತದೆ. ಸಣ್ಣಪುಟ್ಟ ಅಪಘಾತಕ್ಕೆ ಕಾರಣವಾಗುತ್ತಿವೆ.

ರಾಂಗ್ ಸೈಡ್ ಡ್ರೈವಿಂಗ್: ಬಿ.ಹೆಚ್.ರಸ್ತೆಯಲ್ಲಿ ರಾಂಗ್ ಸೈಡ್ ಡ್ರೈವಿಂಗ್ ಸಾಮಾನ್ಯವೇನೋ ಅನ್ನುವಂತಾಗಿದೆ. ರಸ್ತೆ ಉದ್ದಕ್ಕು ಅಲ್ಲಲ್ಲಿ ಡಿವೈಡರ್‌ಗಳಿವೆ. ಆದರೆ ಡಿವೈಡರ್‌ಗಳವರೆಗೆ ಹೋಗಿ ತಿರುವು ಪಡೆಯುವ ಬದಲು, ಸಮೀಪದ ಡಿವೈಡರ್‌ನಲ್ಲೇ ವಾಹನ ತಿರುಗಿಸಿ ರಾಂಗ್ ಸೈಡ್‌ನಲ್ಲಿ ಹೋಗಿ ಸಮಯ ಮತ್ತು ಪೆಟ್ರೋಲ್ ಉಳಿತಾಯ ಮಾಡುವವರಿದ್ದಾರೆ..! ಸಹ್ಯಾದ್ರಿ ಕಾಲೇಜು ಮುಂಭಾಗ ಕೆಲವು ವಿದ್ಯಾರ್ಥಿಗಳು ಬೈಕುಗಳಲ್ಲಿ ಸದಾ ರಾಂಗ್ ಸೈಡ್ ತ್ರಿಬಲ್ ರೈಡಿಂಗ್ ಮಾಡುತ್ತಾರೆ. ಸಂಜೆ ವೇಳೆ ತಿನಿಸು ಅಂಡಿಗಳಿಗೆ ಬರುವವರಂತು ರಾಂಗ್ ಸೈಡ್‌ನಲ್ಲೆ ಓಡಾಡುತ್ತಾರೆ. ಈ ರಸ್ತೆಯಲ್ಲಿ ಅಲ್ಲಲ್ಲಿ ನಿಲ್ಲುವ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆಲವರು ರಾಂಗ್ ಸೈಡಿನಲ್ಲಿ ವಾಹನಗಳನ್ನು ನುಗ್ಗಿಸುತ್ತಾರೆ.
ರಸ್ತೆ ಉದ್ದಕ್ಕೂ ಸಿಸಿ ಕ್ಯಾಮರಾಗಳಿವೆ. ಅಲ್ಲಲ್ಲಿ ಸಂಚಾರ ಪೊಲೀಸರು ಓಡಾಡುತ್ತಿರುತ್ತಾರೆ. ಆದರೆ ಸಂಚಾರ ನಿಯಮ ಪಾಲನೆ ಸಮರ್ಪಕವಾಗಿಲ್ಲ. ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಭಾರಿ ವಾಹನಗಳ ಓಡಾಟವು ಹೆಚ್ಚು. ಈಗಲೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಈ ರಸ್ತೆ ಮತ್ತಷ್ಟು ಅಪಘಾತ, ಮಣಿಕಂಠ ಅವರಂತೆ ಮತ್ತಷ್ಟು ಮಂದಿ ಜೀವ ಕಳೆದುಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ » ಶಿವಮೊಗ್ಗದ ಲಾಡ್ಜ್ ರೂಮಿನಲ್ಲಿ ಬೆಂಕಿ ಕೇಸ್, ಪುರುಷ, ಮಹಿಳೆ ವಿರುದ್ಧವೇ ಕೇಸ್, ಏನೇನಿದೆ ದೂರಿನಲ್ಲಿ?
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





