ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 9 ಮಾರ್ಚ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೇಳುವುದಕ್ಕೆ ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ. ಆದರೆ ಸಾರ್ವಜನಿಕ ಶೌಚಾಲಯದ ವಿಚಾರಕ್ಕೆ ಬಂದರೆ ಇಲ್ಲಿ ಇನ್ನೂ ಕನ್ಸರ್’ವೆನ್ಸಿಗಳೆ ಗತಿ. ಅದಕ್ಕೆ ಕಾರಣ ಮಹಾನಗರ ಪಾಲಿಕೆಯ ದಿವ್ಯ ನಿರ್ಲಕ್ಷ್ಯ.
ಶಿವಮೊಗ್ಗ ನಗರದಾದ್ಯಂತ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಬಹುತೇಕ ಶೌಚಾಲಯಗಳು ಬಂದ್ ಆಗಿವೆ. ಇದರ ವಿರುದ್ಧ ಪ್ರತಿಭಟನೆಗಳಾಗಿವೆ. ಪಾಲಿಕೆ ಸಭೆಗಳಲ್ಲೂ ಚರ್ಚೆಯಾಗಿದೆ. ಆದರೆ ಪ್ರಯೋಜನ ಮಾತ್ರ ಶೂನ್ಯ.
ಇನ್ನೆಲ್ಲಿಯ ಸ್ವಚ್ಛ ಭಾರತ ಕನಸು?
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಕುರಿತು ಕನಸು ಬಿತ್ತಿ, ಜಾಗೃತಿ ಮೂಡಿಸಿ, ಯೋಜನೆ ಸಂಬಂಧ ಕೋಟ್ಯಂತರ ರೂಪಾಯಿ ಹಣವನ್ನು ಮೀಸಲಿಟ್ಟಿದ್ದಾರೆ. ಆದರೆ ಶಿವಮೊಗ್ಗದಲ್ಲಿ ಬಹು ವರ್ಷದ ಹಿಂದೆಯೇ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯಗಳನ್ನು ಬಂದ್ ಮಾಡಿ, ಪ್ರಧಾನಿ ಮೋದಿ ಅವರ ಆಶಯವನ್ನೆ ಅಣಕಿಸುವಂತಹ ವಾತಾವರಣ ನಿರ್ಮಿಸಲಾಗಿದೆ. ಇದೇ ಕಾರಣಕ್ಕೆ ಸಾರ್ವಜನಿಕರು ಶೌಚಾಲಯವಿಲ್ಲದೆ, ಅರ್ಜೆಂಟಾದವರು ಕನ್ಸರ್’ವೆನ್ಸಿಗಳನ್ನು ಆಶ್ರಯಿಸುವಂತಾಗಿದೆ.
ಎಷ್ಟು ಶೌಚಾಲಯಗಳು ಬಂದ್ ಆಗಿವೆ?
ಶಿವಮೊಗ್ಗ ನಗರದಲ್ಲಿ 20 ಸಾರ್ವಜನಿಕ ಶೌಚಾಲಯ, 10 ಸಮುದಾಯ ಶೌಚಾಲಯವಿದೆ. ಜನನಿಬಿಡ ಪ್ರದೇಶಗಳನ್ನು ಗುರುತಿಸಿಯೆ ಈ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗವಿದ್ದು, ಪ್ರತ್ಯೇಕ ಬಾಗಿಲುಗಳಿವೆ. ವಿಪರ್ಯಾಸ ಅಂದರೆ, ಬಹುತೇಕ ಶೌಚಾಲಯಗಳ ಬಾಗಿಲುಗಳನ್ನು ಬಂದ್ ಮಾಡಿ, ಬೀಗಿ ಜಡಿಯಲಾಗಿದೆ. ಹಾಗಾಗಿ ಶಿವಮೊಗ್ಗ ನಗರದಲ್ಲಿ ಶೌಚಾಲಯಗಳು ಇದ್ದೂ ಇಲ್ಲದಂತಾಗಿವೆ.
ಎಲ್ಲೆಲ್ಲಿ ಶೌಚಾಲಯವಿದೆ? ಯಾವೆಲ್ಲಬಂದ್ ಆಗಿವೆ?
ಬಟ್ಟೆ ಮಾರುಕಟ್ಟೆ, ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ, ಗಾಂಧಿ ಬಜಾರ್ನ ಸ್ವಾಗತ ಕ್ಯಾಂಟೀನ್, ಹೂವಿನ ಮಾರುಕಟ್ಟೆ ಪಕ್ಕದಲ್ಲಿರುವ ಶೌಚಾಲಯ, ಗಾಂಧಿಬಜಾರ್ ತರಕಾರಿ ಮಾರುಕಟ್ಟೆ, ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನ ಹಿಂಭಾಗದ ಶೌಚಾಲಯ, ನೆಹರೂ ರಸ್ತೆ, ಜೆ.ಎಚ್.ಪಟೇಲ್ ಕಾಂಪ್ಲೆಕ್ಸ್ ಬಳಿಯ ಶೌಚಾಲಯ, ಜಯನಗರ 1ನೇ ಕ್ರಾಸ್, ಮೆಗ್ಗಾನ್ ಆಸ್ಪತ್ರೆ ಕಾಂಪೌಂಡ್ನಲ್ಲಿರುವ ಶೌಚಾಲಯ, ಜೈಲ್ ಕಾಂಪೌಂಡ್ ಪಕ್ಕ, ಖಾಸಗಿ ಬಸ್ ನಿಲ್ದಾಣ ಹಿಂಭಾಗ, ಉಷಾ ನರ್ಸಿಂಗ್ ಹೋಂ ಮುಂಭಾಗದ ಕನ್ಸರ್ವೆನ್ಸಿ ರಸ್ತೆಯ ಶೌಚಾಲಯ, ಗೋಪಾಳ ಬಸ್ ನಿಲ್ದಾಣ, ಗೋಪಿ ವೃತ್ತ ಬಳಿ ದೇವರಾಜ್ ಅರಸ್ ವಾಣಿಜ್ಯ ಸಂಕೀರ್ಣದ ಇ-ಟಾಯ್ಲೇಟ್, ದುರ್ಗಿಗುಡಿ ಕನ್ಸರ್ವೆನ್ಸಿ, ನೆಹರು ಕ್ರೀಡಾಂಗಣದಲ್ಲಿ ಪುರುಷರ ಹಾಗೂ ಮಹಿಳಾ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಇಲ್ಲೆಲ್ಲ ನಿರ್ವಹಣೆ ಕೊರತೆಯಿದೆ.
ಶೌಚಾಲಯಕ್ಕೆ ಬೀಗ ಜಡಿಯಲು ಕಾರಣವೇನು?
ಶೌಚಾಲಯಗಳ ನಿರ್ವಹಣೆಗೆ ಯಾರೂ ಮುಂದೆ ಬಾರದೆ ಇರುವುದೇ ಇವುಗಳಿಗೆ ಬೀಗ ಜಡಿಯಲು ಕಾರಣ. ಪಾಲಿಕೆ ಟೆಂಡರ್ ಕರೆದರೂ, ಗುತ್ತಿಗೆದಾರರು ಆಸಕ್ತಿ ತೋರಿಸುತ್ತಿಲ್ಲ. ಈ ಕುರಿತು ಶಿವಮೊಗ್ಗ ಲೈವ್.ಕಾಂ ಪಾಲಿಕೆ ಕಮಿಷನರ್ ಚಿದಾನಂದ ವಠಾರೆ ಅವರನ್ನು ಸಂಪರ್ಕಿಸಿದಾಗ, ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯದ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಎಲ್ಲ ಶೌಚಾಲಯಗಳ ಬಳಕೆಗೆ ಅವಕಾಶ ಕಲ್ಪಿಸಲಾಗುತ್ತದೆ ಅನ್ನುತ್ತಾರೆ.
ಕೆಲವು ಕಡೆ ಸಾರ್ವಜನಿಕ ಶೌಚಾಲಯವಿದ್ದರೂ ಜನರು ಅಲ್ಲಿಗೆ ಹೋಗುತ್ತಿಲ್ಲ. ಹಣ ಕೊಡುವುದನ್ನು ತಪ್ಪಿಸಿಕೊಳ್ಳುವು ಸಲುವಾಗಿ ಹೊರಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಅಗತ್ಯವಿರುವ ಕಡೆಗೆ ಶೌಚಾಲಯಗಳು ಬಂದ್ ಆಗಿರುವುದು ಜನರು ಒತ್ತಾಯವಾಗಿ ಬಯಲಲ್ಲಿ ಮೂತ್ರ ವಿಸರ್ಜನೆಗೆ ಪ್ರೇರೇಪಣೆ ನೀಡುತ್ತಿದೆ. ಇದಕ್ಕೆ ಮಹಾನಗರ ಪಾಲಿಕೆ ಕೂಡಲೇ ಕಡಿವಾಣ ಹಾಕಬೇಕಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]