ಶಿವಮೊಗ್ಗ ಲೈವ್.ಕಾಂ |SHIMOGA NEWS | 23 NOVEMBER 2020
ರಾತ್ರಿ ಹೊತ್ತು ಸಂಭವಿಸುವ ಅಪಘಾತಗಳ ಪೈಕಿ, ಕೆಲವಕ್ಕೆ ಬೀಡಾಡಿ ದನಗಳೆ ಕಾರಣ. ಈ ಅಪಘಾತಗಳು ವಾಹನ ಸವಾರರು ಮಾತ್ರವಲ್ಲ, ದನಗಳ ಜೀವಕ್ಕೂ ಕುತ್ತು ತರುತ್ತವೆ. ರಾತ್ರಿ ವೇಳೆ ವಾಹನ ಚಾಲಕರ ಕಣ್ಣಿಗೆ ದನಗಳು ಸ್ಪಷ್ಟವಾಗಿ ಕಾಣುವಂತಾದರೆ ಅಪಘಾತಗಳ ಪ್ರಮಾಣ ಕಡಿಮೆಯಾಗಲಿದೆ. ಈ ಕಾರಣಕ್ಕೆ ಯುವಕರ ತಂಡವೊಂದು, ರೇಡಿಯಂ ಅಭಿಯಾನ ಆರಂಭಿಸಿದೆ.
ದನಗಳ ಕೊಂಬಿಗೆ ರೇಡಿಯಂ
ಶಿವಮೊಗ್ಗ ನಗರದಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಿದೆ. ದನಗಳನ್ನು ಹಿಡಿದು ಗೋಶಾಲೆಗೆ ಸೇರಿಸಲಾಗುತ್ತದೆ ಎಂದು ಮಹಾನಗರ ಪಾಲಿಕೆ ಆಗಿಂದಾಗ್ಗೆ ಎಚ್ಚರಿಕೆ ಸಂದೇಶವನ್ನು ಪ್ರಕಟಿಸುತ್ತದೆ. ಆದರೆ ಈವರೆಗು ಕ್ರಮ ಕೈಗೊಂಡಿಲ್ಲ, ದನಗಳನ್ನು ಗೋಶಾಲೆಗೂ ಸೇರಿಸಿಲ್ಲ. ಹಾಗಾಗಿ ಅಪಘಾತಗಳು ತಪ್ಪಿಸಲು ಸಾದ್ಯವಾಗುತ್ತಿಲ್ಲ. ಇನ್ಮುಂದೆ ಅಪಘಾತಗಳು ತಪ್ಪಿಸಬೇಕು ಎಂಬ ಕಾರಣಕ್ಕೆ ಯುವಕರ ಗುಂಪೊಂದು ಗೋವುಗಳ ಕೊಂಬಿಗೆ ರೇಡಿಯಂ ಅಂಟಿಸುತ್ತಿದೆ.
ಎಲ್ಲೆಲ್ಲಿ ರೇಡಿಯಂ ಕಾರ್ಯಾಚರಣೆ?
- ಶಿವಮೊಗ್ಗ ನಗರದಲ್ಲಿ ಸುಮಾರು 25 ಬೀಡಾಡಿ ದನಗಳನ್ನು ಗುರುತಿಸಿ, ಅವುಗಳ ಕೊಂಬಿಗೆ ರೇಡಿಯಂ ಸ್ಟಿಕರ್ ಅಂಟಿಸಲಾಗಿದೆ.
- ಸಾಗರ ರಸ್ತೆ, ವಿನೋಬಗರ ನೂರು ಅಡಿ ರಸ್ತೆ, ಲಕ್ಷ್ಮೀ ಟಾಕೀಸ್, ಸವಳಂಗ ರಸ್ತೆ, ಹರಿಗೆ, ವಿದ್ಯಾನಗರ ಸೇರಿದಂತೆ ನಗರದ ಹಲವು ಕಡೆ ಬೀಡಾಡಿ ದನಗಳ ಕೊಂಬಿಗೆ ರೇಡಿಯಂ ಅಂಟಿಸಲಾಗಿದೆ.
ಯಾರಿದು ಯುವಕರು?
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಯ ಶಿವಮೊಗ್ಗದ ಕಾರ್ಯಾಕರ್ತರು ಈ ವಿಭಿನ್ನ ಯೋಚನೆ ಮಾಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ಶಿವಮೊಗ್ಗ ನಗರದಲ್ಲಿ ಈ ರೇಡಿಯಂ ಸ್ಟಿಕ್ಕರ್ ಅಭಿಯಾನ ನಡೆಸಲಾಗಿದೆ. ಮುಂದೆ ವಿವಿಧೆಡೆ ಇದೆ ಮಾದರಿಯ ಅಭಿಯಾನವನ್ನು ನಿರಂತರವಾಗಿ ನಡೆಸಲು ಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಶಿವಮೊಗ್ಗ ನಗರ ಸಹ ಕಾರ್ಯದರ್ಶಿ ಮಂಜು ಶೇಟ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು.
ವಿಹೆಚ್‍ಪಿ, ಬಜರಂಗದಳ ಸಂಘಟನೆಯ ಮಂಜು ಶೇಟ್, ಸುರೇಶ್ ಬಾಬು, ಸಚಿನ್ ರಾಯ್ಕರ್, ಅಮಿತ್ ಕಟ್ಟೆ, ಪೃಥ್ವಿ ಗೌಡ, ಅಕ್ಷಯ್, ಕಿರಣ್, ವಿಕಾಸ್ ಅವರು ಈ ರೇಡಿಯಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಕಟಣೆಗೆ ಸೀಮಿತವಾದ ಪಾಲಿಕೆ
ವಾರಸುದಾರರು ದನಗಳನ್ನು ರಸ್ತೆಗೆ ಬಿಡಬಾರದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಪದೇ ಪದೇ ತಿಳಿಸುತ್ತದೆ. ತಿಂಗಳೋ, ಆರು ತಿಂಗಳಿಗೋ ಒಮ್ಮೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸುತ್ತದೆ. ದನಗಳನ್ನು ಗೋಶಾಲೆಗೆ ಬಿಡುವುದಾಗಿ ಎಚ್ಚರಿಕೆಯನ್ನು ನೀಡುತ್ತದೆ. ಆದರೆ ಈವರೆಗೂ ಕ್ರಮ ಕೈಗೊಂಡ ನಿದರ್ಶನವಿಲ್ಲ. ಅಪಘಾತಗಳು ಹೆಚ್ಚಲು ಇದು ಕೂಡ ಕಾರಣವಾಗಿದೆ. ಈಗ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರ ರೇಡಿಯಂ ಅಭಿಯಾನ ಜನರ ಮೆಚ್ಚುಗೆ ಗಳಿಸಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]