ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 APRIL 2023
ELECTION NEWS : ಮೂರು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ ಪಕ್ಷ ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು (Congress Candidates) ಘೋಷಿಸಿದೆ. ಪ್ರತಿ ಕ್ಷೇತ್ರದಲ್ಲಿಯು ಅಳೆದು ತೂಗಿ, ಹಂತ ಹಂತವಾಗಿ ಅಭ್ಯರ್ಥಿಗಳನ್ನು (Congress Candidates) ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರದಿಂದ ಕಾಂಗ್ರೆಸ್ ಯಾರನ್ನೆಲ್ಲ ಕಣಕ್ಕಿಳಿಸಿದೆ, ಅವರ ಕಿರು ಪರಿಚಯ ಇಲ್ಲಿದೆ.
ಶಿವಮೊಗ್ಗ : ಹೆಚ್.ಸಿ.ಯೋಗೇಶ್
ಹೆಚ್.ಸಿ.ಯೋಗೇಶ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ. ವಿರೋಧ ಪಕ್ಷದ ನಾಯಕನಾಗಿಯು ಜವಾಬ್ದಾರಿ ನಿಭಾಯಿಸಿದ್ದಾರೆ. ಇವರ ತಂದೆ ಹೆಚ್.ಎಂ.ಚಂದ್ರಶೇಖರಪ್ಪ ಅವರು ಶಿವಮೊಗ್ಗದಲ್ಲಿ ಒಮ್ಮೆ ಶಾಸಕರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹೆಚ್.ಸಿ.ಯೋಗೇಶ್ ಹಲವು ಹೋರಾಟ ಮಾಡಿದ್ದಾರೆ. ವಿವಿಧ ರಾಜ್ಯಗಳ ಚುನಾವಣೆ ಹೊತ್ತಲ್ಲಿ ಪಕ್ಷದ ಪರವಾಗಿ ಜವಾಬ್ದಾರಿ ಹೊತ್ತು ಪ್ರಚಾರ ಮಾಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ : ಶ್ರೀನಿವಾಸ ಕರಿಯಣ್ಣ
ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ. ವೃತ್ತಿಯಲ್ಲಿ ಡಾಕ್ಟರ್. ರಾಜಕಾರಣಕ್ಕೆ ಧುಮುಕುವ ಹಿನ್ನೆಲೆ ವೈದ್ಯಕೀಯ ಹುದ್ದೆಗೆ ರಾಜೀನಾಮೆ ನೀಡಿದ್ದರು. 2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು. ಆ ಬಳಿಕ ಪಕ್ಷದ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಹೋರಾಟಗಳು, ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು.
ಭದ್ರಾವತಿ : ಬಿ.ಕೆ.ಸಂಗಮೇಶ್ವರ್
ಬಿ.ಕೆ.ಸಂಗಮೇಶ್ವರ್ ಅವರು ಭದ್ರಾವತಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. ಒಮ್ಮೆ ಸ್ವತಂತ್ರವಾಗಿ ನಿಂತು ಗೆದ್ದಿದ್ದರು. ಉಳಿದೆರಡು ಬಾರಿ ಕಾಂಗ್ರೆಸ್‍ನಿಂದ ಗೆದ್ದಿದ್ದಾರೆ. ಅನುಭವಿ ರಾಜಕಾರಣಿ. ಕ್ಷೇತ್ರದ ಕಾಂಗ್ರೆಸ್‍ನಲ್ಲಿ ಪ್ರಶ್ನಾತೀತ ನಾಯಕ.
ತೀರ್ಥಹಳ್ಳಿ : ಕಿಮ್ಮನೆ ರತ್ನಾಕರ್
ಕಿಮ್ಮನೆ ರತ್ನಾಕರ್ ಅವರು ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಪಕ್ಷದಲ್ಲಿಯು ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ಮಹಾತ್ಮ ಗಾಂಧೀಜಿ, ಶಾಂತವೇರಿ ಗೋಪಾಲಗೌಡ ಅವರ ವಿಚಾರಧಾರೆಯತ್ತ ಹೆಚ್ಚು ಒಲವು. ಕ್ಷೇತ್ರದಲ್ಲಿ ಹಲವು ಪಾದಯಾತ್ರೆ, ಧರಣಿ, ಹೋರಾಟ ಮಾಡಿದ್ದರು.
ಸಾಗರ : ಬೇಳೂರು ಗೋಪಾಲಕೃಷ್ಣ
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಗರಡಿಯಲ್ಲಿ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಸಾಗರ ಕ್ಷೇತ್ರದಿಂದ ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದರು. ಬಿಜೆಪಿಯಲ್ಲಿ ಸಕ್ರಿಯವಾಗಿದ್ದರು. ಕಳೆದ ವಿಧಾನಸಭೆ ಚುನಾವಣೆ ಹೊತ್ತಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕ್ಷೇತ್ರದಾದ್ಯಂತ ಸಂಚರಿಸಿ ಪಕ್ಷ ಸಂಘಟನೆ, ಪ್ರಚಾರ ಮಾಡಿದ್ದರು.
ಸೊರಬ : ಮಧು ಬಂಗಾರಪ್ಪ
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ. ಬಂಗಾರಪ್ಪ ಅವರ ಜೊತೆಗಿದ್ದು ಅಧಿಕಾರವನ್ನು ಸಮೀಪದಿಂದ ಕಂಡವರು. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. 2013ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೊರಬ ಶಾಸಕರಾಗಿದ್ದರು. ಈಚೆಗೆ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಜವಾಬ್ದಾರಿ ನೀಡಲಾಗಿದೆ. ಪ್ರಣಾಳಿಕೆ ಸಮಿತಿಯಲ್ಲಿಯು ಇದ್ದಾರೆ.
ಶಿಕಾರಿಪುರ : ಗೋಣಿ ಮೇಲ್ತೇಶ್
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸೆಣೆಸಾಡಿ ದೊಡ್ಡ ಸಂಖ್ಯೆಯ ಮತ ಗಳಿಸಿದ್ದು ಇವರ ಹೆಗ್ಗಳಿಕೆ. 2018ರಲ್ಲಿ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಮಾಢಿ 51,586 ಮತ ಪಡೆದಿದ್ದರು. ತಮ್ಮ ಮೊದಲ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಎದುರಿಸಿದ್ದ ಗೋಣಿ ಮಾಲ್ತೇಶ್ ಅವರು ಈ ಬಾರಿ ಪುತ್ರ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಸೆಣಸಲು ಸಿದ್ಧವಾಗಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಶಾಸಕರ ಪುತ್ರರಿಗೆ ಒಲಿದ ಅದೃಷ್ಟ, ಯಾರದು? ಮಾಜಿ ಎಂಎಲ್‌ಎಗಳ್ಯಾರು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422