ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ನವೆಂಬರ್ 2021
ಬಿಟ್ ಕಾಯಿನ್ ಹಗರಣದಲ್ಲಿ ಜಿಲ್ಲೆಯ ಬಿಜೆಪಿಯ ಪ್ರಭಾವಿ ನಾಯಕರು ಮತ್ತು ಅವರ ಮಕ್ಕಳು ಇರುವ ಸಂಶಯವಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್.ಸುಂದರೇಶ್, ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಮುಖಂಡರು, ಅವರ ಮಕ್ಕಳಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ಮಾಡಬೇಕು. ಭ್ರಷ್ಟಾಚಾರ ಮತ್ತು ಲೂಟಿಯ ಹಿಂದೆ ಬಿಜೆಪಿ ನಾಯಕರು ಇದ್ದಾರೆಂಬುದು ಬಹಿರಂಗವಾಗಿದೆ. ಈಗಾಗಲೇ ಬಿಜೆಪಿಯಲ್ಲಿ ತಲ್ಲಣ ಉಂಟು ಮಾಡಿರುವ ಈ ಪ್ರಕರಣ ರಾಜ್ಯ ಸರ್ಕಾರವನ್ನು ಉರುಳಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು.
ದೊಡ್ಡ ನಾಯಕನಾಗುವ ಭ್ರಮೆ
ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರನ್ನು ಟೀಕೆ ಮಾಡುವುದರಿಂದ ದೊಡ್ಡ ನಾಯಕರಾಗುತ್ತೇವೆಂಬ ಭ್ರಮೆಯಲ್ಲಿದ್ದಾರೆ. ಶಿವಮೊಗ್ಗ ನಗರದ ಸಮಸ್ಯೆಗಳು ಅವರಿಗೆ ಗೊತ್ತಿಲ್ಲ. ಪೂಜೆ, ಓಡಾಟ ಮತ್ತು ಧಾರ್ಮಿಕ ಭಾವನೆಗಳ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ತಾವೊಬ್ಬ ಜವಾಬ್ದಾರಿಯುತ ಸಚಿವ ಎಂಬುದನ್ನು ಮರೆತು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಮತ್ತಷ್ಟು ತೀವ್ರ
ಮಹಾನಗರ ಪಾಲಿಕೆ ಸಮಸ್ಯೆ ಮತ್ತು ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು. ಮೆಗ್ಗಾನ್ ಆಸ್ಪತ್ರೆ ಸಮಸ್ಯೆಗಳ ಆಗರವಾಗಿದೆ. ಸಿಮ್ಸ್ ನಿರ್ದೇಶಕರನ್ನು ಬದಲಿಸಿ ಅರ್ಹರಿಗೆ ಅವಕಾಶ ನೀಡಬೇಕು. ಜತೆಗೆ ಮಹಾನಗರ ಪಾಲಿಕೆ ಆಯುಕ್ತರನ್ನೂ ಬದಲಿಸಿ ಅವರ ಸ್ಥಾನಕ್ಕೆ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಸುಂದರೇಶ್ ಒತ್ತಾಯಿಸಿದರು.
ಆಶ್ರಯ ಸಮಿತಿ ಅವ್ಯವಹಾರಗಳನ್ನು ಬಯಲಿಗೆಳೆಯಬೇಕಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿನ ಸಮಸ್ಯೆ ಬಗೆಹರಿಯಬೇಕಾಗಿದೆ. ಕಾಂಗ್ರೆಸ್ ಪಕ್ಷ ಈ ಎಲ್ಲದರ ವಿರುದ್ಧ ಮಹಾನಗರ ಪಾಲಿಕೆ ಸಭೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422