SHIVAMOGGA LIVE NEWS | 8 AUGUST 2023
SHIMOGA : ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ (BJP) ರೈತ ಮೋರ್ಚಾದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
![]() |
ಮುಖ್ಯಮಂತ್ರಿ ಸಿದ್ದರಾಮಯ್ಯ, (Siddaramaiah) ಕಾಂಗ್ರೆಸ್ ಪಕ್ಷ (Congress) ಮತ್ತು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಘೋಷಣೆ ಕೂಗಿದರು.
ಇದನ್ನೂ ಓದಿ:ತುಂಗಾ ಎಡದಂಡೆ ನಾಲೆಯಲ್ಲಿ ಕೆಲ ದಿನ ನೀರಿನ ಹರಿವು ಕಡಿಮೆಯಾಗಲಿದೆ, ಕಾರಣವೇನು?
ಯಾರೆಲ್ಲ ಏನೇನು ಹೇಳಿದರು?
ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ : ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರು ರೈತರಿಗೆ 6 ಸಾವಿರ ರೂ. ಕೊಡುತ್ತಿದ್ದಾರೆ. ಯಡಿಯೂರಪ್ಪ ಅವರು 4 ಸಾವಿರ ರೂ. ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಸರ್ಕಾರ ರೈತರಿಗೆ ಕೊಡುವ 4 ಸಾವಿರ ರೂ. ಹಣ ಯೋಜನೆ ಹಿಂಪಡೆದಿದ್ದಾರೆ. ಮೂರು ತಿಂಗಳಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರದ ವರದಿಗಳು ಹೇಳುತ್ತಿವೆ. ಆದರೆ ಈ ತನಕ ರೈತರ ಮನೆಗೆ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ, ಸಾಂತ್ವನವನ್ನು ಹೇಳಿಲ್ಲ. ವಿದ್ಯಾನಿಧಿ ಯೋಜನೆ ಹಿಂಪಡೆದಿದ್ದಾರೆ. ರೈತರ ಮಕ್ಕಳು ವಿದ್ಯಾವಂತರಾಗುವುದು ಸಿದ್ದರಾಮಯ್ಯಗೆ ಇಷ್ಟವಿಲ್ಲ.
ಆರಗ ಜ್ಞಾನೇಂದ್ರ, ಮಾಜಿ ಸಚಿವ : ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂ. ಹಣವನ್ನು ಕೃಷಿಗಾಗಿ ಮೀಸಲಿಟ್ಟಿರುವುದಾಗಿ ಘೋಷಿಸಿದ್ದರು. ಆದರೆ ಈ ಪೈಕಿ 5 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಾಗಿ ವರ್ಗಾಯಿಸಿದ್ದಾರೆ. ಎಪಿಎಂಸಿ ಹೊರಗು ಅಡಿಕೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದೆವು. ರೈತ ಬೆಳೆದ ಬೆಳೆಯನ್ನು ಮಾರಾಟ ಮಾಡುವುದು ಆತನ ಹಕ್ಕು. ಎಪಿಎಂಸಿ ಕಾಯ್ದೆ ರದ್ದುಗೊಳಿಸಿ ಆ ಹಕ್ಕು ಕಸಿದುಕೊಂಡಿದ್ದಾರೆ. ಅಡಿಕೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ. ಮಂಜೂರು ಮಾಡಿಸಿದ್ದೆವು. ಅದನ್ನು ತಡೆ ಹಿಡಿದಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ ನಗರದ ವಿವಿಧೆಡೆ ಆ.8ರಂದು ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ವ್ಯತ್ಯಯ
ಸಾಲೇಕೊಪ್ಪ ರಾಮಚಂದ್ರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ : ಸಿದ್ದರಾಮಯ್ಯ ಸರ್ಕಾರ ಎಲ್ಲ ಜಿಲ್ಲೆಯಲ್ಲಿ ಗೋಶಾಲೆ ಮಾಡಬೇಕು. ಗೋವುಗಳ ರಕ್ಷಣೆ ಮಾಡಬೇಕು. ಗೋವುಗಳಿಲ್ಲದೆ ರೈತರಿಗೆ ಉಳಿಗಾಲವಿಲ್ಲ. ಆದರೆ ಈ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ತೆಗೆದು ಹಾಕಲು ನಿರ್ಧರಿಸಿದೆ. ಎಪಿಎಂಸಿ ಕಾಯ್ದೆ, ವಿದ್ಯಾನಿಧಿ ಸೇರಿದಂತೆ ಹಲವು ರೈತಪರ ಯೋಜನೆ ರದ್ದುಗೊಳಿಸಿ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ.
ರೈತ ವಿರೋಧಿ ನೀತಿಗಳನ್ನು ರಾಜ್ಯ ಸರ್ಕಾರ ಕೈ ಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಬಿಜೆಪಿ ಕಚೇರಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ರೈತ ಮೋರ್ಚಾದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಧಾನ ಕಾರ್ಯದರ್ಶಿ ಕೃಷ್ಣೋಜಿರಾವ್, ವಿನ್ಸಂಟ್ ರೋಡ್ರಿಗಸ್, ಜಿಲ್ಲಾ ಪ್ರಭಾರಿ ಬಿ.ಇ.ವಿರೂಪಾಕ್ಷಪ್ಪ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಪ್ರಮುಖರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ವೀರಭದ್ರಪ್ಪ ಪೂಜಾರಿ, ದಿನೇಶ್ ಬುಳ್ಳಾಪುರ, ತಮ್ಮಡಿಹಳ್ಳಿ ನಾಗರಾಜ್ ಸೇರಿದಂತೆ ಹಲವರು ಇದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200