ಶಿವಮೊಗ್ಗ: ವಿಧಾನಸಭೆ ಸದಸ್ಯರಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು, ರಾಜ್ಯಸಭೆ ಮಾದರಿ ರಹಸ್ಯ ಮತದಾನ ಪದ್ಧತಿ ರದ್ದುಗೊಳಿಸಿ ಮುಕ್ತ ಮತದಾನ (ಓಪನ್ ಬ್ಯಾಲೆಟ್) ವ್ಯವಸ್ಥೆ ಜಾರಿಗೆ ತರಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಒತ್ತಾಯಿಸಿದ್ದಾರೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಇತ್ತೀಚೆಗೆ ನಡೆದ ಪರಿಷತ್ ಚುನಾವಣೆಗಳಲ್ಲಿ ಕೇಳಿಬಂದಿರುವ ಅಡ್ಡ ಮತದಾನ, ರೆಸಾರ್ಟ್ ರಾಜಕೀಯ ಹಾಗೂ ಆಮಿಷಗಳ ಮೂಲಕ ಜನಪ್ರತಿನಿಧಿಗಳನ್ನು ಸೆಳೆಯುವ ಕುತಂತ್ರಗಳು ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರುತ್ತಿವೆ. ಇದಕ್ಕೆ ಬ್ರೇಕ್ ಹಾಕಲು ಚುನಾವಣಾ ಸುಧಾರಣೆ ಅಗತ್ಯ ಎಂದು ಅರುಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಜಪೇಯಿ ಸರ್ಕಾರದಲ್ಲಿ ಓಪನ್ ಬ್ಯಾಲೆಟ್
ಹಿಂದೆ ರಾಜ್ಯಸಭಾ ಚುನಾವಣೆಗಳಲ್ಲೂ ಇಂತಹದ್ದೇ ದೂರುಗಳು ಕೇಳಿಬಂದಾಗ, 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರವು ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ತಂದು ಮುಕ್ತ ಮತದಾನ ಪದ್ಧತಿ ಜಾರಿಗೆ ತಂದಿತ್ತು. ಇದನ್ನು 2006ರಲ್ಲಿ ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿದೆ ಎಂದು ಡಿ.ಎಸ್.ಅರುಣ್ ತಿಳಿಸಿದ್ದಾರೆ.
ಅಧಿಕಾರ ಬಲದ ಆಮಿಷ ಅಥವಾ ಬ್ಲಾಕ್‌ಮೇಲ್ ರಾಜಕೀಯಕ್ಕೆ ಹೆದರಿ ಪಕ್ಷದ ವಿಪ್ ಉಲ್ಲಂಘಿಸುವುದನ್ನು ತಡೆಯಲು ಮುಕ್ತ ಮತದಾನ ಪದ್ಧತಿ ಅತ್ಯಗತ್ಯ. ಈ ವ್ಯವಸ್ಥೆಯಿಂದಾಗಿ ಜನಪ್ರತಿನಿಧಿಗಳು ತಮ್ಮ ಪಕ್ಷದ ಅಧಿಕೃತ ಏಜೆಂಟರಿಗೆ ಮತಪತ್ರ ತೋರಿಸಿ ಮತ ಚಲಾಯಿಸಬೇಕಾಗುವುದರಿಂದ ರಾಜಕೀಯ ಭ್ರಷ್ಟಾಚಾರಕ್ಕೆ ಮುಕ್ತಿ ಸಿಗಲಿದೆ. ಆದ್ದರಿಂದ ಚುನಾವಣಾ ಆಯೋಗ ಮತ್ತು ಸರ್ಕಾರಗಳು ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
