SHIVAMOGGA LIVE NEWS | 2 MAY 2024
ELECTION NEWS : ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಷಣ ಮಾಡಿದರು. ಯಾರೆಲ್ಲ ಏನೇನು ಹೇಳಿದರು?
- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಒಂದೊಂದು ಯೋಜನೆ ಒಬ್ಬೊಬ್ಬರನ್ನು ತಲುಪುತ್ತಿದೆ. ಮಹಾಲಕ್ಷ್ಮಿ ಯೋಜನೆ ಅಡಿ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ವರ್ಷ ಒಂದು ಲಕ್ಷ ರೂ., ಯುವಕರಿಗೆ ತರಬೇತಿ ನೀಡಿ, ನೌಕರಿಗೆ ಯೋಗ್ಯವಾದ ರೀತಿ ಸಿದ್ಧಗೊಳಿಸುತ್ತೇವೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 72 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೆವು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮತ್ತೆ ರೈತರ ಸಾಲ ಮನ್ನಾ ಮಾಡುತ್ತೇವೆ. ಮೋದಿ ಸರ್ಕಾರ ಕಾರ್ಮಿಕರ ಪರ ಯಾವುದೇ ಯೋಜನೆ ರೂಪಿಸಿಲ್ಲ. ನಮ್ಮ ಸರ್ಕಾರ ಬಂದರೆ ಮೋದಿ ಸರ್ಕಾರದಲ್ಲಿ ತೆಗೆದು ಹಾಕಿರುವ ಕಾರ್ಮಿಕ ಪರ ಕಾಯ್ದೆಗಳನ್ನು ಪುನರ್ ಸ್ಥಾಪಿಸುತ್ತೇವೆ.
ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಇದು ಕುವೆಂಪು ಅವರ ನಾಡು. ಬಂಗಾರಪ್ಪ ಅವರಿಗೆ ಆಶೀರ್ವಾದ ಮಾಡಿದ್ದ ನಾಡು. ಇದೆ ಸ್ಥಳದಲ್ಲಿ ಯುವನಿಧಿ ಯೋಜನೆ ಜಾರಿಗೊಳಿಸಿದ್ದೆವು. ಐದು ಗ್ಯಾರಂಟಿಯನ್ನು ನೀಡಿ ಶಕ್ತಿ ತುಂಬಿದ್ದೇವೆ. ಮಾತು ಕೊಟ್ಟಂತೆ ನಡೆದಿದ್ದೇವೆ. ಇದೆ ಕಾರಣಕ್ಕೆ ಇಡೀ ರಾಜ್ಯದಲ್ಲಿ 28ರ ಪೈಕಿ 20 ಕಡೆ ಗೆಲುವು ಸಾಧಿಸಲಿದ್ದೇವೆ. ಶಿವಮೊಗ್ಗದಲ್ಲಿಯು ಗೆಲ್ಲುತ್ತೇವೆ. ಈ ಹಿಂದೆ ಸಿದ್ದರಾಮಯ್ಯ ಮತ್ತು ತಾವು ಸಹಿ ಮಾಡಿದ್ದ ಗ್ಯಾರಂಟಿ ಕಾರ್ಡ್ಗಳನ್ನು ಮನೆ ಮನೆಗೆ ಹಂಚಿದ್ದೀರ. ಈ ಬಾರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕ ರಾಹುಲ್ ಗಾಂಧಿ ಅವರು ಸಹಿ ಮಾಡಿರುವ ಗ್ಯಾರಂಟಿ ಕಾರ್ಡ್ ಅನ್ನು ಎಲ್ಲರಿಗು ತಲುಪಿಸಿ.
- ಸಿಎಂ ಸಿದ್ದರಾಮಯ್ಯ ಭಾಷಣದ 4 ಪ್ರಮುಖಾಂಶ
ಕಳೆದ ಲೋಕಸಭೆ ಚುನಾವಣೆಯಲ್ಲಿ 26 ಮಂದಿ ಬಿಜೆಪಿಯವರು ಆಯ್ಕೆಯಾದರು. ಆದರೆ ಇವರಾರು ಒಂದೇ ಒಂದು ದಿನವು ಕರ್ನಾಟಕ, ಕನ್ನಡಿಗರ ಸಮಸ್ಯೆಯ ಕರಿತು ಬಾಯಿ ಬಿಡಲಿಲ್ಲ. ಶಿವಮೊಗ್ಗದಿಂದ ಗೆದ್ದಿದ್ದ ರಾಘವೇಂದ್ರ ಕರ್ನಾಟಕದ ಬಗ್ಗೆ ಒಂದು ದಿನವು ಮಾತನಾಡಲಿಲ್ಲ. ಇದು ರಾಜ್ಯಕ್ಕೆ ಮಾಡಿದ ದೊಡ್ಡ ಅನ್ಯಾಯ.
ತೆರಿಗೆ ಹಂಚಿಕೆ, 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ಹಣ ಕೊಡಲಿಲ್ಲ, ಭದ್ರಾ ಮೇಲ್ದೆಂಡೆ ಯೋಜನೆಗೆ 5300 ಕೋಟಿ ರೂ. ಕೊಡುವುದಾಗಿ ಬಜೆಟ್ನಲ್ಲಿ ಘೋಷಿದ್ದರೂ ಕೊಡಲಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದೆ ಎಂದು ಸೆಪ್ಟೆಂಬರ್ ತಿಂಗಳಲ್ಲಿ ಮನವಿ ನೀಡಿದ್ದೆವು. ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಿ ವರದಿ ನೀಡಿದೆ. ಏಳು ತಿಂಗಳು ಕಳೆದರೂ ಕೇಂದ್ರ ಸರ್ಕಾರ ಒಂದು ರುಪಾಯಿಯನ್ನು ಬಿಡುಗಡೆ ಮಾಡಲಿಲ್ಲ. ನೀರು, ಮೇವು, ರೈತರಿಗೆ ಪರಿಹಾರಕ್ಕೆ ಎಲ್ಲ ಸಂಪೂನ್ಮೂಲದಿಂದ ಪ್ರಯತ್ನ ಮಾಡಿದ್ದೆವು.
ಎನ್ಡಿಆರ್ಎಫ್ನಿಂದ 18,172 ಕೋಟಿ ರೂ. ಕಡುವಂತೆ ನಿಯಮಾನುಸಾರ ಕೇಳಿದೆವು. ನಾವು ಭಿಕ್ಷೆ ಕೇಳಿದ್ದಲ್ಲ. ಅನಿವಾರ್ಯ ಕಾರಣಕ್ಕೆ ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದೆವು. ಈಗ ಕೇಂದ್ರ 3,154 ಕೋಟಿ ರೂ. ಬಿಡುಗಡೆ ಮಾಡಿದೆ. ಇದೆ ಕಾರಣಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಪುನಃ ವಾದ ಮಾಡಿದ್ದೇವೆ. ಕೇಂದ್ರದ ತಂಡ ಶಿಫಾರಸಿನ ವರದಿಯನ್ನು ಕೋರ್ಟ್ ಮುಂದಿಡುವಂತೆ ಸೂಚಿಸಿದೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ, ದ್ವೇಷದ ರಾಜಕಾರಣ ಮಾಡಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ, ಪ್ರಜ್ವಲ್ ರೇವಣ್ಣ ವಿಡಿಯೋ ಕುರಿತು ಸ್ಪೋಟಕ ಹೇಳಿಕೆ, ಏನಂದ್ರು?
ಚುನಾವಣೆ ಬಂದಾಗ ಮೋದಿ ಅವರು ಬಹಳ ಪ್ರೀತಿ ತೋರಿಸುತ್ತಾರೆ. ಪ್ರವಾಹ, ಬರಗಾಲ ಬಂದಾಗ ರಾಜ್ಯದ ಜನರ ಕಷ್ಟ, ಸುಖ ಕೇಳುವ ಪ್ರಯತ್ನ ಮಾಡಲಿಲ್ಲ. ಅಧಿಕಾರಕ್ಕೆ ಬಂದು ಹತ್ತು ವರ್ಷದಲ್ಲಿ ಕೊಟ್ಟ ಮಾತು ಈಡೇರಿಸಲಿಲ್ಲ. 2014ರಲ್ಲಿ ಹೇಳಿದ್ದನ್ನು ನೆನಪಿಸಿಕೊಳ್ಳಬೇಕು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200