ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 MAY 2023
SHIMOGA : ಮುಖ್ಯಮಂತ್ರಿ ಕುರಿತ ಗೊಂದಲಕ್ಕೆ ತೆರೆ ಬಿದ್ದಿದೆ. ಸಿದ್ದರಾಮಯ್ಯ ಅವರು ರಾಜ್ಯದ ನೂತನ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಸಚಿವಾಕಾಂಕ್ಷಿಗಳ ಕಣ್ಣು ಈಗ ಹೈಕಮಾಂಡ್‌ನತ್ತ ತಿರುಗಿದೆ. ಶಿವಮೊಗ್ಗ ಜಿಲ್ಲೆಯ ಮೂವರು ಶಾಸಕರ ಪೈಕಿ ಯಾರಿಗೆ ಸಚಿವ (Minister) ಸ್ಥಾನ ಒಲಿಯಲಿದೆ ಎಂಬ ಕುತೂಹಲವು ಮೊಳಕೆಯೊಡೆದಿದೆ.
ಯಾರಾಗಬಹುದು ಮಿನಿಸ್ಟರ್?
ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಭದ್ರಾವತಿಯಲ್ಲಿ ಬಿ.ಕೆ.ಸಂಗಮೇಶ್ವರ್, ಸೊರಬದಲ್ಲಿ ಮಧು ಬಂಗಾರಪ್ಪ, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಶಾಸಕರಾಗಿದ್ದಾರೆ. ಈ ಮೂವರ ಪೈಕಿ ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬುದು ಸದ್ಯದ ಕುತೂಹಲ.
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ
ಸಂಗಮೇಶ್ವರ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಇವರು ಮೂರು ಬಾರಿ ಗೆದ್ದಾಗಲು ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಸಂಗಮೇಶ್ವರ ಅವರು ಮೊದಲ ಬಾರಿ ಶಾಸಕರಾದಾಗ ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟವಿತ್ತು. ಎರಡನೆ ಬಾರಿ ಬಿಜೆಪಿ ಸರ್ಕಾರವಿತ್ತು. ಮೂರನೇ ಬಾರಿ ಆರಂಭದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟ ಬಳಿಕ ಬಿಜೆಪಿ ಸರ್ಕಾರ ರಚನೆಯಾಯಿತು. ಹಾಗಾಗಿ ಮೂರು ಬಾರಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರು.
ಇನ್ನು, ಈ ಬಾರಿ ಸಂಗಮೇಶ್ವರ ಅವರು ಭದ್ರಾವತಿಯಲ್ಲಿ ಗೆದ್ದರೆ ಸಚಿವರಾಗುತ್ತಾರೆ ಎಂದು ಪ್ರಚಾರದ ವೇಳೆ ಕಾಂಗ್ರೆಸ್ ಮುಖಂಡರು ಭರವಸೆ ನೀಡಿದ್ದರು. ಹಾಗಾಗಿ ಈ ಬಾರಿ ಸಂಗಮೇಶ್ವರ ಅವರು ಸಚಿವರಾಗುವ ಸಾದ್ಯತೆ ಇದೆ ಎಂಬುದು ಬೆಂಬಲಿಗರ ಲೆಕ್ಕಾಚಾರ.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ
ಬೇಳೂರು ಗೋಪಾಲಕೃಷ್ಣ ಅವರು ಮೂರು ಬಾರಿ ಶಾಸಕರಾಗಿ ಅನುಭವ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗೋಪಾಲಕೃಷ್ಣ ಅವರಿಗೂ ಹಿಡಿತವಿದೆ. ಮತ ಎಣಿಕೆ ಮುಗಿಯುತ್ತಿದ್ದಂತೆ ಮೊದಲ ಪ್ರತಿಕ್ರಿಯೆ ನೀಡುವಾಗ, ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳ ಮುಂದ ಹೇಳಿದ್ದರು. ಬೇಳೂರು ಗೋಪಾಲಕೃಷ್ಣ ಅವರ ಬೆಂಬಲಿಗರು ಕೂಡ ಅವರು ಸಚಿವರಾಗಬೇಕು (Minister) ಎಂಬ ಬಯಕೆಯಲ್ಲಿದಾರೆ.
ಸೊರಬ ಶಾಸಕ ಮಧು ಬಂಗಾರಪ್ಪ
ಮಧು ಬಂಗಾರಪ್ಪ ಎರಡನೆ ಬಾರಿ ಶಾಸಕರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗ ಎಂಬ ಕಾರಣಕ್ಕೆ ಅವರಿಗೆ ಪಕ್ಷದಲ್ಲಿ ಅವಕಾಶಗಳು ಹೆಚ್ಚು. ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರು. ಹಿಂದುಳಿದ ವರ್ಗಗಳಲ್ಲಿ ಯಾರನ್ನೆಲ್ಲ ಸಚಿವರನ್ನಾಗಿ ಮಾಡಬಹುದು ಎಂಬ ಲೆಕ್ಕಾಚಾರ ಆರಂಭವಾಗುತ್ತಿದ್ದಂತೆ ಮಧು ಬಂಗಾರಪ್ಪ ಅವರ ಹೆಸರು ಮುಂಚೂಣಿಗೆ ಬರಲಿದೆ. ಹಾಗಾಗಿ ಮಧು ಬಂಗಾರಪ್ಪ ಅವರಿಗೇ ಸಚಿವ (Minister) ಸ್ಥಾನ ಒಲಿಯಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ – ಕಳೆದ ವಾರ ಕೂಲ್ ಕೂಲ್ ವಾತಾವರಣ, ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಹೆಚ್ಚಾಯ್ತು ತಾಪಮಾನ, ಇವತ್ತು ಎಷ್ಟಿದೆ ಉಷ್ಣಾಂಶ?
ಮೂವರು ಕಾಂಗ್ರೆಸ್ ಶಾಸಕರ ಪೈಕಿ ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬುದು ಕುತೂಹಲವಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422