SHIVAMOGGA LIVE NEWS | 2 OCTOBER 2023
SHIMOGA : ರಾಗಿಗುಡ್ಡಕ್ಕೆ ಸೀಮಿತವಾಗಿ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು (Prohibitory) ಮಹಾನಗರ ಪಾಲಿಕೆ ವ್ಯಾಪ್ತಿಗೆ ವಿಸ್ತರಣೆ ಮಾಡಲಾಗಿದೆ. ಶಿವಮೊಗ್ಗ ನಗರದಾದ್ಯಂತ ಸಿಆರ್ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದಾರೆ.
ಇಡೀ ನಗರಕ್ಕೆ ನಿಷೇಧಾಜ್ಞೆ ವಿಸ್ತರಿಸಿದ್ದೇಕೆ?
ಶಿವಮೊಗ್ಗ ನಗರದ ಇತರೆ ಪ್ರದೇಶದಲ್ಲಿಯು ಕಿಡಿಗೇಡಿಗಳು ಗಲಭೆ ಉಂಟು ಮಾಡುವ ಸಂಭವ ಇದೆ. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿತ್ತು. ಈ ಹಿನ್ನೆಲೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (Prohibitory) ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ರಾತ್ರಿ 1 ಗಂಟೆಯಿಂದಲೆ ನಿಷೇಧಾಜ್ಞೆ ಜಾರಿಯಲ್ಲಿದೆ.
144 ಸೆಕ್ಷನ್ ಸಂದರ್ಭ ಏನಿರುತ್ತೆ? ಏನಿರಲ್ಲ?
ನಿಷೇಧಾಜ್ಞೆ ಸಂದರ್ಭ ಐದು ಜನರಿಗಿಂತಲು ಹೆಚ್ಚು ಜನರು ಗುಂಪುಗೂಡುವುದು ಮತ್ತು ಓಡಾಡುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಯಾವುದೆ ಮೆರವಣಿಗೆ, ಪ್ರತಿಭಟನೆ, ಸಭೆ, ಸಮಾರಂಭಗಳನ್ನು ನಡೆಸುವಂತಿಲ್ಲ.
ಇದನ್ನೂ ಓದಿ – ರಾಗಿಗುಡ್ಡದಲ್ಲಿ ಕಲ್ಲು ತೂರಿ ಅಡಗಿ ಕುಳಿತಿದ್ದವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು
ಘೋಷಣೆಗಳನ್ನು ಕೂಗುವುದು, ಪ್ರಚೋದನಕಾರಿ ಹೇಳಿಕೆ ನೀಡುವುದು, ಪ್ರಚೋದನಕಾರಿ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ ಕಟ್ಟುವುದನ್ನು ನಿಷೇಧಿಸಲಾಗಿದೆ. ಮಾರಕಾಸ್ತ್ರ, ಸ್ಪೋಟಕ ಹೊಂದುವುದು, ಅವುಗಳನ್ನು ಹಿಡಿದು ಓಡಾಡುವುದನ್ನು ಕೂಡ ನಿಷೇಧಿಸಲಾಗಿದೆ.
ಇದನ್ನೂ ಓದಿ – ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರೀ ಪ್ಲಾನ್ ಘಟನೆ, KA 35, KA 19, UP ನೋಂದಣಿ ವಾಹನಗಳು ಎಲ್ಲಿ?
ಈ ಹಿಂದೆ ಅನುಮತಿ ಪಡೆದಿರುವ ಕಾರ್ಯಕ್ರಮಗಳನ್ನು ಮಾತ್ರ ನಡೆಸಲು ಅನುಮತಿ ಇದೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ವ್ಯಾಪಾರ, ವಹಿವಾಟು ನಡೆಸಬಹುದೆ?
ನಿಷೇಧಾಜ್ಞೆ ಸಂದರ್ಭ ವ್ಯಾಪಾರ, ವಹಿವಾಟು ನಡೆಸಲು ಯಾವುದೆ ತೊಂದರೆ ಇಲ್ಲ. ಈಗಾಗಲೆ ನಗರದಾದ್ಯಂತ ಅಂಗಡಿ ಮುಂಗಟ್ಟು ತೆರೆದಿದ್ದು ವ್ಯಾಪಾರ ನಡೆಯುತ್ತಿದೆ. ಶಿವಮೊಗ್ಗ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸದ್ಯ ನಗರ ಶಾಂತವಾಗಿದೆ.