ಶಿವಮೊಗ್ಗ ಲೈವ್.ಕಾಂ | SHIMOGA | 14 ಫೆಬ್ರವರಿ 2020

ನೂತನ ಮೇಯರ್, ಉಪಮೇಯರ್ ಆಯ್ಕೆ ಬಳಿಕ ಶಿವಮೊಗ್ಗ ಮಹಾನಗರ ಪಾಲಿಕೆಯ ಮೊದಲ ಸಾಮಾನ್ಯ ಸಭೆ ಇವತ್ತು ನಡೆಯಿತು. ಸ್ಲಂ ನಿವಾಸಿಗಳಿಗೆ ಮನೆ ಕಟ್ಟಿಸಿಕೊಡುವ ವಿಚಾರವಾಗಿ ಸಭೆಯಲ್ಲಿ ಭಾರಿ ಗದ್ದಲ ಏರ್ಪಟಿತ್ತು.
ಇತ್ತೀಚೆಗೆ, ಸ್ಲಂ ನಿವಾಸಿಗಳಿಗೆ ಮನೆ ಕಟ್ಟಿಕೊಡುವಲ್ಲಿ ವಿಳಂಬ ಮಾಡಿದ್ದನ್ನು ಪ್ರಶ್ನಿಸಲು ಬಂದ ವಿರೋಧ ಪಕ್ಷದ ಕಾರ್ಪೊರೇಟರ್’ಗಳು ಮತ್ತು ಸ್ಲಂ ನಿವಾಸಿಗಳನ್ನು ಬಂಧಿಸಲಾಗಿತ್ತು. ಇದನ್ನು ಸಭೆಯಲ್ಲಿ ಪ್ರಶ್ನಿಸಲಾಯಿತು. ಈ ವೇಳೆ ಸಭೆಯಲ್ಲಿ ಭಾರಿ ಗೊಂದಲ, ಗದ್ದಲ ಏರ್ಪಟಿತು.

ಪಾಲಿಕೆ ಯಾವುದೋ ಪಕ್ಷದ್ದಲ್ಲ, ಸಚಿವರದ್ದು ಅಲ್ಲ
ಸಭೆ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ ಅವರು, ಸ್ಲಂ ನಿವಾಸಿಗಳಿಗೆ ಮನೆ ಕಟ್ಟಿಕೊಡುವಲ್ಲಿ ವಿಳಂಬ ಮಾಡಿದ್ದನ್ನು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯೆ ಯಮುನಾ ರಂಗೇಗೌಡ ಅವರು, ಇತ್ತೀಚೆಗೆ ನ್ಯಾಯ ಕೇಳಲು ಬಂದಿದ್ದ ಸ್ಲಂ ನಿವಾಸಿಗಳು ಮತ್ತು ಪಾಲಿಕೆಯ ವಿರೋಧ ಪಕ್ಷದ ನಾಯಕರನ್ನು ಪೊಲೀಸರು ಬಂಧಿಸಿದ್ದನ್ನು ಪ್ರಶ್ನಿಸಿದರು. ಸಚಿವರ ಭೇಟಿಯ ಹಿನ್ನೆಲೆ ಎಲ್ಲರನ್ನು ಬಂಧಿಸಲಾಗಿದೆ ಅಂತಾ ಹೇಳಲಾಗಿತ್ತು. ಪಾಲಿಕೆ ಯಾವುದೋ ಪಕ್ಷದ ಅಥವಾ ಸಚಿವರಿಗೆ ಸೇರಿದ್ದಲ್ಲ ಎಂದರು.
ಈ ವೇಳೆ ಬಿಜೆಪಿ ಸದಸ್ಯರು ಮಧ್ಯಪ್ರವೇಶಿಸಲು ಯತ್ನಿಸಿದರು. ಇದರಿಂದ ಸಭೆಯಲ್ಲಿ ಗೊಂದಲ ನಿರ್ಮಾಣವಾಯಿತು. ಕೊನೆಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಜ್ಯೋತಿ ಅವರಿಂದ ಸ್ಪಷ್ಟನೆ ಕೇಳಲಾಯಿತು. ಬ್ಯಾಂಕ್ ಸಾಲ ಸಿಗದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅವರು ಸಭೆಗೆ ತಿಳಿಸಿದರು. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ಕೊನೆಗೆ ಜೆಡಿಎಸ್ ಕಾರ್ಪೊರೇಟರ್ ನಾಗರಾಜ ಕಂಕಾರಿ ಅವರು, ಲೀಡ್ ಬ್ಯಾಂಕ್ ಮ್ಯಾನೇಜರ್ ಅವರ ಜೊತೆಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಮತ್ತು ಮೇಯರ್ ಒಮ್ಮೆ ಸಮಾಲೋಚನೆ ನಡೆಸಿ, ಸಮಸ್ಯೆ ಬಗೆಹರಿಸುವಂತೆ ಸಲಹೆ ನೀಡಿದರು.
ಬಳಿಕ ಮಾತನಾಡಿದ ಮೇಯರ್ ಸುವರ್ಣ ಶಂಕರ್, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಈ ಕುರಿತು ಚರ್ಚೆ ನಡೆಸಿ, ಬಡವರಿಗೆ ಮನೆ ಒದಗಿಸಲಾಗುತ್ತದೆ ಎಂದರು .
ಅರ್ಧ ಗಂಟೆ ತಡವಾದ ಸಭೆ
ಸಾಮಾನ್ಯ ಸಭೆಯು ಮೊದಲೆ ನಿಗದಿಯಾಗಿದ್ದ ಸಮಯಕ್ಕಿಂತಲೂ ಅರ್ಧ ಗಂಟೆ ತಡವಾಗಿ ಆರಂಭವಾಯಿತು. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರನ್ನು ಕೆರಳಿಸಿತು. ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸಿದರು.

ಉಪ ಮೇಯರ್ ಚೇರು ಖಾಲಿ
ಸಭೆ ಅರ್ಧ ಗಂಟೆ ತಡವಾಗಿ ಆರಂಭವಾಯಿತು. ಆದರೆ ಉಪ ಮೇಯರ್ ಸುರೇಖಾ ಮುರಳೀಧರ್ ಇಲ್ಲದೆಯೇ ಸಭೆ ನಡೆಯಿತು. ಸಭೆ ಆರಂಭವಾಗಿ ಒಂದು ಗಂಟೆಯ ಬಳಿಕ ಉಪ ಮೇಯರ್ ಸಭೆಗೆ ಆಗಮಿಸಿದರು.
ಪೇಜಾವರ ಶ್ರೀ, ಮಾದಪ್ಪ, ಯೋಧರಿಗೆ ನಮನ
ಇತ್ತೀಚೆಗಷ್ಟೇ ನಿಧನರಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಾದಪ್ಪ ಅವರಿಗೆ ನಮನ ಸಲ್ಲಿಸಲಾಯಿತು. ಅಲ್ಲದೆ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ವೀರ ಮರಣವನ್ನಪ್ಪಿದ ಯೋಧರನ್ನು ಸ್ಮರಿಸಿಕೊಳ್ಳಲಾಯಿತು. ಇವರ ಸ್ಮರಣಾರ್ಥ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ಮಾಜಿ ಮೇಯರ್’ಗೆ ಎರಡನೇ ಲೈನ್
ನೂತನ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಹಿನ್ನೆಲೆ, ಮಾಜಿ ಮೇಯರ್ ಮತ್ತು ಉಪ ಮೇಯರ್’ಗೆ ಸಭೆಯಲ್ಲಿ ಸೀಟ್ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಮೇಯರ್ ಲತಾ ಗಣೇಶ್ ಅವರಿಗೆ ಸಭಾಂಗಣ ಎರಡನೇ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ಇನ್ನು, ಮಾಜಿ ಉಪ ಮೇಯರ್ ಚನ್ನಬಸಪ್ಪ ಅವರಿಗೆ ಮೊದಲ ಸಾಲಿನಲ್ಲೇ ಸೀಟ್ ವ್ಯವಸ್ಥೆ ಮಾಡಲಾಗಿತ್ತು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]