ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 ಏಪ್ರಿಲ್ 2022
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭದ್ರಾವತಿಗೆ ಭೇಟಿ ನೀಡಿದ್ದರು. ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಿದರು.
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯ ಪ್ರಮುಖರು ಪಾಲ್ಗೊಂಡಿದ್ದರು.
ಜಿಲ್ಲೆಯ ರಾಜಕಾರಣದಿಂದ ಅಪಮಾನ
ಇದೆ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕಾರಣದಿಂದ ಇಡೀ ರಾಜ್ಯಕ್ಕೆ ದೊಡ್ಡ ಅವಮಾನವಾಗಿದೆ. ಬಂಡವಾಳ ತೊಡಗಿಸಿ ಅಭಿವೃದ್ಧಿ ಮಾಡಲು ಇಲ್ಲಿಗೆ ಯಾರೂ ಬರುವುದಿಲ್ಲ. ಇಲ್ಲಿನ ಜನ ಅರಬ್ ದೇಶಗಳತ್ತ ತಿ ಉದ್ಯೋಗ ಅರಸಿ ಹೋಗಬೇಕಾದ ದಿನ ಬರಲಿದೆ. ಜಿಲ್ಲೆಯ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಗೆ ಒಂದಷ್ಟು ಅಭಿವೃದ್ಧಿ ಮಾಡಿದ್ದಾರೆ. ಇಲ್ಲ ಎಂದು ಹೇಳಲು ನಾನು ಸಿದ್ಧನಿಲ್ಲ. ಆದರೆ ಇಲ್ಲಿನ ಬಿಜೆಪಿ ರಾಜಕಾರಣಿಗಳು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ಬಂಡವಾಳ ತೊಡಗಿಸಲು ಯಾರೂ ಮುಂದೆ ಬರುವುದಿಲ್ಲ. ಉಡುಪಿ ಹಾಗೂ ಮಂಗಳೂರಿನ ಜನ ಇಂದಿಗೂ ವ್ಯಾಪಾರ, ವ್ಯವಹಾರ ನಡೆಸಿ ಬದುಕು ಕಟ್ಟಿಕೊಳ್ಳಲು ಬೇರೆ ರಾಜ್ಯ, ದೇಶಗಳ ಕಡೆಗೆ ಹೋಗುತ್ತಿದ್ದಾರೆ. ಇಂತಹ ಸ್ಥಿತಿಗೆ ಶಿವಮೊಗ್ಗ ಜಿಲ್ಲೆಯೂ ತಲುಪಲಿದೆ. ಬರೀ ಕಿತ್ತಾಟ, ಜಗಳಗಳು ನಡೆಯುವ ಊರಿನಲ್ಲಿ ವಿಮಾನ ನಿಲ್ದಾಣ ಯಾಕೆ ಬೇಕು ಎಂದು ಪ್ರಶ್ನಿಸಿದರು.
‘ಭ್ರಷ್ಟಾಚಾರದಿಂದ ಕೂಡಿದ ಆಡಳಿತ’
ಉಡುಪಿ ಮತ್ತು ಮಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲ ಹೊಸ ಹೊಸ ವಿಚಾರಗಳನ್ನು ತಂದು ಇಡೀ ರಾಜ್ಯಕ್ಕೆ ಬಿಜೆಪಿ ನಾಯಕರು ಕಪ್ಪುಚುಕ್ಕಿ ಇಟ್ಟಿದ್ದಾರೆ. ಬಿಜೆಪಿ ಆಡಳಿತ ಭ್ರಷ್ಟಾಚಾರದಿಂದ ಕೂಡಿದೆ ಎಂದು ಇಡೀ ದೇಶಕ್ಕೆ ಗೊತ್ತಿದೆ. ಬಿಜೆಪಿ ನಾಯಕರಲ್ಲೇ ಭಿನ್ನಾಭಿಪ್ರಾಯಗಳು ಮೂಡುತ್ತಿವೆ. ಮುಂದೆ ಉತ್ತಮ ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರ ಬರಲಿದೆ. ಒಳ್ಳೆಯ ದಿನಗಳು ಎದುರಾಗಲಿವೆ ಎಂದರು.
‘ಎಲ್ಲರೂ ಶ್ರೀಮಂತರಿಲ್ಲ’
ಇಲ್ಲಿ ಎಲ್ಲರೂ ಶ್ರೀಮಂತರಿಲ್ಲ. ಬಡವರು, ರೈತರು, ಕಾರ್ಮಿಕರು ಇದ್ದಾರೆ. ರೈತರ ಆದಾಯ ದ್ವಿಗುಣವಾಗಲಿಲ್ಲ. ಬಿಜೆಪಿ ಸರ್ಕಾರದಿಂದ ಉದ್ಯೋಗ ಸೃಷ್ಟಿಯಾಗಿಲ್ಲ. ಜಿಲ್ಲೆಯಲ್ಲಿ ಬದಲಾವಣೆ ತರದಿದ್ದಲ್ಲಿ ಯಾರೂ ವ್ಯಾಪಾರ ವಹಿವಾಟು ನಡೆಸಲು ಮುಂದೆ ಬರುವುದಿಲ್ಲ. ಬಿಜೆಪಿ ಕಾರ್ಯಕರ್ತರ ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಂತೆ ಕಾಣುತ್ತದೆ. ಅವರಿಗೆ ವೋಟು, ಸೀಟು ಬೇಕಷ್ಟೇ. ಆದರೆ ನಮ್ಮದು ಹಾಗಲ್ಲ. ನಮಗೆ ಶಿವಮೊಗ್ಗ ಜಿಲ್ಲೆ ಹಾಗೂ ಈ ರಾಜ್ಯದ ಅಭಿವೃದ್ಧಿ ಮುಖ್ಯ. ಜಿಲ್ಲೆಯ ವಿಚಾರ ಎಲ್ಲವೂ ತಿಳಿದಿದ್ದು ಉಳಿಸಿಕೊಳ್ಳುವ ಪ್ರಯತ್ನ ನಾವು ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಸೂರಜ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಪ್ರಮುಖರಾದ ಆರ್. ಎಂ.ಮಂಜುನಾಥ ಗೌಡ, ಚಂದ್ರೇಗೌಡ, ಷಡಾಕ್ಷರಿ, ಪ್ರಪುಲ್ಲಾ ಮಧುಕರ್, ಅಗಾ ಸುಲ್ತಾನ್, ಆರ್.ವಿ.ವೆಂಕಟೇಶ್, ಯೋಗೀಶ್ ಇತರರಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422