ಶಿವಮೊಗ್ಗ: ಬಡಾವಣೆಯೊಂದರ ಅಡ್ಡರಸ್ತೆಗೆ ವ್ಯಕ್ತಿಯೊಬ್ಬರು ಇಂದು ಬೆಳಿಗ್ಗೆ ದಿಢೀರ್ ತಂತಿ ಬೇಲಿ ಹಾಕಿಸಿದ್ದಾರೆ. ಈ ಬೆಳವಣಿಗೆಯಿಂದ ಸುಮಾರು 15 ಮನೆಗಳ ನಿವಾಸಿಗಳು ದಿಗ್ಬಂದನಕ್ಕೆ ಒಳಗಾದಂತಾಗಿದೆ.
ನಗರದ ಎನ್.ಆರ್.ಪುರ ರಸ್ತೆ ಪಕ್ಕದ ಜ್ಯೋತಿ ನಗರ ಬಡಾವಣೆಯ ಅಡ್ಡರಸ್ತೆಗೆ ತಿಪ್ಪೇಸ್ವಾಮಿ ಎಂಬುವವರು ಇಂದು ಬೇಲಿ ಹಾಕಿಸಿದ್ದಾರೆ. ರಸ್ತೆಯ ಎರಡು ಬದಿಗೆ ಕಲ್ಲು ಕಂಬಗಳನ್ನು ನೆಟ್ಟು, ತಂತಿ ಬೇಲಿ ಹಾಕಲಾಗಿದೆ. ಅಲ್ಲದೆ ‘ಈ ಜಾಗ ಖಾಸಗಿ ಮಾಲೀಕತ್ವದಲ್ಲಿದ್ದು, ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ’ ಎಂದು ಬೋರ್ಡ್ ಕೂಡ ಹಾಕಲಾಗಿದೆ.

ಬೇಲಿ ಹಾಕಲು ಕಾರಣವೇನು?
ಈ ಸಂಬಂಧ ಮಾತನಾಡಿದ ತಿಪ್ಪೇಸ್ವಾಮಿ, “ಈ ನಿವೇಶನ ಸಾವಿತ್ರಮ್ಮ ಎಂಬುವವರಿಗೆ ಸೇರಿದೆ. ಅವರು ತನಗೆ ಜನರಲ್ ಪವರ್ ಆಫ್ ಅಟಾರ್ನಿ (GPA) ನೀಡಿದ್ದಾರೆ. ಈ ಮೊದಲು ತಮ್ಮ ನಿವೇಶನವನ್ನು ಪಾರ್ಕ್ ಜಾಗ ಎಂದು ಜ್ಯೋತಿ ನಗರ ನಿವಾಸಿಗಳ ಸಂಘದ ವತಿಯಿಂದ ಪಾಲಿಕೆಗೆ ದೂರು ನೀಡಿದ್ದರು. ಆಗ ಶಾಸಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಆಯುಕ್ತರು ತಮ್ಮ ನಿವೇಶನದ ಖಾತೆ ವಜಾಗೊಳಿಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆಯಲ್ಲಿದೆ. ಕಳೆದ 8 ತಿಂಗಳಿನಿಂದ ಪಾಲಿಕೆ ಪರವಾಗಿ ವಕೀಲರು, ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಿಲ್ಲ” ಎಂದರು.
“ಇಲ್ಲಿನ ನಿವಾಸಿಗಳು ನಿವೇಶನದ ಜಾಗವನ್ನು ರಸ್ತೆ ಮಾಡಿಕೊಂಡಿದ್ದಾರೆ. ಈ 13 ಗುಂಟೆ ಜಾಗ ಖಾಸಗಿ ಸ್ವತ್ತು. ಸೂಡಾದಿಂದ ಪ್ಲಾನ್ ಅನುಮೋದನೆ ಆಗಿಲ್ಲ. ನಮ್ಮ ಜಾಗಕ್ಕೆ ನಾವು ಬೇಲಿ ಹಾಕಿಕೊಂಡು ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಜಾಗದ ಮಲೀಕರಾದ ಸಾವಿತ್ರಮ್ಮ ಅವರ ಕುಟುಂಬದವರೆಲ್ಲ ಬೆಂಗಳೂರು, ಮೈಸೂರಿನಲ್ಲಿದ್ದಾರೆ. ಅವರೆಲ್ಲ ಇಲ್ಲಿಗೆ ಬಂದು ಓಡಾಡಲು ಸಾದ್ಯವಾಗುವುದಿಲ್ಲ. ಆದ್ದರಿಂದ ತಮಗೆ ಜಿಪಿಎ ಮಾಡಿಕೊಟ್ಟಿದ್ದಾರೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ನಿವಾಸಿಗಳು ಹೇಳುವುದೇನು?
ಜ್ಯೋತಿ ನಗರ ನಿವಾಸಿಗಳ ಸಂಘದ ದಿನೇಶ್ ಅವರು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿ, “ಬಡಾವಣೆ ನಿರ್ಮಾಣವಾಗಿ 26 ವರ್ಷವಾಗಿದೆ. ಸೂಡಾದಿಂದಲು ಬಡಾವಣೆಗೆ ಅನುಮೋದನೆ ದೊರೆತಿದೆ. ಪ್ಲಾನ್ ಪ್ರಕಾರ ರಸ್ತೆ, ಪಾರ್ಕ್ ಎಲ್ಲವು ಇದೆ. ಈಗ ರಸ್ತೆಗೆ ಬೇಲಿ ಹಾಕಿದ್ದಾರೆ. ಇದರಿಂದ ನಿವಾಸಿಗಳಿಗೆ ತೀವ್ರ ತೊಂದರೆ ಆಗಲಿದೆ. ಜಿಲ್ಲಾಧಿಕಾರಿ, ಸೂಡಾ ಆಯುಕ್ತರು, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
ನಿವಾಸಿಗಳಿಗೆ ದಿಗ್ಬಂದನದ ಭೀತಿ
ಜ್ಯೋತಿ ನಗರದ ಬಡಾವಣೆಯ ಎಡ ಭಾಗದಲ್ಲಿರುವ ಮೊದಲ ಅಡ್ಡರಸ್ತೆ ಡೆಡ್ ಎಂಡ್ ಆಗಿದೆ. ಇಲ್ಲಿ ಸುಮಾರು 15 ಮನೆಗಳಿವೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳಿದ್ದಾರೆ. ಆಯುರ್ವೇದ ಚಿಕಿತ್ಸಾಲಯವು ಇಲ್ಲಿದೆ. ಈಗ ಬೇಲಿ ಹಾಕಿರುವುದರಿಂದ ಇಲ್ಲಿಯ ನಿವಾಸಿಗಳು ದಿಗ್ಬಂದನಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸ್ಥಳೀಯರ ಓಡಾಟಕ್ಕೆ ವ್ಯವಸ್ಥೆ ಮಾಡಿಕೊಡಬೇಕಿದೆ.