ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |BHADRAVATHI NEWS | 6 ಸೆಪ್ಟೆಂಬರ್ 2021
23 ತಿಂಗಳು ಬಾಹ್ಯ ಪ್ರಪಂಚದಿಂದ ದೂರ ಉಳಿದು ತಪಸ್ಸು ನಡೆಸುತ್ತಿದ್ದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ತಪೋನುಷ್ಠಾನ ಪೂರ್ಣಗೊಂಡಿದೆ. ಇದೆ ಮೊದಲ ಭಾರಿಗೆ ಭಕ್ತರಿಗೆ ದರ್ಶನ ನೀಡಿದ್ದಾರೆ. ಶ್ರೀಗಳನ್ನು ಕಣ್ತುಂಬಿಕೊಂಡು, ಪೂಜೆ ಸಲ್ಲಿಸಲು ದೂರದೂರುಗಳಿಂದ ಭಕ್ತರು ಆಗಮಿಸಿದ್ದರು.
ಭದ್ರಾವತಿ ತಾಲೂಕು ಗೋಣಿಬೀಡು ಗ್ರಾಮದ ಶೀಲ ಸಂಪಾದನಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ತಪೋನುಷ್ಠಾನದ ಸಮಾರೋಪ, ದಾಸೋಹ ಮಂದಿರ ಉದ್ಘಟನಾ ಸಮಾರಂಭ ನಡೆಯಿತು.
ಸಮಾಜದಲ್ಲಿ ಬಹಿರ್ಮುಖ ಜಾಸ್ತಿಯಾಗಿದೆ
ಶ್ರೀಗಳ ತಪೋನುಷ್ಠಾನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ತುಮಕೂರು ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಅಂತರ್ಮುಖ ಮತ್ತು ಬಹಿರ್ಮುಖ ಎಂಬ ಎರಡು ಮುಖಗಳಿರುತ್ತವೆ. ಇಂದು ಸಮಾಜದಲ್ಲಿ ಬಹಿರ್ಮುಖ ಜಾಸ್ತಿಯಾಗಿದ್ದು, ವಿಜೃಂಭಣೆಯನ್ನು ಕಾಣುತ್ತಿದ್ದೇವೆ. ಇದರಿಂದ ಅಂತರ್ಮುಖ ದುರ್ಬಲಗೊಳ್ಳುತ್ತಿದೆ. ಅಂತರ್ಮುಖದಲ್ಲಿಯೂ ಮನುಷ್ಯ ಹೆಚ್ಚಿನ ಶ್ರೀಮಂತಿಕೆಯನ್ನು ಹೊಂದಬಹುದು ಎಂಬುದು ಶ್ರೀಗಳ ತಪಸ್ಸಿನ ಒಂದು ಸಂದೇಶವಾಗಿದೆ ಎಂದರು.
ಭಕ್ತರಿಗಾಗಿ ದೇಹ ದಂಡಿಸಿಕೊಂಡು ಅನುಷ್ಠಾನ
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ವೈಜ್ಞಾನಿಕ ಯುಗದಲ್ಲಿ ಶಾಂತಿ, ನೆಮ್ಮದಿ ಕಳೆದುಕೊಂಡಿದ್ದೇವೆ. ಮನಃಶಾಂತಿ ಪುನರ್ ಭರಿಸುವ ಶಕ್ತಿ ಮಠಗಳಿಗೆ ಇದೆ. 23 ತಿಂಗಳು ತಪಸ್ಸು ಕೈಗೊಂಡು ಶ್ರೀಗಳು ತಮ್ಮ ದೇಹವನ್ನು ದಂಡಿಸಿಕೊಂಡಿದ್ದಾರೆ. ಇದೆ ರೀತಿ ಸಾಕಷ್ಟು ಭಾರಿ ಅನುಷ್ಠಾನ ಕೈಗೊಂಡಿದ್ದಾರೆ ಎಂದರು.
ಹೇಗಿರುತ್ತೆ ಸುದೀರ್ಘ ಅನುಷ್ಠಾನ?
ಗೋಣಿಬೀಡಿನ ಶೀಲ ಸಂಪಾದನಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ತಪೋನುಷ್ಠಾನ ದೇಶಾದ್ಯಂತ ಪ್ರಖ್ಯಾತಿ ಪಡೆದಿದೆ. ಮಠದ 19ನೇ ಗುರುಗಳಾಗಿರುವ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರಿಗೆ ಒಮ್ಮೆ ಋಷಿ ಮುನಿಯಂತಿದ್ದ ಸ್ವಾಮೀಜಿಯೊಬ್ಬರು ಪ್ರತ್ಯಕ್ಷರಾಗಿ ತಪೋನುಷ್ಠಾನ ಕೈಗೊಳ್ಳುವಂತೆ ಸೂಚಿಸಿದ್ದರು. ಮಠದ ಪಕ್ಕದ ತಿಪ್ಪೆಯ ಅಡಿಯಲ್ಲಿ ಯೋಗ ಮಂದಿರವಿದ್ದು, ಅಲ್ಲಿ ಅನುಷ್ಠಾನ ಕೈಗೊಳ್ಳುವಂತೆ ಋಷಿ ಮುನಿ ಹೇಳಿದ್ದರು. ಆ ಋಷಿ ಮುನಿ ಈ ಮಠದ ಹಿಂದಿನ ಗುರುಗಳಾಗಿದ್ದ ಶಿವೈಕ್ಯ ಶ್ರೀ ಸಿದ್ಧವೀರ ಮಹಾಸ್ವಾಮೀಜಿ ಎಂದು ನಂಬಲಾಗಿದೆ.
ಅದರಂತೆ ತಿಪ್ಪೆಯನ್ನು ತೆಗೆಸಿ ಶೋಧಿಸಿದಾಗ ನೆಲಮಾಳಿಗೆಯಲ್ಲಿ ಯೋಗ ಮಂದಿರದ ಕುರುಹು ಕಂಡು ಬಂದಿತ್ತು. ಇದನ್ನು ಸ್ವಚ್ಛಗೊಳಿಸಿ, ಅದೇ ಯೋಗ ಮಂದಿರದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ತಪೋನುಷ್ಠಾನ ಮಾಡುತ್ತಿದ್ದಾರೆ. ವರ್ಷಾನುಗಟ್ಟಲೆ ಅನುಷ್ಠಾನ ಕೈಗೊಳ್ಳುವ ಶ್ರೀಗಳು ಈ ಅವಧಿಯಲ್ಲಿ ನೆಲಮಾಳಿಗೆಯಿಂದ ಹೊರ ಬರುವುದಿಲ್ಲ. ಸೂರ್ಯನ ಕಿರಣ ಅವರ ಮೈ ಸೋಕದಂತೆ ನೋಡಿಕೊಳ್ಳುತ್ತಾರೆ. ಅನ್ನಾಹಾರ ಸೇವಿಸುವುದಿಲ್ಲ. ಸ್ವಲ್ಪ ತರಕಾರಿ, ಒಣ ಹಣ್ಣುಗಳನ್ನು ಮಾತ್ರ ಸೇವಿಸುತ್ತಾರೆ.
ಈ ವೇಳೆ ಶ್ರೀಗಳು ಒಬ್ಬಿಬ್ಬರು ಶಿಷ್ಯರ ಹೊರತು ಬೇರಾವುದೆ ಭಕ್ತರನ್ನು ಭೇಟಿಯಾಗುವುದಿಲ್ಲ. ಭಕ್ತರು ಪತ್ರದ ಮೂಲಕ ತಮ್ಮ ನೋವು, ಬೇಡಿಕೆ ಹೇಳಿಕೊಳ್ಳಬಹುದು. ಶ್ರೀಗಳು ಭಕ್ತರ ಬೇಡಿಕೆ ಈಡೇರಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ ಅವೆಲ್ಲವು ಈಡೇರಲಿದೆ ಎಂಬ ನಂಬಿಕೆ ಇದೆ. ಈ ಬಾರಿ ಶ್ರೀಗಳು 23 ತಿಂಗಳು ಅನುಷ್ಠಾನ ಕೈಗೊಂಡಿದ್ದಾರೆ. ಈ ಹಿಂದೆ ಮೂರು ವರ್ಷ ತಪೋನುಷ್ಠಾನ ಮಾಡಿದ್ದರು.
ಶ್ರೀಗಳ ಅನುಗ್ರಹ ಸಂದೇಶ
ಸಮಾರೋಪದಲ್ಲಿ ಶಿವಮೊಗ್ಗದ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು ಗೋಣಿಬೀಡು ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಅನುಗ್ರಹ ಸಂದೇಶ ಓದಿದರು. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಗುರುಮೂರ್ತಿ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಸ್ವಾಮೀಜಿ, ಡಾ. ಬಸವ ಜಯಚಂದ್ರ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ, ಎಸ್.ದಯಾನಂದ್, ಭದ್ರಾವತಿ ಶಾಸಕ ಸಂಗಮೇಶ್ವರ್, ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್, ಡಾ. ಹಿರೇಮಠ್, ಕುವೆಂಪು ವಿವಿ ಕುಲಪತಿ ಪ್ರೊ. ವೀರಭದ್ರಪ್ಪ ಸೇರಿದಂತೆ ಹಲವರು ಇದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422