SHIVAMOGGA LIVE NEWS, 9 FEBRUARY 2025
ಹೊಸನಗರ : ಊರ ಮಗನನ್ನು ಕಳೆದುಕೊಂಡು ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ. ವಾಯುಸೇನೆ ಅಧಿಕಾರಿ (Officer) ಜಿ.ಎಸ್.ಮಂಜುನಾಥ್ ಅಕಾಲಿಕ ಸಾವು, ಇಡೀ ಹೊಸನಗರವನ್ನು ಮೌನಕ್ಕೆ ದೂಡಿದೆ. ಮಾರಿಹಬ್ಬದ ಸಂಭ್ರಮದಲ್ಲಿದ್ದ ಊರು ಈಗ ಸೂತಕ ಹೊದ್ದು ಕೂತಿದೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ತರಬೇತಿ ವೇಳೆ ಪ್ಯಾರಚೂಟ್ ತೆರೆಯದೆ ಆಗಸದಿಂದ ಬಿದ್ದು ವಾಯುಸೇನೆ ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ್ ಶುಕ್ರವಾರ ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರ ಈಗ ಹುಟ್ಟೂರು ಹೊಸನಗರದ ಸಂಕೂರು ಗ್ರಾಮಕ್ಕೆ ತರಲಾಗುತ್ತಿದೆ.
ಈ ಹಿಂದೆ ವಾಯುಸೇನೆ ಹೆಲಿಕಾಪ್ಟರ್‌ನಿಂದ ಜಿಗಿದಿದ್ದ ಜಿ.ಎಸ್.ಮಂಜುನಾಥ್ ಅವರ ಫೋಟೊ.
ಹಾದಿ ಉದ್ದಕ್ಕೂ ಪೋಸ್ಟರ್‌ಗಳು
ಊರ ಮಗನನ್ನು ಕಳೆದುಕೊಂಡು ಇಡೀ ಗ್ರಾಮ ಸೂತಕದಲ್ಲಿದೆ. ಜಿ.ಎಸ್.ಮಂಜುನಾಥ್ ಅವರಿಗೆ ಗೌರವ ಸಲ್ಲಿಸಲು ಊರಿನ ತುಂಬಾ ಅವರ ಪೋಸ್ಟರ್‌ಗಳನ್ನು ಹಾಕಲಾಗಿದೆ. ಗ್ರಾಮದ ಶಾಲೆ, ಗ್ರಾಮ ಪಂಚಾಯಿತಿ ಕಚೇರಿ, ರಸ್ತೆ, ಹೊಸನಗರದ ಬೀದಿಗಳಲ್ಲಿ ಜಿ.ಎಸ್.ಮಂಜುನಾಥ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪೋಸ್ಟರ್‌ಗಳನ್ನು ಜನರು ಸ್ವಯಂ ಪ್ರೇರಿತವಾಗಿ ಹಾಕಿದ್ದಾರೆ.
ಸಂಕೂರು ಮತ್ತು ವಿವಿಧೆಡೆ ಜಿ.ಎಸ್.ಮಂಜುನಾಥ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪೋಸ್ಟರ್‌ಗಳು. ಶಿವಮೊಗ್ಗಕ್ಕೆ ಆಗಮಿಸಿದ್ದ ಮಂಜುನಾಥ್ ಅವರ ಪಾರ್ಥೀವ ಶರೀರ.
ಊರ ಮಗನನ್ನು ನೆನೆದು ಕಣ್ಣೀರಾದ ಜನ
ಓದಿದ್ದು, ಬೆಳೆದಿದ್ದೆಲ್ಲ ಇಲ್ಲಿಯೆ. ಎರಡ್ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಸೊಸೆ ಅಸ್ಸಾಂ ಮೂಲದವರು. ಅಲ್ಲಿಯೇ ಕುಟುಂಬದ ಜೊತೆಗೆ ಇದ್ದರು.
– ಸುರೇಶ್, ಮಂಜುನಾಥ್ ಅವರ ತಂದೆ
ಇಲ್ಲಿಗೆ ಬಂದಾಗಲೆಲ್ಲ ವಾಯುಸೇನೆಯ ಅನುಭವದ ಕುರಿತು ತಿಳಿಸುತ್ತಿದ್ದರು. ವಿಡಿಯೋಗಳನ್ನು ತೋರಿಸುತ್ತಿದ್ದರು. ಸ್ನೇಹಿತರು, ನೆಂಟರು ಬಂದಾಗಲೆಲ್ಲ ವಾಯುಸೇನೆಯ ಕೆಲಸದ ಅನುಭವವನ್ನು ಕೇಳುತ್ತಿದ್ದರು. ಎಲ್ಲರೊಂದಿಗು ಖುಷಿಯಿಂದ ಮಾತನಾಡುತ್ತಿದ್ದ.
– ಯುವರಾಜ್, ಮಂಜುನಾಥ್ ಸಹೋದರ
ನಮ್ಮೂರಿನಲ್ಲಿ ನಾಲ್ಕೈದು ಮಂದಿ ಸೇನೆಗೆ ಸೇರಿದ್ದಾರೆ. ವರ್ಷಕ್ಕೆ ಒಮ್ಮೆ ಕುಟುಂಬದ ಜೊತೆಗೆ ಬರುತ್ತಿದ್ದರು. ಎಲ್ಲರ ಜೊತೆಗೆ ಹೊಂದಾಣಿಕೆಯಿಂದ ಇರುತ್ತಿದ್ದರು. ತರಬೇತಿಯ ಕುರಿತು ವಿಡಿಯೋಗಳನ್ನು ತೋರಿಸುತ್ತಿದ್ದರು. ಈಚೆಗೆ ಬಂದಾಗ ಗದ್ದೆ ನಾಟಿ ಮಾಡುವುದನ್ನೆಲ್ಲ ವಿಡಿಯೋ ಮಾಡಿಕೊಂಡಿದ್ದರು. ಮಂಜುನಾಥ್ ಇನ್ನೊಂದೆರಡು ವರ್ಷದಲ್ಲಿ ಸೇನೆಯಿಂದ ನಿವೃತ್ತರಾಗುತ್ತಿದ್ದರು.
– ಹರೀಶ್, ಮಂಜುನಾಥ್ ಸಂಬಂಧಿ
ಹೆಲಿಕಾಪ್ಟರ್‌ನಿಂದ ಜಿಗಿತದ ವಿಡಿಯೋ
ಈ ಹಿಂದೆ ತರಬೇತಿ ಸಂದರ್ಭ ವಾರಂಟ್ ಆಫೀಸರ್ ಮಂಜುನಾಥ್ ಅವರು ಹೆಲಿಕಾಪ್ಟರ್‌ನಿಂದ ಜಿಗಿದ ವಿಡಿಯೋಗಳನ್ನು ಸಹೋದರ ಯುವರಾಜ್ ಅವರಿಗೆ ಕಳುಹಿಸಿದ್ದರು.
ಸಾವಿನ ಕುರಿತು ತನಿಖೆಗೆ ಒತ್ತಾಯ
ಇನ್ನು, ಪ್ಯಾರಾಚೂಟ್ ತೆರೆಯದೆ ಆಗಸದಿಂದ ಬಿದ್ದು ಮಂಜುನಾಥ್ ಸಾವನ್ನಪ್ಪಿದ್ದಾರೆ. ಇದರ ಕುರಿತು ಸಮಗ್ರ ತನಿಖೆಯಾಗಬೇಕು ಎಂಬುದು ಕುಟುಂಬದವರು, ಸಂಬಂಧಿ ಮತ್ತು ಕುಟುಂಬದವರ ಆಗ್ರಹವಾಗಿದೆ.
ಹನ್ನೆರಡು ಜನ ವಿಮಾನದಿಂದ ಹಾರಿದ್ದಾರೆ. ಹನ್ನೊಂದು ಜನಕ್ಕೆ ಮಂಜುನಾಥ್ ಅವರು ತರಬೇತಿ ನೀಡುತ್ತಿದ್ದರು. ಆ ಹನ್ನೊಂದು ಮಂದಿಯ ಪ್ಯಾರಾಚೂಟ್ ತೆರೆದುಕೊಂಡು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ಇವರ ಪ್ಯಾರಾಚೂಟ್ ಮಾತ್ರ ತೆರೆದುಕೊಳ್ಳದಿರುವುದು ಅನುಮಾನ ಮೂಡಿಸಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ತನಿಖೆಯಾಗಬೇಕು.
– ಹರೀಶ್, ಮಂಜುನಾಥ್ ಸಂಬಂಧಿ
ಜಿ.ಎಸ್.ಮಂಜುನಾಥ್ ಅವರ ಅಂತ್ಯಕ್ರಿಯೆ ಇಂದು ಹುಟ್ಟೂರು ಸಂಕೂರು ಗ್ರಾಮದಲ್ಲಿ ಸಕಲ ಮಿಲಿಟರಿ ಗೌರವದೊಂದಿಗೆ ನೆರವೇರಲಿದೆ.
ಇತ್ತೀಚೆಗೆ ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನಕ್ಕೆ ಕುಟುಂಬದೊಂದಿಗೆ ತೆರಳಿದ್ದ ವಾಯುಸೇನೆ ಅಧಿಕಾರಿ ಜಿ.ಎಸ್.ಮಂಜುನಾಥ್.
ಜಿ.ಎಸ್.ಮಂಜುನಾಥ್ ಅವರು ಈ ಹಿಂದೆ ಹೆಲಿಕಾಪ್ಟರ್‌ನಿಂದ ಜಿಗಿದ ವಿಡಿಯೋಗಳು, ಅವರ ಫೋಟೊಗಳನ್ನು ಸ್ನೇಹಿತರು, ಕುಟುಂಬದವರಿಗೆ ತೋರಿಸುತ್ತಿರುವ ಸಹೋದರ ಯುವರಾಜ್.
ಇದನ್ನೂ ಓದಿ » ಶಿವಮೊಗ್ಗದಲ್ಲಿ ವಾಯುಸೇನೆ ಅಧಿಕಾರಿ ಮಂಜುನಾಥ್ ಪಾರ್ಥೀವ ಶರೀರ, ಕಣ್ಣೀರಾದ ಪತ್ನಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200