ಶಿವಮೊಗ್ಗ ಲೈವ್.ಕಾಂ | SHIMOGA | 14 ನವೆಂಬರ್ 2019
ಹೊಸನಗರ ಕುಂಬತ್ತಿ ಗ್ರಾಮದಲ್ಲಿ ಸುಮಾರು 50 ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಬೆಳಗ್ಗೆಯಿಂದಲೆ ರಸ್ತೆಗಿಳಿದ ಗ್ರಾಮಸ್ಥರು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಲಾರಿಗಳ ಓಡಾಟದಿಂದಾಗಿ ಕುಂಬತ್ತಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಹಾಗಾಗಿ ಈ ರಸ್ತೆಯಲ್ಲಿ ಓಡಾಡುವುದೆ ಕಷ್ಟವಾಗಿದೆ. ಇತ್ತೀಚೆಗಷ್ಟೆ ಗುಂಡಿಯಿಂದಾಗಿ ರಸ್ತೆಯಲ್ಲಿ ಬಿದ್ದು ಗ್ರಾಮಸ್ಥರೊಬ್ಬರ ಕಾಲಿಗೆ ಗಂಭೀರ ಗಾಯವಾಗಿದೆ. ಅಲ್ಲದೆ ಈ ಭಾಗದ ಮಕ್ಕಳು ಶಾಲೆಗೆ ತೆರಳುವುದೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸುತ್ತಿದ್ದಾರೆ.
ಕುಂಬತ್ತಿ ಗ್ರಾಮದಲ್ಲಿ ಲಾರಿಗಳೇಕೆ ಓಡಾಡುತ್ತವೆ?
ಹೊಸನಗರ ತಾಲೂಕಿನ ಕುಂಬತ್ತಿ ಗ್ರಾಮದಲ್ಲಿ ಪ್ರತಿದಿನ ನೂರಕ್ಕು ಹೆಚ್ಚು ಲಾರಿಗಳು ಸಂಚರಿಸುತ್ತಿವೆ. ಇಲ್ಲಿನ ಸುತ್ತಾ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಗಣಿಗೆ ತೆರಳುವ ಲಾರಿಗಳು ಕುಂಬತ್ತಿ ಮಾರ್ಗವಾಗಿ ಶಿವಮೊಗ್ಗ – ಕುಂದಾಪುರ ರಸ್ತೆಗೆ ತಲುಪುತ್ತವೆ.
ಗುಂಡಿ, ಧೂಳು ಕೇಳೋರಿಲ್ಲ ಜನರ ಗೋಳು
ಟಿಪ್ಪರ್ ಲಾರಿಗಳ ಸಂಚಾರದಿಂದ ಕುಂಬತ್ತಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಈ ಗುಂಡಿಗಳಿಂದಾಗಿ ರಸ್ತೆಯಲ್ಲಿ ಸಂಚರಿಸುವುದೆ ಕಷ್ಟಕರವಾಗಿದೆ. ಅಲ್ಲದೆ ಭಾರಿ ಧೂಳಿನಿಂದಾಗಿ ಗ್ರಾಮಸ್ಥರಿಗೆ ಉಸಿರಾಟದ ಸಮಸ್ಯೆ ಸೇರಿದಂತೆ ವಿವಿಧ ಖಾಯಿಲೆಗಳು ಬರುವಂತಾಗಿದೆ ಎಂದು ಆರೋಪಿಸಿದ್ದಾರೆ.
ಪರ್ಯಾಯ ಮಾರ್ಗ ಮೊದಲೆ ಹಾಳು
ಕುಂಬತ್ತಿ ರಸ್ತೆಯಲ್ಲಿ ತೆರಳುವ ಮೊದಲು ಮತ್ತೊಂದು ರಸ್ತೆಯಲ್ಲಿ ಲಾರಿಗಳು ಸಂಚರಿಸುತ್ತಿದ್ದವು. ಮೊದಲು ಸುತ್ತಾ ಗ್ರಾಮದಿಂದ ಜಯನಗರ ಮಾರ್ಗವಾಗಿ ಟಿಪ್ಪರ್ ಲಾರಿಗಳು ಸಂಚರಿಸುತ್ತಿದ್ದವು. ಇಲ್ಲಿ ಬ್ರಿಟೀಷ್ ಕಾಲದ ಸೇತುವೆ ಇದೆ. ಲಾರಿಗಳ ಓಡಾಟದಿಂದಾಗಿ ರಸ್ತೆ ಹಾಳಾಗಿದ್ದು, ಸೇತುವೆಯು ದುರಸ್ಥಿ ಹಂತಕ್ಕೆ ಬಂದಿದೆ. ಇದೇ ಕಾರಣಕ್ಕೆ ಆ ಭಾಗದಲ್ಲಿ ಜನರು ಪ್ರತಿಭಟನೆ ನಡೆಸಿದರು. ಹಾಗಾಗಿ ಕುಂಬತ್ತಿ ಮೂಲಕ ಲಾರಿಗಳ ಸಂಚಾರ ಆರಂಭವಾಯಿತು.
ರಸ್ತೆ ಕಂಡು ಶಾಸಕರೆ ದಂಗು
ಇತ್ತೀಚೆಗಷ್ಟೇ ಶಾಸಕ ಆರಗ ಜ್ಞಾನೇಂದ್ರ ಅವರು ಕುಂಬತ್ತಿ ಗ್ರಾಮಕ್ಕೆ ಭೇಟಿ ನೀಡಿ, ರಸ್ತೆ ಪರಿಶೀಲನೆ ನಡೆಸಿದರು. ಈ ವೇಳೆ ಗುಂಡಿಗಳನ್ನು ಕಂಡು ಶಾಸಕರು ದಂಗಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕುಂಬತ್ತಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿತ್ತು. ಆದರೆ ಗಣಿಗಾರಿಕೆ ನಡೆಸಲು ಅರಣ್ಯದಲ್ಲಿ ಬೆಲೆಬಾಳುವ ಮರಗಳನ್ನು ಕಡಿಯಲಾಗಿತ್ತು. ಇದರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ, ಸಾಗರ ಉಪ ವಿಭಾಗಾಧಿಕಾರಿ ನೇತೃತ್ವದ ತಂಡ ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿದ್ದಾರೆ. ಈ ನಡುವೆ ಹಾಳಾಗಿರುವ ರಸ್ತೆ ವಿರುದ್ಧ ಜನರು ಮತ್ತೊಮ್ಮೆ ಬೀದಿಗಿಳಿದಿದ್ದಾರೆ. ರಸ್ತೆ ರಿಪೇರಿ ಮಾಡಿಸಿಕೊಡುವವರೆಗೆ ಲಾರಿಗಳನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]