ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 19 ಆಗಸ್ಟ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
‘ಶರಾವತಿ ನದಿಗಾಗಿ’ ಹೋರಾಟದ ಮಾದರಿಯಲ್ಲೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಹೋರಾಟ ಸಮಿತಿಯು ಅಸ್ಥಿತ್ವಕ್ಕೆ ಬಂದಿದೆ.
ಕಲ್ಲೊಡ್ಡು ಜಲಾಶಯ ನಿರ್ಮಾಣ ವಿರೋಧಿಸಿ ಹೋರಾಟಕ್ಕೆ ರೂಪುರೇಷೆ ಸಿದ್ಧವಾಗುತ್ತಿದೆ. ಕಲ್ಲೊಡ್ಡು ಯೋಜನೆ ವಿರೋಧ ಸಮಿತಿ ಅಸ್ಥಿತ್ವಕ್ಕೆ ಬಂದಿದ್ದು ಗೌರವಾಧ್ಯಕ್ಷರಾಗಿ ಬರೂರು ವೀರೇಶ್ ಗೌಡ, ಅಧ್ಯಕ್ಷರಾಗಿ ಟಾಕಪ್ಪ ಕುಂದೂರು, ಕಾರ್ಯದರ್ಶಿಯಾಗಿ ಮಂಜುನಾಥ್ ಮಡಿವಾಳನಕಟ್ಟೆ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಹೇಗಿರುತ್ತೆ ಯೋಜನೆ ವಿರುದ್ಧದ ಹೋರಾಟ?
ಶರಾವತಿ ನದಿಗಾಗಿ ಹೋರಾಟದ ಮಾದರಿಯಲ್ಲೇ ಕಲ್ಲೊಡ್ಡು ಯೋಜನೆ ವಿರೋಧಿ ಹೋರಾಟ ನಡೆಸಲು ಯೋಜಿಸಲಾಗಿದೆ. ‘ಶರಾವತಿ ನದಿಗಾಗಿ ಹೋರಾಟ ಸಮಿತಿಯವರು ಮತ್ತು ಹೋರಾಟಗಾರರನ್ನು ಭೇಟಿಯಾಗಿ ಬೆಂಬಲ ಕೇಳುತ್ತೇವೆ. ಯೋಜನೆ ವ್ಯಾಪ್ತಿಯ ಹಳ್ಳಿಗಳು ಮಾತ್ರವಲ್ಲದೆ, ಇಡೀ ತಾಲೂಕಿನಲ್ಲಿ ಜನಜಗೃತಿ ಮೂಡಿಸುತ್ತೇವೆ’ ಎಂದು ಹೋರಾಟ ಸಮಿತಿ ಅಧ್ಯಕ್ಷ ಟಾಕಪ್ಪ ಕುಂದೂರು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.
ಏನಿದು ಕಲ್ಲೊಡ್ಡು ಯೋಜನೆ? ವಿರೋಧ ಯಾಕೆ?
ಸಾಗರ ತಾಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದೂರು ಸಮೀಪ ಕಲ್ಲೊಡ್ಡು ಜಲಾಶಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಕುಂದೂರು, ಕೊರ್ಲಿಕೊಪ್ಪ, ಮಿಡಿನಾಗರ ಭಾಗದ ತಗ್ಗು ಪ್ರದೇಶದಲ್ಲಿ ನೀರಿನ ಹರಿವಿದೆ. ಗುತ್ತಳ್ಳಿ ಭಾಗದಲ್ಲಿ ಕೆರೆಯಿಂದ ಹೊರಡುವ ಈ ಹರಿವು ಮುಂದೆ ಅಂಬ್ಲಿಗೊಳ ಜಲಾಶಯದ ಚಾನಲ್ ನೀರನ್ನು ಸೇರುತ್ತದೆ. ಈ ಭಾಗದ ತಗ್ಗು ಪ್ರದೇಶದಲ್ಲಿ ಜಲಾಶಯ ನಿರ್ಮಾಣ ಮಾಡುವುದು ಸರ್ಕಾರದ ಯೋಚನೆ.
ಸಾಗರ ಮತ್ತು ಶಿಕಾರಿಪುರ ಗಡಿ ಭಾಗದಲ್ಲಿ ಕಲ್ಲೊಡ್ಡು ಜಲಾಶಯ ನಿರ್ಮಿಸಲು ಯೋಜಿಸಲಾಗಿದೆ. ಇದರಿಂದ ಶಿಕಾರಿಪುರ ತಾಲೂಕಿನ ನೀರಿನ ಸಮಸ್ಯೆ ನೀಗಲಿದೆ. ಆದರೆ, ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಸಾಗರ ತಾಲೂಕಿನ ಬಹುಭಾಗ ಜಲಾವೃತವಾಗಿದೆ. ಅಲ್ಲದೆ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಈಗ ಕಲ್ಲೊಡ್ಡು ಯೋಜನೆ ಆರಂಭವಾದರೆ ಮತ್ತಷ್ಟು ಮನೆ, ಜಮೀನು, ಅರಣ್ಯ ಮುಳುಗಡೆಯಾಗಲಿದೆ. ಜನರು ಸಂತ್ರಸ್ತರಾಗಲಿದ್ದಾರೆ. ಹಾಗಾಗಿ ಈ ಭಾಗದಲ್ಲಿ ವಿರೋಧದ ಕೂಗು ಎದ್ದಿದೆ.
ಹೋರಾಟ ಸಮಿತಿ ಅಸ್ಥಿತ್ವಕ್ಕೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲೂ ಯೋಜನೆಯ ಅನಾನುಕೂಲದ ಕುರಿತು ಮಾಹಿತಿ ಹಂಚಲಾಗುತ್ತಿದೆ. ಶರಾವತಿ ನದಿಗಾಗಿ ಹೋರಾಟದ ಮಾದರಿಯಲ್ಲೇ ತೀವ್ರ ಸ್ವರೂಪದ ಹೋರಾಟ ನಡೆಸಲು ಈ ಭಾಗದ ಜನರು ತೀರ್ಮಾನಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]