ಶಿವಮೊಗ್ಗ ಲೈವ್.ಕಾಂ | ANANDAPURAM NEWS | 23 ನವೆಂಬರ್ 2021
ಪ್ರಾಂಶುಪಾಲರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಸತಿ ಶಾಲೆಯ ಮಕ್ಕಳು ಬೆಳ್ಳಂಬೆಳಗ್ಗೆ ಪ್ರತಿಭಟನೆ ಆರಂಭಿಸಿದ್ದಾರೆ.
ಸಾಗರ ತಾಲೂಕು ಆನಂದಪುರದ ಯಡೇಹಳ್ಳಿಯ ಮೊರಾರ್ಜಿ ವಸತಿ ಶಾಲೆಯ ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಿನ ಉಪಹಾರ ತ್ಯಜಿಸಿ, ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನ್ಯಾಯ ಕೊಡಿಸುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವೇನು?
‘ತರಗತಿಯಲ್ಲಿ ಮಾತನಾಡುವ ವಿಚಾರಗಳನ್ನು ತಿಳಿದುಕೊಂಡ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ರೂಮಿನಲ್ಲಿ ಕೂಡಿ ಹಾಕಿಕೊಂಡು ಹೊಡೆಯುತ್ತಾರೆ.’
‘ಊಟದ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬೆಳಗ್ಗೆ ತಿಂಡಿಯಲ್ಲಿ ಉಪ್ಪು ಕಡಿಮೆಯಾಗಿದೆ ಎಂದರೆ ರಾತ್ರಿ ಊಟಕ್ಕೆ ರಾಶಿ ಉಪ್ಪು ಸುರಿಯುತ್ತಾರೆ. ರೊಚ್ಚು ಇಟ್ಟುಕೊಂಡು ಅಡುಗೆ ಮಾಡುತ್ತಾರೆ. ಊಟದಲ್ಲಿ ಹುಳಗಳು ಹಾಗೆ ಇರುತ್ತವೆ. ಬಡಿಸುವ ಅಣ್ಣಂದಿರು ನಮ್ಮ ಮುಖ ನೋಡಿ ಬೇಸರದಲ್ಲಿ ಬಡಿಸುತ್ತಾರೆ.’
‘ಜಿಲ್ಲಾಧಿಕಾರಿ, ಶಾಸಕರು ಎಲ್ಲರೂ ಇಲ್ಲಿಗೆ ಬರಬೇಕು. ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕು.’ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
‘ಕುಡಿದು ಬಂದು ಹೊಡೆದರು’
‘ರಾತ್ರಿ 10.30ಕ್ಕೆ ಮಲಗುವಂತೆ ತಿಳಿಸಿದ್ದರು. ಪ್ರಾಂಶುಪಾಲರು ಮತ್ತು ಎಫ್’ಡಿಎ ಸರ್ ಕುಡಿದು ಬಂದು ನನಗೆ ಒದ್ದರು. ನನ್ನ ಕೈ ಊದಿಕೊಂಡಿದೆ. ಕಾಲಿಂದ ಒದಿದ್ದಾರೆ’ ಎಂದು ವಿದ್ಯಾರ್ಥಿಯೊಬ್ಬ ಆರೋಪಿಸುತ್ತಾನೆ.
‘ನಮಗೆ ಈ ಪ್ರಾಂಶುಪಾಲರು ಬೇಡ’
ಬೆಳಗ್ಗೆಯಿಂದ ಪ್ರತಿಭಟನೆ ಆರಂಭಿಸಿರುವ ವಿದ್ಯಾರ್ಥಿಗಳು, ನಮಗೆ ಈ ಪ್ರಾಂಶುಪಾಲರು ಬೇಡ, ನ್ಯಾಯ ಕೊಡಿಸಿ ಎಂದು ಭೀತ್ತಿ ಪತ್ರ ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರಿಗೆ ವಿದ್ಯಾರ್ಥಿಗಳು ತಮ್ಮ ಮೇಲಿನ ಹಲ್ಲೆ ಕುರಿತು ತಿಳಿಸಿ ಅಳಲು ತೋಡಿಕೊಳ್ಳುತ್ತಿದ್ದಾರೆ.
‘ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ’
ಇನ್ನು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲರು, ತಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
‘ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಕಳೆದ ತಿಂಗಳು ಒಬ್ಬ ಸೆಕ್ಯೂರಿಟಿ ಬಂದಿದ್ದ. ಬಾಯ್ಸ್ ಹಾಸ್ಟೆಲ್’ನಲ್ಲಿ ಮಲಗುತ್ತಿದ್ದ. ಆತ ಮಕ್ಕಳಿಗೆ ಮೊಬೈಲ್ ಫೋನ್ ಕೊಡುತ್ತಿದ್ದ. ಇದನ್ನು ತಡೆದು, ಮಕ್ಕಳು ಓದಿಗೆ ಗಮನ ಕೊಡುವಂತೆ ಮಾಡಿದ್ದೆ. ಆತನನ್ನು ಕೆಲಸದಿಂದ ತೆಗೆದು ಹಾಕಿದೆವು. ಇದಕ್ಕೆ ನಮ್ಮ ಕೆಲವು ಶಿಕ್ಷಕರು ಕೆಲವರು ಕುಮ್ಮಕ್ಕು ಕೊಟ್ಟು ಈ ರೀತಿ ಮಾಡುತ್ತಿದ್ದಾರೆ. ಶೈಕ್ಷಣಿಕ ಕರ್ತವ್ಯ ಮಾಡಿ ಎಂದಿದ್ದಕ್ಕೆ ಮಕ್ಕಳನ್ನು ಎತ್ತಿಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ’ ಎಂದು ಪ್ರಾಂಶುಪಾಲರು ಆರೋಪಿಸಿದ್ದಾರೆ.
ಶಾಸಕ ಹರತಾಳು ಹಾಲಪ್ಪ ಅವರು ಮಕ್ಕಳ ಹೋರಾಟದ ಕುರಿತು ಮಾಹಿತಿ ಪಡೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200