ಸಾಗರ: ಸಿಗಂದೂರು ಸೇತುವೆ (Sigandur Bridge) ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇವತ್ತು ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಸೇತುವೆ ಮೇಲೆ ವಾಹನದಲ್ಲಿ ಸಂಚರಿಸಿದರು.
ಇದೇ ವೇಳೆ ಸಂಸದ ರಾಘವೇಂದ್ರ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದರು. ಇಂಜಿನಿಯರ್‌ಗಳು, ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು. ಜೂ.15ರ ಒಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು. (ಮತ್ತಷ್ಟು ಸುದ್ದಿ ಈ ಜಾಹೀರಾತುಗಳ ಕೆಳಗಿದೆ)


ಸಂಸದ ರಾಘವೇಂದ್ರ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್
ಕಳಸವಳ್ಳಿ – ಅಂಬಾರಗೋಡ್ಲು ಮಧ್ಯೆ ಸೇತುವೆ ಆಗಬೇಕು ಎಂಬುದು ಬಹು ವರ್ಷದ ಕನಸಾಗಿತ್ತು. ಸಂಜೆ ನಂತರ ಇಲ್ಲಿಂದ ಹೊರ ಪ್ರಪಂಚಕ್ಕೆ ಸಂಪರ್ಕ ಇರಲಿಲ್ಲ. ಅನೇಕ ವರ್ಷ ಹೋರಾಟ ನಡೆಸಿದ್ದರು.

ಹಾಗಾಗಿ ಗ್ರಾಮ ಪಂಚಾಯಿತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಯಿತು. ಸಾಗರ – ಮರಕುಟಿಕ ರಸ್ತೆಗೆ ಎನ್.ಹೆಚ್ 369 ಇ ಎಂದು ಘೋಷಿಸಲಾಯಿತು. ಯಡಿಯೂರಪ್ಪ ಅವರು ಪ್ರಯತ್ನಪಟ್ಟು ಕೇಂದ್ರದಿಂದ 550 ಕೋಟಿ ರೂ. ಹಣ ತರಿಸಿಕೊಟ್ಟಿದ್ದರು.

ಒಟ್ಟು 423 ಕೋಟಿ ರೂ. ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣವಾಗುತ್ತಿದೆ. ನಾಲ್ಕೂವರೆ ವರ್ಷ ಕಾಮಗಾರಿ ನಡೆಯಿತು. ಕಾಮಗಾರಿ ಪೂರ್ಣಗೊಳ್ಳಲು ಆಗಸ್ಟ್ ತಿಂಗಳವರೆಗೆ ಕಾಲವಕಾಶವಿದೆ. ಆದರೆ ಅದಕ್ಕು ಮುಂಚೆಯೇ ಈ ಮಳೆಗಾಲದಲ್ಲಿಯೇ ಸೇತುವೆ ಉದ್ಘಾಟನೆ ಆಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ.


ಪ್ರಧಾನಿ ನರೇಂದ್ರ ಮೋದಿ ಸಿಗಂದೂರು ಸೇತುವೆಯನ್ನು ಲೋಕಾರ್ಪಣೆ ಮಾಡಬೇಕು. ಈ ಸಂಬಂಧ ಭೂ ಸಾರಿಗೆ ಸಚಿವ ನಿತಿನ ಗಡ್ಕರಿ ಅವರಿಗೆ ಮನವಿ ಮಾಡಿದ್ದೆ. ಈ ಹಿನ್ನೆಲೆ ಕೇಂದ್ರದಿಂದ ರೀಜನಲ್ ಆಫೀಸರ್ ಶರ್ಮಾ ಎಂಬುವವರ ನೇತೃತ್ವದ ತಂಡ ಪರಿಶೀಲಿಸಿದರು. ಜೂ.15ರ ಒಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆದೇಶ ಬಂದಿದೆ.

ಸಿಗಂದೂರು ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ 900 ಕೋಟಿ ರೂ. ನಿಗದಿಪಡಿಸಲಾಗಿದೆ. ಇನ್ನು 15 ದಿನದೊಳಗೆ ಸಂಪರ್ಕ ರಸ್ತೆ ಸಂಬಂಧ ಯೋಜನೆ ಸಿದ್ಧವಾಗಲಿದೆ.

ಇವತ್ತು ನಾವೆಲ್ಲ ಸಿಗಂದೂರು ಸೇತುವೆ ಮೇಲೆ ವಾಹನಗಳಲ್ಲಿಯೇ ತೆರಳಿದೆವು. ಗುರುವಾರ ರಾಯರ ವಾರ. ಇದೇ ದಿನ ಅಧಿಕಾರಿಗಳು ಇಂತಹ ಅವಕಾಶ ಮಾಡಿಕೊಟ್ಟರು. ಸಿಗಂದೂರು ದೇವಿ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇವೆ.
– ಬಿ.ವೈ.ರಾಘವೇಂದ್ರ, ಸಂಸದ

ಕೇಂದ್ರ ಸರ್ಕಾರ ಈ ಭಾಗದಲ್ಲಿ ಹಲವು ಸೇತುವೆ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಸುತ್ತಾ ಸೇತುವೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 766 ಸಿ ಆಗಿ ಮೇಲ್ದರ್ಜೆಗೇರಿಸಿ ಒಂದು ಕಿ.ಮೀ ಹೊಸನಗರ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಮುಕ್ಕಾಲು ಕಿ.ಮೀ.ನ ಬೆಕ್ಕೋಡಿ ಸೇತುವೆ, ಹಾಲಪ್ಪ ಅವರ ಅವಧಿಯಲ್ಲಿ ಪಟಗುಪ್ಪ ಸೇತುವೆ, ಕಾಗೋಡು ತಿಮ್ಮಪ್ಪ ಅವರ ಶ್ರಮದಿಂದ ಹಸಿರುಮಕ್ಕಿ ಸೇತುವೆ ಸೇರಿದಂತೆ ನಾನಾ ಕಾಮಗಾರಿ ನಡೆಸಲಾಗಿದೆ. ಮಲೆನಾಡು ಮತ್ತು ಕರಾವಳಿ ಸಂಪರ್ಕಕ್ಕೆ ಅನುಕೂಲ ಮಾಡಲಾಗಿದೆ. ಅನೇಕ ಯಾತ್ರ ಸ್ಥಳಕ್ಕೆ ತೆರಳಲು ಅವಕಾಶವಾಗಲಿದೆ.

ಇದನ್ನೂ ಓದಿ » ಶಿವಮೊಗ್ಗದ ಫ್ರೀಡಂ ಪಾರ್ಕ್‌ಗೆ ಸಾರ್ವಜನಿಕ ಪ್ರವೇಶ ನಿರ್ಬಂಧ, ಯಾವ ಸಮಯದಲ್ಲಿ ನಿರ್ಬಂಧ? ಯಾಕೆ?


