SHIVAMOGGA LIVE NEWS | 27 AUGUST 2023
SAGARA : ಕರೂರು ಹೋಬಳಿಯಿಂದ ಜೋಗ, ಕಾರ್ಗಲ್‌ಗೆ ಸಂಪರ್ಕ ಕಲ್ಪಿಸುವ ಹಲ್ಕೆ – ಮುಪ್ಪಾನೆ ಲಾಂಚ್ (Muppane Launch) ಸೇವೆ ಸ್ಥಗಿತಗೊಂಡಿದೆ. ತಾಂತ್ರಿಕ ದೋಷದಿಂದಾಗಿ ಆ.25ರಿಂದ ಕಾರ್ಯಾಚರಣೆ ನಿಲ್ಲಿಸಿದೆ. ಇದರಿಂದ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಸಮಸ್ಯೆಯಾಗಿದೆ.
ಲಾಂಚ್‌ನ ಗೇರ್ ಬಾಕ್ಸ್ ಸೇರಿದಂತೆ ವಿವಿಧ ತಾಂತ್ರಿಕ ಸಮಸ್ಯೆಯಾಗಿದೆ. ಕೆಲವು ಬಿಡಿ ಭಾಗಗಳನ್ನು ರಿಪೇರಿಗೆ ಕಳುಹಿಸಲಾಗಿದೆ. ಇನ್ನು ನಾಲ್ಕೈದು ದಿನದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಕಡವು ನಿರೀಕ್ಷಕ ಧನೇಂದ್ರ ಕುಮಾರ್ ತಿಳಿಸಿದ್ದಾರೆ.
ನೀರು ಕಡಿಮೆಯಾಗಿ ನಿಂತಿತ್ತು
ಕಳೆದ ಬೇಸಿಗೆ ಹೊತ್ತಲ್ಲಿ ಶರಾವತಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿತ್ತು. ಆದ್ದರಿಂದ ಲಾಂಚ್ ಸೇವೆ ಸ್ಥಗಿತಗೊಂಡಿತ್ತು. ಇದರಿಂದ ಕರೂರು ಹೋಬಳಿಯ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಮುಪ್ಪಾನೆ ಮಾರ್ಗದಲ್ಲಿ (Muppane Launch) ಸಣ್ಣ ಲಾಂಚ್ ಇದೆ. ಕರೂರು ಹೋಬಳಿಯ ಹಲವು ಗ್ರಾಮಗಳಿಗೆ ಈ ಲಾಂಚ್ ಸಂಪರ್ಕ ಸೇತುವೆಯಾಗಿತ್ತು. ಈಗ ಲಾಂಚ್ ಸೇವೆ ಸ್ಥಗಿತವಾಗಿದ್ದು ಹೋಬಳಿಯ ಹಲವು ಗ್ರಾಮಗಳ ಜನರಿಗೆ ಸಂಕಷ್ಟ ತಂದೊಡ್ಡಿದೆ.
35 ಕಿ.ಮೀ ಬದಲು 72 ಕಿ.ಮೀ
ಕರೂರು ಹೋಬಳಿಯ ಒಳಗಿನ ಅನೇಕ ಗ್ರಾಮಗಳಿಗೆ ಮುಪ್ಪಾನೆ ಲಾಂಚ್ ಸಂಪರ್ಕ ಒದಗಿಸುತ್ತಿತ್ತು. 2017ರಲ್ಲಿ ಲಾಂಚ್ ಸೇವೆ ಆರಂಭವಾಗಿತ್ತು. ಮುಪ್ಪಾನೆ ಲಾಂಚ್ ಇಲ್ಲದೆ ಹೋದರೆ ಈ ಭಾಗದ ಗ್ರಾಮಸ್ಥರು ಹೋಬಳಿ ಕೇಂದ್ರ ತಲುಪಲು 72 ಕಿ.ಮೀ ಸಂಚರಿಸಬೇಕಾಗುತ್ತದೆ. ಲಾಂಚ್ ಮೂಲಕ ಶರಾವತಿ ನದಿ ದಾಟಿದರೆ ಕೇವಲ 35 ಕಿ.ಮೀ ಮೂಲಕ ತಲುಪಬಹುದಾಗಿದೆ.
ಪೊಲೀಸರು, ಪ್ರವಾಸಿಗರಿಗೂ ಅನುಕೂಲ
ತುರ್ತು ಸಂದರ್ಭದಲ್ಲಿ ಪೊಲೀಸರು, ವಿದ್ಯುತ್ ಇಲಾಖೆ ಸಿಬ್ಬಂದಿ ಕರೂರು ಹೋಬಳಿಯ ಗ್ರಾಮಗಳಿಗೆ ತಲುಪಲು ಲಾಂಚ್ ಬಳಕೆ ಮಾಡಿಕೊಳ್ಳುತ್ತಿದ್ದರು. ಶಿರಸಿ, ಸಿದ್ಧಾಪುರ ಮಾರ್ಗದಲ್ಲಿ ಓಡಾಡುವವರಿಗೂ ಲಾಂಚ್ ಅನುಕೂಲವಾಗಿತ್ತು. ಸಿಗಂದೂರು ಪ್ರವಾಸಿಗರು ಕೂಡ ಈ ಮಾರ್ಗದಲ್ಲಿ ಓಡಾಡುತ್ತಿದ್ದರು. ಮುಪ್ಪಾನೆ ಲಾಂಚ್ ಸ್ಥಗಿತಗೊಂಡಿರುವುದರಿಂದ ಜನರು ಸುತ್ತಿ ಬಳಸಿ ಓಡಾಡುವಂತಾಗಿದೆ.