ಶಿವಮೊಗ್ಗ: ಕಾರೊಂದು ಆಟೋಗೆ ಡಿಕ್ಕಿ ಹೊಡೆದಿದ್ದು, ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತ (Accident) ಎಸಗಿದ ಕಾರು ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಗಾಯಾಳು ಆಟೋ ಚಾಲಕನನ್ನು ಮೆಗ್ಗಾನ್ ಆಸ್ಪತ್ರೆಗೆ (Mcgann Hospital) ದಾಖಲಿಸಲಾಗಿದ್ದು, ಹಿಟ್ ಆಂಡ್ ರನ್ (Hit and Run Case) ಪ್ರಕರಣ ದಾಖಲಾಗಿದೆ.
ಸೋಮಿನಕೊಪ್ಪದ ನಿವಾಸಿ, ಆಟೋ ಚಾಲಕ ಅಬ್ದುಲ್ ಅಜೀಜ್ (52) ಗಾಯಗೊಂಡವರು. ಸಿದ್ಲಿಪುರ ಕೈಗಾರಿಕಾ ಪ್ರದೇಶದಿಂದ ಕಾರ್ಮಿಕರನ್ನು ಕರೆತರಲು ತಮ್ಮ ಪ್ಯಾಸೆಂಜರ್ ಆಟೋದಲ್ಲಿ (Passenger Auto) ಹೊರಟಿದ್ದರು. ಕಾರ್ಮಿಕರ ವಸತಿ ಗೃಹದ ಬಳಿ ತಲುಪಿದಾಗ ಮೂತ್ರ ವಿಸರ್ಜನೆಗಾಗಿ ರಸ್ತೆ ಬದಿಯಲ್ಲಿ ಆಟೋ ನಿಲ್ಲಿಸಿ ಕೆಳಗಿಳಿಯುತ್ತಿದ್ದರು. ಈ ವೇಳೆ ಎದುರುಗಡೆಯಿಂದ ಬಂದ ಬಿಳಿ ಬಣ್ಣದ ಕಾರು ಆಟೋದ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಬ್ದುಲ್ ಅಜೀಜ್ ಅವರ ತಲೆಯ ಹಿಂಭಾಗ, ಮುಖ ಹಾಗೂ ಬಲಗಾಲಿನ ಪಾದಕ್ಕೆ ಬಲವಾದ ಪೆಟ್ಟು ಬಿದ್ದಿದೆ ಎಂದು ಆರೋಪಿಸಲಾಗಿದೆ.

ಅಪಘಾತದ ನಂತರ ಕಾರು ಚಾಲಕ (Car Driver) ಸ್ಥಳದಲ್ಲಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

