ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | ELEPHANT | 09 ಮೇ 2022
ಹೊಲ, ಗದ್ದೆಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿದ್ದ ಆನೆಗಳು ಈಗ ಊರಿನ ಮುಖ್ಯ ರಸ್ತೆಯಲ್ಲಿ ಓಡಾಡಲು ಆರಂಭವಿಸಿವೆ. ಇದರಿಂದ ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ.
ಮೂರ್ನಾಲ್ಕು ದಿನದ ಹಿಂದೆ ಕಾಡಾನೆಯೊಂದು ಉಂಬ್ಳೆಬೈಲು ಮುಖ್ಯ ರಸ್ತೆಯಲ್ಲಿ ಸಂಚರಿಸಿದೆ. ಬೆಳಗಿನ ಹೊತ್ತಿನಲ್ಲೆ ಆನೆಯೊಂದು ಈ ರೀತಿ ಓಡಾಡಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.
ಆನೆ ಕಂಡು ಜನರಲ್ಲಿ ಢವಢವ
ಉಂಬ್ಳೆಬೈಲು ಸರ್ಕಲ್’ನಿಂದ ಕೈದೊಟ್ಲು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಆನೆ ಪ್ರತ್ಯಕ್ಷವಾಗಿದೆ. ದಿಢೀರ್ ಆನೆ ಬಂದಿದ್ದರಿಂದ ಜನರು ಬೆದರಿದ್ದಾರೆ. ಆನೆ ಮುಖ್ಯ ರಸ್ತೆಯಲ್ಲಿ ತೆರಳಿದ್ದು, ನೆರೆಹೊರೆಯವರು ತಮ್ಮ ರಕ್ಷಣೆಗಾಗಿ ಅಕ್ಕಪಕ್ಕದ ಮನೆ, ಅಂಗಡಿಗಳಿಗೆ ಹೋಗಿ ಸೇರಿಕೊಂಡಿದ್ದಾರೆ. ಇನ್ನು, ಕೆಲವರು ಬೈಕ್ ಮೂಲಕ ಆನೆಯನ್ನು ಹಿಂಬಾಲಿಸಿ ಮುಂದಿದ್ದವರನ್ನು ಎಚ್ಚರಿಸಿದ್ದಾರೆ.
ಉಂಬ್ಳೆಬೈಲು ಗ್ರಾಮದ ಸದಾನಂದ ಶೆಟ್ಟಿ ಎಂಬುವವರ ಮನೆ ಮುಂಭಾಗ ಆನೆ ಓಡಾಡುತ್ತಿರುವ ವಿಡಿಯೋ ಲಭ್ಯವಾಗಿದೆ. ಇಲ್ಲಿಂದ ಸ್ವಲ್ಪ ದೂರು ಸಾಗುವ ಆನೆ, ಕರೀಂ ಎಂಬುವವರ ಮನೆ ಪಕ್ಕದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದೊಳಗೆ ನುಗ್ಗುತ್ತದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ
ಇನ್ನು, ಬೆಳಗಿನ ಹೊತ್ತಿನಲ್ಲಿ ಊರೊಳಗೆ ಆನೆ ಪ್ರತ್ಯಕ್ಷವಾಗಿದ್ದರಿಂದ ಸ್ಥಳೀಯರು ಆತಂಕಗೊಂಡು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದರು. ಇವತ್ತು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಈ ವೇಳೆ ಆನೆಗಳ ಉಪಟಳದ ಕುರಿತು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲದೆ ಈ ಸಮಸ್ಯೆಯಿಂದ ಮುಕ್ತಿ ಕೊಡುಸುವಂತೆ ಮನವಿ ಮಾಡಿದರು.
ಹೊಲ, ಗದ್ದೆಗೆ ನುಗ್ಗುತ್ತಿದ್ದವು
ಉಂಬ್ಳೆಬೈಲು ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಹೊತ್ತು ಗೊತ್ತಿಲ್ಲದೆ ಆನೆ ಹಿಂಡು ಹೊಲ, ಗದ್ದೆ, ತೋಟಗಳಿಗೆ ನುಗ್ಗಿತ್ತಿವೆ. ಉಂಬ್ಳೆಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರಿಗೆರೆ ಗ್ರಾಮದಲ್ಲಿ ಆಗಾಗ ಜಮೀನಿಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿವೆ. ಇದರಿಂದ ಈ ಭಾಗದ ರೈತರು ತೀವ್ರ ನಷ್ಟ ಅನುಭವಿಸಿ ಕಂಗೆಟ್ಟು ಹೋಗಿದ್ದಾರೆ.
ಈ ಆನೆ ಹಿಂಡು ಉಂಬ್ಳೆಬೈಲು ರೇಂಜ್ ವ್ಯಾಪ್ತಿಯ ಲಕ್ಕಿನಕೊಪ್ಪ, ಉಂಬ್ಳೆಬೈಲು ಗ್ರಾಮ ಸುತ್ತಮುತ್ತ ಮತ್ತು ಭದ್ರಾ ಅರಣ್ಯ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಂಚಿರಿಸುತ್ತಿವೆ. ಒಮ್ಮೊಮ್ಮಗೆ ಗುಂಪಾಗಿ ಕಾಣಿಸುವ ಆನೆಗಳು, ಕೆಲವು ಭಾರಿ ಒಂಟಿಯಾಗಿ ಪ್ರತ್ಯಕ್ಷವಾಗುತ್ತಿವೆ. ಹಾಗಾಗಿ ಆನೆಗಳ ಸಂಖ್ಯೆಯ ಕುರಿತು ಸ್ಪಷ್ಟತೆ ಇಲ್ಲವಾಗಿದೆ. ಈಚೆಗೆ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಕ್ಯಾಂಪಸ್’ನಲ್ಲೂ ಆನೆಗಳು ಕಾಣಿಸಿಕೊಂಡು ಆತಂಕ ಮೂಡಿಸಿತ್ತು.
‘ಅರಣ್ಯ ಇಲಾಖೆಯವರು ಏನು ಮಾಡಲ್ಲ’
ಪದೇ ಪದೆ ಕಾಡಾನೆಗಳು ಪ್ರತ್ಯಕ್ಷವಾಗುತ್ತಿರುವುದು, ಬೆಳೆ ಹಾನಿ ಉಂಟು ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯವರು ಆನೆಗಳ ಉಪಟಳ ತಪ್ಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.
ಕಳೆದ ಎರಡು ವರ್ಷದಿಂದ ಈಚೆಗೆ ಆನೆಗಳ ಉಪಟಳ ಹೆಚ್ಚಾಗಿದೆ. ಆರಂಭದಲ್ಲಿ ಊರಿನ ಒಂದು ಭಾಗದಲ್ಲಿ ಮಾತ್ರ ಆನೆಗಳು ಕಾಣಿಸಿಕೊಂಡಿದ್ದವು. ಈಗ ಊರಿನ ಹಲವು ಕಡೆಗಳಲ್ಲಿ ಕಾಡಾನೆಗಳು ಓಡಾಡುತ್ತಿವೆ. ಹಾಗಾಗಿ ಜನರು ಮನೆ ಬಿಟ್ಟು ಹೊರಗೆ ಬರಲು ಹೆದರುವಂತಾಗಿದೆ.
ಇದನ್ನೂ ಓದಿ – ದುರ್ಗಿಗುಡಿ ಸುತ್ತಮುತ್ತ ಅಧಿಕಾರಿಗಳಿಂದ ದಾಳಿ, 23 ಪ್ರಕರಣ ದಾಖಲು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422