ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 FEBRUARY 2024
SHIMOGA : ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರೈತರೊಬ್ಬರಿಂದ ನಾಲ್ಕು ಬಾರಿ ತಲಾ 2 ಲಕ್ಷ ರೂ.ನಂತೆ ಒಟ್ಟು 8 ಲಕ್ಷ ರೂ. ಹಣ ಪಡೆದು ವಂಚಿಸಲಾಗಿದೆ. ಕೊನೆಗೆ ಕೆಲಸವು ಇಲ್ಲದೆ, ಹಣವನ್ನು ಹಿಂತಿರುಗಿಸದೆ ಇದ್ದಿದ್ದರಿಂದ ರೈತ ದೂರು ನೀಡಿದ್ದಾರೆ.
ಏನಿದು ಪ್ರಕರಣ?
ಶಿವಮೊಗ್ಗ ಗ್ರಾಮವೊಂದರ ರೈತರೊಬ್ಬರ (ಹೆಸರು, ಊರು ಗೌಪ್ಯ) ಮಗ ಡಿಪ್ಲೋಮಾ ಮುಗಿಸಿದ್ದು ಎಲ್ಲಿಯು ಕೆಲಸ ಸಿಕ್ಕಿರಲಿಲ್ಲ. ಬೆಂಗಳೂರಿನ ಯುವಕನೊಬ್ಬನಿಗೆ ರೈತನ ಊರಿನ ಯುವತಿಯನ್ನು ಮದುವೆ ಮಾಡಿಕೊಡಲಾಗಿತ್ತು. ಆ ಯುವಕ ಮತ್ತು ಆತನ ತಂದೆ ಆಗಾಗ ಊರಿಗೆ ಬರುತ್ತಿದ್ದರಿಂದ ರೈತನಿಗೆ ಪರಿಚಯವಾಗಿದ್ದರು. ರೈತ ತನ್ನ ಮಗನ ವಿಚಾರ ತಿಳಿಸಿದಾಗ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಅವರಿಬ್ಬರು ಭರವಸೆ ನೀಡಿದ್ದರು.
‘ಇನ್ನೇನು ಆರ್ಡರ್ ಆಗಿಯೇ ಬಿಡ್ತು’
ಬೆಂಗಳೂರಿನ ಯುವಕ ಮತ್ತು ಆತನ ತಂದೆ ರೈತನ ಮಗನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಮೊದಲ ಬಾರಿ 2019ರಲ್ಲಿ ರೈತನ ಮನೆಯಲ್ಲೆ 2 ಲಕ್ಷ ರೂ. ಹಣ ಪಡೆದಿದ್ದರು ಎಂದು ಆರೋಪಿಸಲಾಗಿದೆ. ಕೆಲ ದಿನದ ಬಳಿಕ ಪುನಃ 2 ಲಕ್ಷ ರೂ. ಹಣ ಪಡೆದಿದ್ದರು. ಕೆಲವೆ ದಿನದಲ್ಲಿ ‘ನಿಮ್ಮ ಮಗನಿಗೆ ನೇಮಕಾತಿ ಆದೇಶ ಬರಲಿದೆ’ ಎಂದು ನಂಬಿಸಿ ಮತ್ತೊಮ್ಮೆ 2 ಲಕ್ಷ ರೂ. ಪಡೆದುಕೊಂಡಿದ್ದರು. ಸ್ವಲ್ಪ ದಿನದ ಬಳಿ ‘ರೈಲ್ವೆ ಇಲಾಖೆಯಲ್ಲಿ ಎಲೆಕ್ಟ್ರಿಕಲ್ ಕೆಲಸ ಸಿಕ್ಕಿದೆ’ ಎಂದು ತಿಳಿಸಿ ಮತ್ತೆ 2 ಲಕ್ಷ ರೂ. ಪಡೆದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬರಲಿಲ್ಲ ಆದೇಶ, ಹಿಂತಿರುಗಲಿಲ್ಲ ಹಣ
ರೈಲ್ವೆ ಇಲಾಖೆಯಿಂದ ನೇಮಕಾತಿ ಆದೇಶ ಬಾರದ ಹಿನ್ನೆಲೆ ರೈತ, ಬೆಂಗಳೂರಿನ ತಂದೆ, ಮಗನನ್ನು ಪ್ರಶ್ನಿಸಿದ್ದಾರೆ. ಆಗ ಅವರು ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಬಹು ಸಮಯ ಕಾದರೂ 8 ಲಕ್ಷ ರೂ. ಹಣ ಮರಳಿಸಲಿಲ್ಲ. ಈ ಹಿನ್ನೆಲೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಮೆಗ್ಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ನೂತನ ಜಿಲ್ಲಾಧಿಕಾರಿ, ಏನೆಲ್ಲ ಪರಿಶೀಲಿಸಿದರು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422