ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 13 DECEMBER 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಆಕೆ ಸಕ್ರೆಬೈಲು ಬಿಡಾರದ ಪಾಲಿನ ಹಿರಿಯಜ್ಜಿ. ಬಿಡಾರದ ಪ್ರತಿ ಬೆಳವಣಿಗೆಯನ್ನು ಪ್ರತ್ಯಕ್ಷ ಕಂಡಾಕೆ. ಮೃಧು ಸ್ವಭಾವ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಪಾಲಿಗೆ ವಾತ್ಸಲ್ಯ, ಮಮತೆಯ ಗಣಿ. ಕಾರ್ಯಾಚರಣೆಗಿಳಿದರೆ ಆಕೆಯಷ್ಟು ಗಟ್ಟಿಗಿತ್ತಿಯನ್ನು ಕಂಡವರಿಲ್ಲ.
ಸಕ್ರೆಬೈಲು ಆನೆ ಬಿಡಾರದ ಹಿರಿಯ ಆನೆ ಗೀತಾ ಇವತ್ತು ಕೊನೆಯುಸಿರೆಳೆದಿದೆ. ಈಕೆಗೆ 85 ಅಥವಾ 86 ವರ್ಷ ವಯಸ್ಸು ಎಂದು ಅಂದಾಜು ಮಾಡಲಾಗುತ್ತಿದೆ. ಗೀತಾಳನ್ನು ಕಳೆದುಕೊಂಡು ಇಡೀ ಕ್ಯಾಂಪ್ ಶೋಕದಲ್ಲಿದೆ.
ಇದನ್ನೂ ಓದಿ | ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಹಿರಿಯ ಆನೆ ಸಾವು
PHOTO | ಗೀತಾಳ ಅಂತ್ಯಸಂಸ್ಕಾರದ ಸಿದ್ಧತೆಯಲ್ಲಿ ಸಿಬ್ಬಂದಿಗಳು
ಗೀತಾಳ ಬಗ್ಗೆ ಗೊತ್ತಿರಬೇಕಾದ 5 ಪಾಯಿಂಟ್ಗಳಿವು
- 1955 -56ರ ಖೆಡ್ಡಾ ಆಪರೇಷನ್ ವೇಳೆ ಕಾಕನಕೋಟೆಯಲ್ಲಿ ಈ ಹೆಣ್ಣಾನೆಯನ್ನು ಸೆರೆ ಹಿಡಿಯಲಾಯಿತು.
- ದಾಖಲೆಗಳ ಪ್ರಕಾರ 1964ರಲ್ಲಿ ಗೀತಾ ಆನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ತಂದು ಬಿಡಲಾಯಿತು. ಆಗ ಆನೆಗೆ ಸುಮಾರು 25 ವರ್ಷ ಎಂದು ಅಂದಾಜಿಸಲಾಗಿದೆ.
- ಗೀತಾಗೆ ಎಂಟು ಮಕ್ಕಳು. ದಾಖಲೆಗಳ ಪ್ರಕಾರ ಐದು ಆನೆಯ ಲೆಕ್ಕ ಸಿಕ್ಕಿದೆ. ರಂಗ (ಕೆಲ ದಿನದ ಹಿಂದೆ ಸಕ್ರೆಬೈಲು ಬಳಿ ಕಾಡಾನೆ ದಾಳಿಗೆ ಮೃತಪಟ್ಟಿದೆ), ನೇತ್ರಾ, ಆಲೆ ಆನೆಗಳು (ಸದ್ಯ ಸಕ್ರೆಬೈಲು ಕ್ಯಾಂಪ್ನಲ್ಲಿವೆ), ಲಕ್ಷ್ಮೀಶ (ಉಡುಪಿಗೆ ನೀಡಲಾಗಿದೆ), ಶಿವ (ಕೇರಳಕ್ಕೆ ನೀಡಲಾಗಿದೆ).
- ಕ್ಯಾಂಪ್ನ ಯಾವುದೇ ಆನೆ ಗರ್ಭವತಿಯಾದರೂ ಗೀತಾ ಆನೆಯದ್ದೇ ಆರೈಕೆ. ಡಿಲೆವರಿಗೆ ಆರೇಳು ತಿಂಗಳು ಇರುವ ಹೊತ್ತಿಗಂತೂ, ಗೀತಾ ಆನೆ ಹೆಚ್ಚು ಆರೈಕೆ ಮಾಡುತ್ತಿತ್ತು. ಗರ್ಭವತಿಯಾಗಿರುವ ಆನೆ ಬಳಿ ಉಳಿದ್ಯಾವ ಆನೆಗಳು ಸುಳಿಯದ ಹಾಗೆ ನೋಡಿಕೊಳ್ಳುತ್ತಿತ್ತು. ಆನೆಗಳು ಮರಿ ಹಾಕಿದ ಮೇಲೆ ಬಾಣಂತನದ ವಿಚಾರದಲ್ಲೂ, ಗೀತಾ ಜೊತೆಗಿರಬೇಕು. ಮರಿಗಳ ಲಾಲನೆ ಪಾಲನೆಯಲ್ಲೂ ಈಕೆ ನಿಪುಣೆ. ಕುಂತಿ, ಭಾನುಮತಿ, ನೇತ್ರಾಗೆ ಬಾಣಂತನ ಮಾಡಿದ್ದೇ ಗೀತಾ.
- ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಧೈರ್ಯವಾಗಿ ಭಾಗವಹಿಸುತ್ತಿತ್ತು. ಕಾಡಾನೆ ಎಷ್ಟೇ ಕೆರಳಿದ್ದರೂ, ಕುಮ್ಕಿ ಆನೆಗಳ ಸಾಲಿನಲ್ಲಿ ಮುಂದೆ ನಿಲ್ಲುತ್ತಿದ್ದದ್ದು ಗೀತಾ. ವೈದ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆಗೆ ಅರಿವಳಿಗೆ ಮದ್ದು ಶೂಟ್ ಮಾಡುವಷ್ಟು ಹತ್ತಿರದವರೆಗೆ ಕಾಡಾನೆಯನ್ನು ಕರೆತರುವ ಚಾಕಚಕ್ಯತೆ ಈ ಹಿರಿಯ ಆನೆಗಿತ್ತು.
ಇದನ್ನೂ ಓದಿ | ಸಕ್ರೆಬೈಲು ಬಿಡಾರದ ರಂಗನ ಮೇಲೆ ಕಾಡಾನೆಗಳ ದಾಳಿ, ಸ್ಥಳದಲ್ಲೇ ಸಾವು
ಹಿರಿಯ ಆನೆಯನ್ನು ಕಳೆದುಕೊಂಡು ಸಕ್ರೆಬೈಲು ಆನೆ ಬಿಡಾರ ದುಃಖದಲ್ಲಿದೆ. ರಾಜ್ಯದ ಉಳಿದ್ಯಾವ ಬಿಡಾರದಲ್ಲೂ ಗೀತಾಳಷ್ಟು ವಯಸ್ಸಿನ ಆನೆಗಳು ಇಲ್ಲ. ಹಾಗಾಗಿ ಈಕೆ ರಾಜ್ಯದ ಎಲ್ಲಾ ಅರಣ್ಯಾಧಿಕಾರಿಗಳಿಗು ಪರಿಚಯ. ಗೀತಾ ಇನ್ನಿಲ್ಲ ಎಂಬ ವಿಚಾರ ರಾಜ್ಯದ ಅರಣ್ಯ ಇಲಾಖೆಗೆ ನೋವುಂಟು ಮಾಡಿದೆ.
ಮಾಹಿತಿ : ನಾಗರಾಜ್, ಡಿಎಫ್ಓ, ಶಿವಮೊಗ್ಗ ವನ್ಯಜೀವಿ ವಿಭಾಗ | ಡಾ.ವಿನಯ್, ವನ್ಯಜೀವಿ ವೈದ್ಯರು
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]